ಐದು ವರ್ಷಗಳಲ್ಲಿ 20 ಸಾವಿರ ಪೊಲೀಸ್ ಹುದ್ದೆ ಭರ್ತಿ: ಡಾ.ಜಿ.ಪರಮೇಶ್ವರ್

Update: 2018-11-17 14:03 GMT

ಬೆಳಗಾವಿ, ನ.17: ಮುಂದಿನ ಐದು ವರ್ಷಗಳಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 20 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಶನಿವಾರ ನಗರದ ಬಿ.ಕೆ.ಕಂಗ್ರಾಳಿಯ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಮಹಿಳಾ ಮತ್ತು ಪುರುಷ ವಿಶೇಷ ಮೀಸಲು ಪೊಲೀಸ್ ಕಾನ್‌ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಳೆದ ವರ್ಷ 23 ಸಾವಿರ ಸಿಬ್ಬಂದಿಗಳನ್ನು ನೇಮಕ ಮಾಡಿದ್ದೇವೆ. ಈ ವರ್ಷ ನಾಲ್ಕು ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಿದ್ದೇವೆ. ಅದೇ ರೀತಿ ಒಟ್ಟಾರೆ ಮುಂದಿನ ಐದು ವರ್ಷಗಳಲ್ಲಿ 20 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದು ಅವರು ಹೇಳಿದರು.

ರಾಜ್ಯ ಪೊಲೀಸ್ ಇಲಾಖೆ ಇಡೀ ದೇಶದಲ್ಲಿ ಪ್ರಖ್ಯಾತಿ ಪಡೆದುಕೊಂಡಿದೆ. ಯಾವುದೇ ಸಂದರ್ಭದಲ್ಲಿ ರಾಜ್ಯದ ನಾಡು, ನುಡಿ, ಜಲದ ಹಿತ ಕಾಪಾಡುವುದರಲ್ಲಿ ರಾಜ್ಯ ಪೊಲೀಸ್ ಬಹಳ ಸಾಧನೆ ಮಾಡಿದೆ ಎಂದು ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಿಕ್ಷಣಾರ್ಥಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸಕಲ ತರಬೇತಿ ನೀಡಿದ್ದಾರೆ. ಈ ತರಬೇತಿಯು ರಾಜ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬೆಳಗಾವಿಯಲ್ಲಿ 362 ಪ್ರಶಿಕ್ಷಣಾರ್ಥಿಗಳು 9 ತಿಂಗಳು ತರಬೇತಿ ಪಡೆದು ಸೇವೆಗೆ ಸಿದ್ಧರಾಗಿರುವುದು ಪ್ರಮುಖವಾಗಿದೆ ಎಂದು ಅವರು ಹೇಳಿದರು.

ಪೊಲೀಸ್ ಇಲಾಖೆಯು ಆಧುನೀಕರಣಗೊಳ್ಳಬೇಕಿದೆ. ಹೊಸ ಹೊಸ ಸವಾಲುಗಳು ನಮ್ಮ ಎದುರು ಬರುತ್ತಿವೆ, ಅವುಗಳನ್ನು ಎದುರಿಸಲು ಸನ್ನದ್ಧರಾಗಬೇಕು. ಅದಕ್ಕೆ ಅಗತ್ಯವಿರುವ ವಿದ್ಯಾರ್ಹತೆಯು ಬೇಕಾಗುತ್ತದೆ ಎಂದು ಪರಮೇಶ್ವರ್ ತಿಳಿಸಿದರು.

ಇಡೀ ಪ್ರಪಂಚದಲ್ಲಿ ಸೈಬರ್‌ ಕ್ರೈಮ್ ಅವ್ಯಾಹತವಾಗಿ ನಡೆಯುತ್ತಿರುವುದನ್ನು ಗಮನಿಸಿ ಇನ್ಫೋಸಿಸ್ ಸಹಾಯದಿಂದ ಸೈಬರ್ ಕ್ರೈಮ್ ಕುರಿತಾಗಿ ಪೊಲೀಸ್ ಅಧಿಕಾರಿಗೆ ತರಬೇತಿ ಕೊಡುವಲ್ಲಿ ಸರಕಾರ ಚಿಂತನೆ ನಡೆಸಿದೆ ಎಂದು ಪರಮೇಶ್ವರ್ ತಿಳಿಸಿದರು. ಪ್ರಥಮ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ಬೃಹತ್ ಇಲಾಖೆಯನ್ನು ಬಹಳ ಶಿಸ್ತು, ಸಂಯಮ ಹಾಗೂ ದಕ್ಷತೆಯಿಂದ ಮುನ್ನಡೆಸಿ ದೇಶದ ಇತರ ಪೊಲೀಸ್ ಘಟಕಗಳಿಗೆ ಮಾದರಿಯಾಗಿದ್ದಾರೆ ಎಂದು ಪರಮೇಶ್ವರ್ ಮೆಚ್ಚುಗೆ ಸೂಚಿಸಿದರು.

ರಾಜ್ಯದ 1.06 ಲಕ್ಷ ಸಿಬ್ಬಂದಿಗೆ ಗೃಹ ನಿರ್ಮಿಸಿಕೊಡುವ ಜವಾಬ್ದಾರಿ ಸರಕಾರದ ಮೇಲಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಅಂಜಲಿ ನಿಂಬಾಳ್ಕರ್, ಶ್ರೀಮಂತ ಪಾಟೀಲ, ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಎಸ್ಪಿಸುಧೀರಕುಮಾರ ರೆಡ್ಡಿ, ಡಿಸಿಪಿಗಳಾದ ಸೀಮಾ ಲಾಟ್ಕರ್, ಮಹಾನಿಂಗ ನಂದಗಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News