ಶಿವಮೊಗ್ಗ: ಗಾಬರಿಯಿಂದ ರೈತ ಸಾವು ಪ್ರಕರಣ; ಆರ್‌ಎಫ್‌ಒ ವಿರುದ್ಧ ಕೊಲೆಯತ್ನದ ಪ್ರಕರಣ ದಾಖಲು

Update: 2018-11-17 17:09 GMT

ಶಿವಮೊಗ್ಗ, ನ. 17: ಜಿಲ್ಲೆಯ ಹೊಸನಗರ ತಾಲೂಕು ರಿಪ್ಪನ್‌ಪೇಟೆ ಸಮೀಪದ ಮಸರೂರು ಗ್ರಾಮದಲ್ಲಿ ಅಸ್ವಸ್ಥತೆಯಿಂದ ಮೃತಪಟ್ಟ ರೈತನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅರಣ್ಯ ಇಲಾಖೆ ಅಧಿಕಾರಿ ಹಾಗೂ ಇತರರ ವಿರುದ್ಧ ಕೊಲೆ ಯತ್ನದ ಕ್ರಿಮಿನಲ್ ಕೇಸ್ ದಾಖಲಾಗಿದೆ.

ಅರಸಾಳು ವಲಯ ಅರಣ್ಯಾಧಿಕಾರಿಯು ತೆರವು ಕಾರ್ಯಕ್ಕೆ 300 ಅರಣ್ಯ ಹಾಗೂ 250 ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿದ್ದಾರೆಂಬ ಮಾಹಿತಿ ತಿಳಿದು ತಮ್ಮ ತಂದೆ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ ಎಂದು ಮೃತ ರೈತ ಲಕ್ಷ್ಮಣಪ್ಪ(70) ಅವರ ಪುತ್ರ ನಾಗೇಶ್ ನೀಡಿದ ದೂರಿನ ಆಧಾರದ ಮೇಲೆ, ರಿಪ್ಪನ್‌ಪೇಟೆ ಠಾಣೆ ಪೊಲೀಸರು ಅರಸಾಳು ಅರಣ್ಯ ಇಲಾಖೆಯ ಆರ್‌ಎಫ್‌ಒ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಅಧಿಕಾರಿ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಅರಣ್ಯ ಇಲಾಖೆ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಸುಪ್ರೀಂಕೋರ್ಟ್ ಆದೇಶ, ಅರಣ್ಯ ಇಲಾಖೆ ಕಾನೂನು ರೀತಿಯ ಅರಣ್ಯ ಭೂಮಿ ಸಂರಕ್ಷಣೆಗೆ ಮುಂದಾದ ಇಲಾಖೆಯ ಅಧಿಕಾರಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ ಕ್ರಮ ಕಾನೂನು ಬಾಹಿರವಾಗಿದೆ. ಹೃದಯಾಘಾತದಿಂದ ಮೃತಪಟ್ಟ ರೈತನ ಪ್ರಕರಣಕ್ಕೂ, ಅರಣ್ಯ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ಆದರೆ ಒತ್ತಡಕ್ಕೆ ಮಣಿದು ಪೊಲೀಸರು ಕೇಸ್ ಹಾಕಿದ್ದಾರೆ ಎಂದು ಅರಣ್ಯ ಇಲಾಖೆಯು ದೂರಲಾರಂಭಿಸಿದೆ. ಪ್ರಸ್ತುತ ಅಧಿಕಾರಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದತಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿದೆ ಎಂದು ಹೆಸರೇಳಲಿಚ್ಛಿಸದ ಅರಣ್ಯ ಇಲಾಖೆ ಅಧಿಕಾರಿಯೋರ್ವರು ಆಗ್ರಹಿಸುತ್ತಾರೆ.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಂಸದ, ಶಾಸಕರು?
ಕೃಷಿಕ ಲಕ್ಷ್ಮಣಪ್ಪ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಮಸರೂರು ಗ್ರಾಮಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಆಗಮಿಸಿದ್ದರು. ರೈತರು ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ರೈತನ ಮೃತದೇಹವನ್ನು ಅರಸಾಳು ಅರಣ್ಯ ಇಲಾಖೆ ಕಚೇರಿ ಮುಂದಿಟ್ಟು ರೈತರು ನಡೆಸಿದ ಪ್ರತಿಭಟನೆಯಲ್ಲಿಯೂ ಇವರು ಭಾಗಿಯಾಗಿದ್ದರು. ಇದಕ್ಕೂ ಮುನ್ನ ಸಂಸದ ಹಾಗೂ ಶಾಸಕರು ರಿಪ್ಪನ್‌ಪೇಟೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಗುಪ್ತ ಸಮಾಲೋಚನೆ ಕೂಡ ನಡೆಸಿದ್ದರು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News