ಅಮೆರಿಕದಿಂದ ಭಾರತ ಖರೀದಿಸಲಿದೆ ಜಲಾಂತರ್ಗಾಮಿ ನಿಗ್ರಹ ಹೆಲಿಕಾಪ್ಟರ್ !

Update: 2018-11-17 16:07 GMT

ಹೊಸದಿಲ್ಲಿ, ನ. 17: ಭಾರತ ಅಂದಾಜು 2 ಶತಕೋಟಿ ಅಮೆರಿಕ ಡಾಲರ್ ವೆಚ್ಚದ 24 ಬಹು ಉದ್ದೇಶಿತ ಎಂಎಚ್-60 ರೋಮಿಯೋ ಜಲಾಂತರ್ಗಾಮಿ ನಿಗ್ರಹ ಹೆಲಿಕಾಪ್ಟರ್‌ಗಳನ್ನು ಅಮೆರಿಕದಿಂದ ಕೋರಿದೆ ಎಂದು ರಕ್ಷಣಾ ಕೈಗಾರಿಕೆ ಮೂಲಗಳು ಶುಕ್ರವಾರ ತಿಳಿಸಿವೆ.

ದಶಕಗಳ ಹಿಂದೆಯೇ ಈ ಅಸಾಧಾರಣ ಜಲಾಂತರ್ಗಾಮಿ ಬೇಟೆ ಹೆಲಿಕಾಪ್ಟರ್‌ಗಳ ಅಗತ್ಯತೆ ಭಾರತಕ್ಕೆ ಇತ್ತು ಎಂದು ತಜ್ಞರು ಹೇಳಿದ್ದಾರೆ. ಈ ಒಪ್ಪಂದ ಕೆಲವು ತಿಂಗಳಲ್ಲಿ ಅಂತಿಮಗೊಳ್ಳಲಿದೆ ಎಂದು ಪ್ರಾದೇಶಿಕ ಶೃಂಗದ ನೇಪಥ್ಯದಲ್ಲಿ ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ಯಶಸ್ವಿಯಾಗಿ ನಡೆದ ಕೆಲವು ದಿನಗಳ ಬಳಿಕ ಅಧಿಕಾರಿಯೋರ್ವರು ತಿಳಿಸಿದ್ದಾರೆ. 24 ಬಹು ಉಪಯೋಗಿ ಎಂಎಚ್ 60 ರೋಮಿಯೋ ಸೀಹಾಕ್ ಹೆಲಿಕಾಪ್ಟರ್‌ಗಳ ‘ತುರ್ತು ಅಗತ್ಯತೆ’ ಬಗ್ಗೆ ಭಾರತ ಅಮೆರಿಕಕ್ಕೆ ಮನವಿ ಪತ್ರ ಬರೆದಿತ್ತು ಎಂದು ಮೂಲಗಳು ತಿಳಿಸಿವೆ. ಭಾರತದ ರಕ್ಷಣಾ ಅಗತ್ಯಗಳಿಗೆ ಟ್ರಂಪ್ ಆಡಳಿತ ಅಮೆರಿಕದ ಅತ್ಯಾಧುನಿಕ ಸೇನಾ ಶಸ್ತ್ರಾಸ್ತ್ರಗಳನ್ನು ಮುಕ್ತವಾಗಿರಿಸಿರುವುದರೊಂದಿಗೆ ಇತ್ತೀಚೆಗೆ ಭಾರತ ಹಾಗೂ ಅಮೆರಿಕದ ನಡುವಿನ ರಕ್ಷಣಾ ಒಪ್ಪಂದಗಳು ವೇಗ ಪಡೆದುಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ.

ಸಿಂಗಾಪುರದಲ್ಲಿ ನಡೆದ ಪ್ರಧಾನಿ ಮೋದಿ ಹಾಗೂ ಪೆನ್ಸೆ ಮಾತುಕತೆಯಲ್ಲಿ ದ್ವಿಪಕ್ಷೀಯ ರಕ್ಷಣಾ ಒಪ್ಪಂದ ಮುಖ್ಯ ಕಾರ್ಯ ಸೂಚಿಯಾಗಿತ್ತು ಎಂದು ಅವು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News