ಪ್ರಾಮಾಣಿಕ ದುಡಿಮೆಯ ಸಂಕಲ್ಪ ಮಾಡೋಣ: ಸಿಎಂ ಕುಮಾರಸ್ವಾಮಿ

Update: 2018-11-17 17:15 GMT

ದಾವಣಗೆರೆ, ನ.17: ಜನರ ಕಷ್ಟಗಳು ಮತ್ತು ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಕೆಲಸವನ್ನು ತಮ್ಮ ಸರಕಾರ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ನಗರದ ಎಸ್.ಎಸ್.ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ 29ನೇ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ರಾಜ್ಯಮಟ್ಟದ ಸಮ್ಮೇಳನ ಸಂಕಲ್ಪ-2018 ಚಿಂತನ ಮಂಥನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ರಾಜ್ಯದ ಸರಕಾರಿ ವೈದ್ಯರು ಒಂದೆಡೆ ಕಲೆತು ಉತ್ತಮ ಸೇವಾ ಸಂಕಲ್ಪತೊಡಲು ಇದೊಂದು ಸದವಕಾಶ. ಈ ಮೂಲಕ ಎಲ್ಲರೂ ಪ್ರಾಮಾಣಿಕ ದುಡಿಮೆಯ ಸಂಕಲ್ಪ ಮಾಡೋಣ ಎಂದರು.

ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯನ್ನು ವಿಲೀನಗೊಳಿಸಿ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ರೂ. 5 ಲಕ್ಷವರೆಗೆ ಹಾಗೂ ಎಪಿಎಲ್‌ನವರಿಗೆ ರೂ. 1.5 ಲಕ್ಷದವರೆಗೆ ಆರೋಗ್ಯ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಕೇಂದ್ರ 200 ರಿಂದ 300 ಕೋಟಿ ರೂ. ನೀಡಿದ್ದರೆ ರಾಜ್ಯ ಸರಕಾರ ಸುಮಾರು 900 ಕೋಟಿ ರೂ. ಅನುದಾನ ನೀಡಿದೆ. ದೇಶದಲ್ಲೇ ಆರೋಗ್ಯ ಇಲಾಖೆಯ ಯೋಜನೆಗಳಡಿ ರಾಜ್ಯ ಮುಂಚೂಣಿಯಲ್ಲಿದೆ. ರೋಗ ನಿರ್ಮೂಲನೆ, ಚಿಕಿತ್ಸೆಯಲ್ಲಿ ರಾಜ್ಯದ ಸರಕಾರಿ ವೈದ್ಯರ ಪಾತ್ರ ದೊಡ್ಡದಿದೆ ಎಂದರು.

ರಾಜ್ಯ ಸರಕಾರಿ ವೈದ್ಯರ ಸಂಘದಿಂದ ವಿವಿಧ 28 ಬೇಡಿಕೆಗಳನ್ನಿಟ್ಟಿದ್ದು, ಇದರಲ್ಲಿ ಮುಖ್ಯವಾಗಿ ಮೂಲಭೂತ ಸೌಲಭ್ಯಗಳು ಮತ್ತು ಕೆಲವು ಲೋಪದೋಷಗಳ ತಿದ್ದುಪಡಿ ಬಗ್ಗೆ ಇವೆ. ಮೂಲ ಸೌಕರ್ಯ, ಸಿಬ್ಬಂದಿ ಕೊರತೆ ನೀಗಿಸುವುದು, ಉನ್ನತ ಮಟ್ಟದ ಸೇವೆಗಳನ್ನು ನೀಡಲು ಅಗತ್ಯವಾದ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ಒಟ್ಟು 67 ಸಾವಿರ ಮಂಜೂರು, 43 ಸಾವಿರ ಭರ್ತಿ ಮತ್ತು 24 ಸಾವಿರ ಖಾಲಿ ಹುದ್ದೆ ಇದ್ದು, ಇವನ್ನು ತುಂಬುವ ಜೊತೆಗೆ ಇತರ ಸೌಕರ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಗ್ರಾಮೀಣ ವೈದ್ಯರ ಭತ್ತೆ ಹೆಚ್ಚಳ, ಡಿಎನ್‌ಬಿ ಕೋರ್ಸ್‌ಗೆ ಸರಕಾರಿ ವೈದ್ಯರಿಗೆ ಮೀಸಲಾತಿ, ಪರಿಣಿತರ ಸಮಿತಿಯಲ್ಲಿ ರಾಜ್ಯದ ಸರಕಾರಿ ವೈದ್ಯರಿಗೆ ಸ್ಥಾನ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇನೆ. ತಪ್ಪುಮಾಹಿತಿ ಬಿತ್ತರವಾಗದಂತೆ ಎಚ್ಚರ ವಹಿಸಿ ಎಂದು ಮಾಧ್ಯಮದವರಿಗೆ ಕೋರಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರಸ್ತುತ ಸರಕಾರದ ಅವಧಿಯಲ್ಲಿ 450 ವೈದ್ಯರ ನೇಮಕಾತಿ ಆಗಿದೆ. ಇನ್ನೂ ಹೆಚ್ಚಿನ ವೈದ್ಯರ ನೇಮಕಾತಿ ಆಗಬೇಕಿದ್ದು, ಆ ಸ್ಥಾನಗಳನ್ನು ಆದಷ್ಟು ಬೇಗ ತುಂಬಲು ಕ್ರಮ ಕೈಗೊಳ್ಳಲಾಗುವುದು. ಎಚ್1ಎನ್1 ಹೆಚ್ಚಳ ಬಗ್ಗೆ ಮುಖ್ಯಮಂತ್ರಿ ಕೊಂಚ ಅಸಮಾಧಾನ ತೋರಿದ್ದರು. ಆದರೆ ನಮ್ಮಲ್ಲಿ ಆ ಪ್ರಕರಣಗಳು ಬೇರೆ ರಾಜ್ಯಕ್ಕೆ ಹೋಲಿಸಿದರೆ ಕಡಿಮೆ ಇವೆ. ಗುಜರಾತ್‌ನಲ್ಲಿ 1,646 ಜನ ಸೋಂಕಿನಿಂದ ಬಳಲುತ್ತಿದ್ದರೆ 51 ಜನ ಸಾವನ್ನಪ್ಪಿದ್ದಾರೆ, ಆದರೆ ಕರ್ನಾಟಕದಲ್ಲಿ 674 ಸೋಂಕಿತರಿದ್ದು 19 ಮರಣ ಸಂಭವಿಸಿದೆ. ಇಂತಹ ಸೋಂಕುಗಳನ್ನು ತಡೆಗಟ್ಟಲು ಇಲಾಖೆ ಪ್ರಯತ್ನ ಮಾಡುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ರಂಗನಾಥ್.ಆರ್, ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗಣ್ಯರು ವೈದ್ಯರಿಗೆ ಪ್ರಶಸ್ತಿ ವಿತರಿಸಿದರು. ಶಾಸಕರಾದ ಎಸ್.ಎ.ರವೀಂದ್ರನಾಥ್, ಎಸ್.ರಾಮಪ್ಪ, ಜಿಪಂ ಅಧ್ಯಕ್ಷೆ ಜಯಶೀಲ ಕೆ.ಆರ್., ಜನಪ್ರತಿನಿಧಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಜಾವೀದ್ ಅಖ್ತರ್, ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಎಸ್. ಪುಷ್ಪರಾಜ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.ಅಶ್ವತಿ, ಕರಾಸವೈ ಸಂಘದ ಉಪಾಧ್ಯಕ್ಷ, ಪದಾಧಿಕಾರಿಗಳು, ವೈದ್ಯರು ಪಾಲ್ಗೊಂಡಿದ್ದರು.

2013-14ರಲ್ಲಿ ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿ-ಹೊರರೋಗಿ ಸಂಖ್ಯೆ 3.57 ಕೋಟಿ ಇತ್ತು. ಇದೀಗ ಇದರ ಸಂಖ್ಯೆ 5.80 ಕೋಟಿ ಆಗಿದೆ. ಸರಕಾರಿ ಆಸ್ಪತ್ರೆಗಳ ಮೇಲೆ ಜನರ ಭರವಸೆ ಹೆಚ್ಚಿದೆ. ಸೇವಾ ಸೌಲಭ್ಯಗಳು ಉತ್ತಮಗೊಂಡಿವೆ. ಬಿಪಿಎಲ್ ಕುಟುಂಬಕ್ಕೆ ರೂ. 5 ಲಕ್ಷದವರೆಗೆ ಉಚಿತ ಆರೋಗ್ಯ ಸೇವೆ ನೀಡಲಾಗುತ್ತಿದೆ. ಐಡಿಪಿ ಸೇವೆಯಲ್ಲ್ಲಿ ರಾಜ್ಯ 2ನೇ ಸ್ಥಾನ, ಶಿಶು ಮರಣ ಪ್ರಮಾಣದಲ್ಲಿ 3ನೇ ಸ್ಥಾನ, ಒಪಿಡಿ ಸೇವೆಯಲ್ಲಿ 3ನೇ ಸ್ಥಾನಗಳನ್ನು ರಾಷ್ಟ್ರಮಟ್ಟದಲ್ಲಿ ಪಡೆದಿದೆ.

-ಶಿವಾನಂದ ಪಾಟೀಲ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಹರಿದುಬಂದ ಮನವಿಗಳ ಮಹಾಪೂರ

ದಾವಣಗೆರೆ ನಗರಕ್ಕೆ ಸಿಎಂ ಆದ ನಂತರ ಮೊದಲ ಬಾರಿಗೆ ಆಗಮಿಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಿವಿಧ ಸಂಘಟನೆಗಳು, ರೈತ ಸಂಘಗಳು ಸೇರಿದಂತೆ ಅನೇಕರಿಂದ ಅಹವಾಲುಗಳ ಮಹಾಪೂರವೇ ಹರಿದುಬಂದಿತು. ರಾಷ್ಟ್ರೀಕೃತ ಬ್ಯಾಂಕಿನ ಸಾಲಮನ್ನಾ, ದಲ್ಲಾಳಿಗಳಿಂದ ವಂಚನೆಗೊಳಗಾದ ರೈತರಿಗೆ ನ್ಯಾಯ ಒದಗಿಸುವುದು, ನಿವೇಶನ ಮತ್ತು ವಸತಿರಹಿತ ಬಡವರಿಗೆ ನಿವೇಶನ ಸೌಲಭ್ಯ ನೀಡುವುದು, ಸದಾಶಿವ ವರದಿ ಜಾರಿ, ಡಿ ಗ್ರೂಪ್ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕದಿರುವುದು, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿ ಸೇರಿದಂತೆ ಹಲವು ಮನವಿಗಳನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಎಲ್ಲ ಮನವಿಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ, ಪರಿಶೀಲನೆ ಮಾಡುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News