ಶಿವಮೊಗ್ಗ: ಪತ್ನಿಯ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಹತ್ಯೆ; ಪತಿಯ ಬಂಧನ

Update: 2018-11-17 12:02 GMT

ಶಿವಮೊಗ್ಗ, ನ.17: ಪತ್ನಿಯ ತಲೆ ಮೇಲೆ ಸಿಲಿಂಡರ್ ಎತ್ತಿ ಹಾಕಿ ಹತ್ಯೆ ನಡೆಸಿದ ಆರೋಪದ ಮೇರೆಗೆ ಪತಿಯನ್ನು ಪೊಲೀಸರು ಬಂಧಿಸಿದ ಘಟನೆ ಶನಿವಾರ ಮುಂಜಾನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ತಾಲೂಕಿನ ಹಾಲಲಕ್ಕವಳ್ಳಿ ಗ್ರಾಮದ ನಿವಾಸಿ, ಬಾರ್ ಬೈಂಡಿಂಗ್ ಕೆಲಸ ಮಾಡುವ ಮಂಜುನಾಥ್ (40) ಬಂಧಿತ ಆರೋಪಿ. ಮಾಲಾ (30) ಕೊಲೆಗೀಡಾದ ಪತ್ನಿಯಾಗಿದ್ದಾಳೆ. ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. 

ಘಟನೆ ಹಿನ್ನೆಲೆ: ಮಂಜುನಾಥ್ ಹಾಗೂ ಮಾಲಾ ಕಳೆದ ಸುಮಾರು 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಇವರಿಬ್ಬರು ಬಾರ್ ಬೈಂಡಿಂಗ್ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಹಾಲಲಕ್ಕವಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಇವರಿಗೆ, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಕೌಟಂಬಿಕ ಕಾರಣಗಳ ಹಿನ್ನೆಲೆಯಲ್ಲಿ ದಂಪತಿಯ ನಡುವೆ ನಿರಂತರವಾಗಿ ಗಲಾಟೆಯಾಗುತ್ತಿತ್ತು. 

ಈ ಕಾರಣದಿಂದ ಮಾಲಾರವರು ಪತಿಯನ್ನು ತೊರೆದು ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದಳು. ಈ ಮಾಹಿತಿ ಅರಿತ ಮಂಜುನಾಥ್ ಶುಕ್ರವಾರ ರಾತ್ರಿ ಮಾಲಾ ತಂಗಿದ್ದ ಮನೆಗೆ ಆಗಮಿಸಿದ್ದಾನೆ. ದಂಪತಿಯ ನಡುವೆ ಕಲಹವಾಗಿದೆ. ಮದ್ಯದ ನಶೆಯಲ್ಲಿದ್ದ ಮಂಜುನಾಥನು ಪತ್ನಿಯ ಮೇಲೆ ಹಲ್ಲೆ ನಡೆಸಿ, ಸಣ್ಣ ಸಿಲಿಂಡರೊಂದನ್ನು ತಲೆ ಮೇಲೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ. 

ಪರ ಪುರುಷನೋರ್ವನ ಜೊತೆ ಪತ್ನಿ ಹೊಂದಿದ್ದ ಅನೈತಿಕ ಸಂಬಂಧದ ಕಾರಣದಿಂದಲೇ ತಾನು ಈ ಕೃತ್ಯ ನಡೆಸಿದ್ದಾಗಿ ಆರೋಪಿಯು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ಪೊಲೀಸರ ತನಿಖೆಯ ನಂತರವಷ್ಟೆ ಸತ್ಯಾಂಶ ಏನೆಂಬುವುದು ತಿಳಿದುಬರಬೇಕಾಗಿದೆ. 

ಪೊಲೀಸ್ ಠಾಣೆಗಳ ಸುತ್ತು ಹಾಕಿದ ಆರೋಪಿ!
ತಾನು ಪತ್ನಿಯ ಕೊಲೆ ಮಾಡಿದ್ದಾಗಿ ಸ್ವತಃ ಆರೋಪಿ ಮಂಜುನಾಥನು ನಗರದ ಎರಡ್ಮೂರು ಪೊಲೀಸ್ ಠಾಣೆಗಳಿಗೆ ಎಡತಾಕಿದ ಘಟನೆ ಕೂಡ ನಡೆದಿದೆ ಎನ್ನಲಾಗಿದೆ. ಪತ್ನಿಯ ಹತ್ಯೆ ನಡೆಸಿದ ನಂತರ ಆರೋಪಿಯು ನೇರವಾಗಿ ಪೊಲೀಸ್ ಠಾಣೆಯೊಂದಕ್ಕೆ ತೆರಳಿದ್ದಾನೆ. ಅಲ್ಲಿನ ಪೊಲೀಸರಿಗೆ ತಾನು ಪತ್ನಿಯ ಹತ್ಯೆ ನಡೆಸಿದ್ದು, ಬಂಧಿಸುವಂತೆ ತಿಳಿಸಿದ್ದಾನೆ. ಮದ್ಯ ಸೇವಿಸಿದ್ದ ಹಾಗೂ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಈತನ ಮಾತನ್ನು ಕರ್ತವ್ಯದಲ್ಲಿದ್ದ ಪೊಲೀಸರು ನಂಬಿಲ್ಲ. ಸುಳ್ಳು ಹೇಳುತ್ತಿದ್ದಾನೆಂದು ಹೇಳಿ ಠಾಣೆಯಿಂದ ಹೊರ ಕಳುಹಿಸಿದ್ದಾರೆ ಎನ್ನಲಾಗಿದೆ. 

ಮತ್ತೆ ಆರೋಪಿಯು, ಖಾಸಗಿ ಬಸ್ ನಿಲ್ದಾಣ ಸಮೀಪದ ಪೊಲೀಸ್ ಠಾಣೆಯೊಂದಕ್ಕೆ ಆಗಮಿಸಿದ್ದಾನೆ. ತಾನು ಪತ್ನಿಯ ಕೊಲೆ ಮಾಡಿದ್ದೇನೆ, ಬಂಧಿಸಿ ಎಂದಿದ್ದಾನೆ. ಆರೋಪಿ ತಿಳಿಸಿದ ಸ್ಥಳದ ಆಧಾರದ ಮೇಲೆ ಅಲ್ಲಿನ ಪೊಲೀಸರು, ಆತನನ್ನು ವಿನೋಬನಗರ ಠಾಣೆಗೆ ಕಳುಹಿಸಿದ್ದಾರೆ. ವಿನೋಬನಗರ ಠಾಣೆ ಪೊಲೀಸರು ಆರೋಪಿಯೊಂದಿಗೆ ಬೊಮ್ಮನಕಟ್ಟೆ ಬಡಾವಣೆಗೆ ಆಗಮಿಸಿದ್ದಾರೆ. ಆತ ಹೇಳಿದ ಮನೆಗೆ ತೆರಳಿ ಪರಿಶೀಲಿಸಿದಾಗ ಹತ್ಯೆ ಪ್ರಕರಣ ನಿಜವೆಂಬುವುದು ಗೊತ್ತಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News