ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಸರಕಾರದ ನೆರವು: ಸಚಿವ ಆರ್.ವಿ.ದೇಶಪಾಂಡೆ

Update: 2018-11-17 12:45 GMT

ಧಾರವಾಡ, ನ.17: ಕನ್ನಡ ಸಾಹಿತ್ಯ ಪರಿಷತ್ ನಿರ್ಧಾರದಂತೆ ಜನವರಿ 4, 5 ಹಾಗೂ 6 ರಂದು ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು. ಬಜೆಟ್ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಳುಹಿಸಲಾಗಿದೆ. ಸರಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ 2ನೇ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮ್ಮೇಳನ ಸ್ಥಳದ ಬಗ್ಗೆ ಕೆಲವು ಗೊಂದಲ, ಭಿನ್ನಾಭಿಪ್ರಾಯಗಳಿರುವುದು ತಿಳಿದಿದೆ. ಪ್ರಜಾ ಸತ್ತಾತ್ಮಕವಾಗಿ ಆಲೋಚಿಸಿ ಜನರಿಗೆ ಅನುಕೂಲವಾಗುವ ಹಾಗೂ ಸಮ್ಮೇಳನ ಯಶಸ್ವಿಗೆ ಸೂಕ್ತವಾಗುವ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಅವರು ಹೇಳಿದರು.

50 ಸಾವಿರದಿಂದ 1 ಲಕ್ಷ ಜನರು ಪ್ರತಿದಿನ ಸೇರುವ ನಿರೀಕ್ಷೆ ಇರುವುದರಿಂದ ಸೂಕ್ತವಾಗುವ ಸ್ಥಳಾವಕಾಶ ಬೇಕು. ಸಮ್ಮೇಳನ ಯಶಸ್ವಿಯಾಗಲು ಇದು ಅಗತ್ಯ. ಊಟ ಮತ್ತು ಅದರ ಸ್ಥಳದ ಬಗ್ಗೆ ಪ್ರಜಾಸತ್ತಾತ್ಮಕವಾಗಿ ಸ್ಥಳೀಯರು, ಸಾಹಿತಿಗಳ ಆಶಯದಂತೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೇಶಪಾಂಡೆ ತಿಳಿಸಿದರು.

ಈಗಾಗಲೇ ರಚಿತವಾಗಿರುವ ಉಪಸಮಿತಿಗಳ ಅಧ್ಯಕ್ಷರು, ಕಾರ್ಯಾಧ್ಯಕ್ಷರು, ಕಾರ್ಯದರ್ಶಿಗಳು ಇಂದಿನಿಂದಲೇ ಸಮರೋಪಾದಿಯಲ್ಲಿ ಕಾರ್ಯೋನ್ಮುಖರಾಗಬೇಕು. ಸರಕಾರ ಅನುದಾನ ಒದಗಿಸುತ್ತದೆ. ಸಮಿತಿಗಳು ಸೂಕ್ತ ನಿರ್ಣಯ ಕೈಗೊಂಡು ಪಾರದರ್ಶಕವಾಗಿ ಅನುಷ್ಠಾನಕ್ಕೆ ತರಬೇಕು. ಸ್ಥಳ ತೀರ್ಮಾನದ ಬಗ್ಗೆ ಯಾವುದೇ ಪ್ರತಿಷ್ಠೆ ಇಲ್ಲ, ಜನರ ಅನುಕೂಲತೆಯೇ ಮುಖ್ಯ ಎಂದು ಅವರು ಹೇಳಿದರು.

ಜಿ.ಪಂ.ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಸಿ.ಎಸ್.ಶಿವಳ್ಳಿ, ಶ್ರೀನಿವಾಸ ಮಾನೆ, ಎಸ್.ವಿ.ಸಂಕನೂರ, ಪ್ರದೀಪ್ ಶೆಟ್ಟರ್ ತಮ್ಮ ಅಭಿಪ್ರಾಯಗಳನ್ನು ಸಭೆಯಲ್ಲಿ ತಿಳಿಸಿದರು. ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಸಾರ್ವಜನಿಕರು ತಮ್ಮ ಸಲಹೆಗಳನ್ನು ಸಭೆಗೆ ನೀಡಿದರು.

ಲಾಂಛನ ಹಾಗೂ ವೆಬ್‌ಸೈಟ್ ಬಿಡುಗಡೆ: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರೂಪಿಸಲಾಗಿರುವ ಲಾಂಛನ ಹಾಗೂ ವೆಬ್‌ಸೈಟ್‌ನ್ನು ಸಚಿವರು ಲೋಕಾರ್ಪಣೆ ಮಾಡಿದರು. ಕನ್ನಡ ಧ್ವಜ, ಭುವನೇಶ್ವರಿ ಭಾವಚಿತ್ರ, ಕನ್ನಡ ಸಾಹಿತ್ಯ ಪರಿಷತ್ ಲಾಂಛನ, ಕರ್ನಾಟಕ ಕಾಲೇಜು, ಕರ್ನಾಟಕ ವಿ.ವಿ., ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ಪ್ರತಿಮೆಗಳನ್ನು ಲಾಂಛನ ಒಳಗೊಂಡಿದೆ.

ಸಂಗೀತದ ವಾದ್ಯಪರಿಕರಗಳು, ಪುಸ್ತಕ, ಲೇಖನಿಗಳನ್ನು ಆಕರ್ಷಕವಾಗಿ ಸಂಯೋಜಿಸಿ ಸ್ಥಳೀಯ ಕಲಾವಿದ ಮಹೇಶ್ ಪತ್ತಾರ ರಚಿಸಿದ ಈ ಲಾಂಛನವನ್ನು ತಜ್ಞರ ಸಮಿತಿ ಅಂತಿಮಗೊಳಿಸಿತ್ತು. ಸಮ್ಮೇಳನದ ಚಟುವಟಿಕೆಗಳ ಎಲ್ಲ ಮಾಹಿತಿಗಳನ್ನು ಸಾರ್ವಜನಿಕರಿಗೆ ಒದಗಿಸಲು www.abkssdwd.org ವೆಬ್‌ಸೈಟ್ ರೂಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉಪಮೇಯರ್ ಮೇನಕಾ ಹುರಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್‌ ಸಿಇಓ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಡಿಸಿಪಿ ಬಿ.ಎಸ್.ನೇಮಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News