ಮರ್ಯಾದಾ ಹತ್ಯೆ: ಯುವಕ-ಯುವತಿಯ ಕೈಕಾಲು ಕಟ್ಟಿ ಜೀವಂತವಾಗಿ ಕಾವೇರಿ ನದಿಗೆ ಎಸೆದರು !

Update: 2018-11-17 11:42 GMT

ಮಂಡ್ಯ, ನ. 17: ಜಿಲ್ಲೆಯ ಶಿವನಸಮುದ್ರದಲ್ಲಿ ಯುವಕ ಹಾಗೂ ಯುವತಿಯ ದೇಹ ಪತ್ತೆಯಾದ ಪ್ರಕರಣದ ಜಾಡು ಹಿಡಿದ ಮಂಡ್ಯ ಪೊಲೀಸರಿಗೆ ಇದು ಮರ್ಯಾದಾ ಹತ್ಯೆ ಎನ್ನುವುದು ಖಾತ್ರಿಯಾಗಿದೆ.

ಐದು ದಿನಗಳ ಹಿಂದೆ ಶಿವನಸಮುದ್ರದಲ್ಲಿ ಯುವಕನೊಬ್ಬನ ದೇಹ ಪತ್ತೆಯಾದರೆ, ಎರಡು ದಿನ ಬಳಿಕ ಯುವತಿಯ ಶವ ಅದೇ ಜಾಗದಲ್ಲಿ ತೇಲುತ್ತಿತ್ತು. ಇದು ಇಬ್ಬರನ್ನೂ ಜತೆಗೇ ಹತ್ಯೆ ಮಾಡಿರಬೇಕು ಎಂಬ ಶಂಕೆ ಮೂಡಿಸಿತ್ತು. ಪ್ರಕರಣದ ತನಿಖೆ ನಡೆಸಿದಾಗ, ಪುತ್ರಿ ಅನ್ಯ ಜಾತಿಯ ಯುವಕನನ್ನು ವಿವಾಹವಾದ್ದರಿಂದ ಕೋಪಗೊಂಡ ಯುವತಿಯ ತಂದೆಯೇ ಮಾಡಿದ ಮರ್ಯಾದಾ ಹತ್ಯೆ ಎಂಬ ವಿಷಯ ತಿಳಿದುಬಂದಿದೆ.

ಮೃತ ನಂದೀಶ್ (26) ಹಾಗೂ ಸ್ವಾತಿ (19) ಇಬ್ಬರೂ ತಮಿಳುನಾಡಿನವರು. ಇಬ್ಬರೂ ಕರ್ನಾಟಕದಲ್ಲಿ ಅವಿತುಕೊಂಡಿದ್ದರು. ಅದನ್ನು ಪತ್ತೆ ಮಾಡಿದ ಯುವತಿ ಕುಟುಂಬದವರು, ಇಬ್ಬರ ಕೈಕಾಲು ಕಟ್ಟಿ ಜೀವಂತವಾಗಿ ನದಿಗೆ ಎಸೆದರು ಎಂದು ಹೇಳಲಾಗಿದೆ.

ನಂದೀಶ್ ಹಾಗೂ ಸ್ವಾತಿ ಇಬ್ಬರೂ ಕೃಷ್ಣಗಿರಿ ಜಿಲ್ಲೆಯ ಚೌಡಗೌಡನಹಳ್ಳಿ ಗ್ರಾಮದವರು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಭಿನ್ನ ಜಾತಿಗೆ ಸೇರಿದವರಾದರೂ ವಿವಾಹವಾಗಲು ಮುಂದಾದರು. ನಂದೀಶ ದಲಿತನಾದ್ದರಿಂದ ಈ ಸಂಬಂಧಕ್ಕೆ ಇಬ್ಬರ ಕುಟುಂಬಗಳಲ್ಲೂ ಒಪ್ಪಿಗೆ ಇರಲಿಲ್ಲ. ಮೂರು ತಿಂಗಳ ಹಿಂದೆ ರಹಸ್ಯ ವಿವಾಹವಾಗಿ ಇಬ್ಬರೂ ಊರು ಬಿಟ್ಟಿದ್ದರು. ಹೊಸೂರಿನಲ್ಲಿ ಜೀವನ ಸಾಗಿಸುತ್ತಿದ್ದ ಇಬ್ಬರೂ ನ. 10ರವರೆಗೆ ಸಂತೋಷದಿಂದ ಇದ್ದರು. ಅಂದು ಕಮಲಹಾಸನ್ ಅವರ ಭಾಷಣ ಕೇಳಲು ಆ ಸಮಾರಂಭಕ್ಕೆ ಹೋದರು.

ಸ್ವಾತಿಯ ದೂರದ ಸಂಬಂಧಿಕರು ಕೂಡಾ ಈ ಸಮಾರಂಭದಲ್ಲಿ ಭಾಗವಹಿಸಿದ್ದು, ದಂಪತಿಯನ್ನು ನೋಡಿದ್ದಾರೆ. ತಕ್ಷಣ ಯುವತಿಯ ತಂದೆ ಶ್ರೀನಿವಾಸನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ದಂಪತಿಯ ಹುಡುಕಾಟದಲ್ಲಿ ಶ್ರೀನಿವಾಸ ಇತರ ಸಂಬಂಧಿಕರ ಜತೆ ಆಗಲೇ ಹೊಸೂರಿನಲ್ಲಿದ್ದ. ಸಭೆ ಮುಗಿದ ತಕ್ಷಣ ಶ್ರೀನಿವಾಸ ಮತ್ತು ಇತರರು ದಂಪತಿಯನ್ನು ಸುತ್ತುವರಿದಾಗ ವಾಗ್ವಾದ ನಡೆಯಿತು. ಪೊಲೀಸ್ ಠಾಣೆಯ ಹೊರಗೆ ಪ್ರಕರಣ ಇತ್ಯರ್ಥ ಮಾಡಿಕೊಳ್ಳೋಣ ಎಂದು ದಂಪತಿಯ ಮನವೊಲಿಸಿದರು.

ಆದರೆ ಶಿವನಸಮುದ್ರಕ್ಕೆ ಕರೆದೊಯ್ದು, ಶ್ರೀನಿವಾಸ ಹಾಗೂ ಇತರರು ನಂದೀಶನನ್ನು ಥಳಿಸಿದರು. ನ. 11ರಂದು ಮುಂಜಾನೆ 3ರ ಸುಮಾರಿಗೆ ನಂದೀಶನ ಕೈಕಾಲು ಕಟ್ಟಿ ನದಿಗೆ ಎಸೆದಿದ್ದನ್ನು ಸ್ವಾತಿ ನೋಡಿದ್ದಾಳೆ. ಕೆಲವೇ ನಿಮಿಷಗಳಲ್ಲಿ ಸ್ವಾತಿಗೂ ಅದೇ ಗತಿಯಾಗಿದೆ. ಆಕೆಯ ದುಪ್ಪಟದಿಂದ ಆಕೆಯ ಕೈಕಾಲು ಕಟ್ಟಿ ಎಸೆದಿದ್ದಾಗಿ ಶ್ರೀನಿವಾಸ ಒಪ್ಪಿಕೊಂಡಿದ್ದಾನೆ.

ಮಂಡ್ಯ ಪೊಲೀಸರು ತಮಿಳುನಾಡಿನ ಕೆಲ ಠಾಣೆಗಳು ಸೇರಿದಂತೆ ಅಕ್ಕಪಕ್ಕದ ಎಲ್ಲ ಠಾಣೆಗಳಲ್ಲಿ ಅಪರಿಚಿತ ಶವಗಳ ಫೋಟೊಗಳನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಮಾಹಿತಿ ಲಭ್ಯವಾಗಿದ್ದು, ಈ ಆಧಾರದಲ್ಲಿ ಕೃಷ್ಣಗಿರಿಗೆ ತೆರಳಿ ಯುವತಿಯ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬಹಿರಂಗವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News