ದಿಢೀರ್ ಈರುಳ್ಳಿ ಬೆಲೆ ಕುಸಿತ: ರೈತರ ಪ್ರತಿಭಟನೆ

Update: 2018-11-17 16:33 GMT
ಸಾಂದರ್ಭಿಕ ಚಿತ್ರ

ಬೆಳಗಾವಿ/ಬೆಂಗಳೂರು, ನ.17: ಈರುಳ್ಳಿ ಬೆಲೆ ದಿಢೀರ್ ಕುಸಿತದಿಂದ ಕಂಗಾಲಾದ ರೈತರು, ರಾಜ್ಯದ ಬೆಳಗಾವಿ, ಬಾಗಲಕೋಟೆ ಸೇರಿದಂತೆ ವಿವಿಧೆಡೆ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ) ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಯಲ್ಲಿ ಶನಿವಾರ ನಡೆದ ಈರುಳ್ಳಿ ಹರಾಜು ಪ್ರಕ್ರಿಯೆಯಲ್ಲಿ ಖರೀದಿದಾರರು ದಿಢೀರನೆ ದರ ಕಡಿಮೆ ಮಾಡಿದ್ದರಿಂದ ಆಕ್ರೋಶಗೊಂಡ ರೈತರು ಹರಾಜು ಪ್ರಕ್ರಿಯೆ ಸ್ಥಗಿತಗೊಳಿಸಿದರಲ್ಲದೆ, ಮಾರುಕಟ್ಟೆಯ ಮುಖ್ಯ ಪ್ರವೇಶ ದ್ವಾರಕ್ಕೆ ಬೀಗ ಹಾಕಿದರು.

ಬಾಗಲಕೋಟೆ, ಬೆಳಗಾವಿ, ವಿಜಯಪುರ ಮತ್ತು ಧಾರವಾಡ ಜಿಲ್ಲೆಯಿಂದ ಬಂದಿದ್ದ ನೂರಾರು ರೈತರು 5 ಗಂಟೆಗಳ ಕಾಲ ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆ ನಡೆಸಿ ತಮ್ಮ ತೀವ್ರ ಅಸಮಾಧಾನ ಹೊರಹಾಕಿದರು. ತದನಂತರ, ಕಂಗ್ರಾಳಿ-ಬೆಳಗಾವಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಶುಕ್ರವಾರ ಕ್ವಿಂಟಾಲ್ ಈರುಳ್ಳಿ ದರ 800-1600ವರೆಗೆ ಇತ್ತು. ಆದರೆ, ಶನಿವಾರ ದಿಢೀರ್ ಎಂದು 150-500 ರೂ.ವರೆಗೆ ಕುಸಿತ ಕಂಡ ಕಾರಣ ಕಂಗಾಲಾದ ರೈತರು ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು.

ಆಕ್ರೋಶ: ಬೆಳಗಾವಿ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದರೂ ಎಪಿಎಂಸಿ ಆಡಳಿತ ಮಂಡಳಿ ಅಧ್ಯಕ್ಷ, ಸದಸ್ಯರು ಮಾತ್ರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಮಾರುಕಟ್ಟೆಯಲ್ಲಿ ಏಜೆಂಟರ ಹಿತ ಕಾಪಾಡುತ್ತಿದ್ದಾರೆ. ರೈತರಿಗಿಂತ ದಲ್ಲಾಳಿಗಳ ಹಿತವೇ ಎಪಿಎಂಸಿ ಅಧ್ಯಕ್ಷರಿಗೆ ಮುಖ್ಯವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರತಿಭಟನೆಯಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲ ಹೊತ್ತು ವ್ಯಾಪಾರ- ವಹಿವಾಟು ಸ್ಥಗಿತಗೊಂಡಿತ್ತು. ಸಂಚಾರ ವ್ಯವಸ್ಥೆ ಅಸ್ತವ್ಯಸ್ಥವಾಗಿತ್ತು. ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬೆಳಗಾವಿ ಎಪಿಎಂಸಿ ಠಾಣೆಯ ಪೊಲೀಸರು ರೈತರ ಮನವೊಲಿಸಲು ಯತ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News