ಪರಿಹಾರ ನೀಡಲು ಮನವಿ ಮಾಡಿದರೂ ಕೇಂದ್ರ ಸರಕಾರ ಸ್ಪಂದಿಸಿಲ್ಲ: ಸಿಎಂ ಕುಮಾರಸ್ವಾಮಿ

Update: 2018-11-17 17:40 GMT

ದಾವಣಗೆರೆ,ನ.17: ಮುಂಗಾರು ಮಳೆಯಿಂದಾಗಿ ಐದಾರು ಜಿಲ್ಲೆಗಳಲ್ಲಿ ಸಂಭವಿಸಿದ ಹಾನಿ ಸಂಬಂಧ ಕೇಂದ್ರ ಸರಕಾರಕ್ಕೆ ಪರಿಹಾರ ನೀಡಲು ಮನವಿ ಮಾಡಿದರೂ ಕೇಂದ್ರ ಸ್ಪಂದಿಸಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರದಿಂದ ರಾಜ್ಯದಲ್ಲಿ 16 ಸಾವಿರ ಕೋಟಿಗೂ ಅಧಿಕ ಬೆಳೆ ನಷ್ಟವಾದ ಹಿನ್ನೆಲೆಯಲ್ಲಿ ಕೇಂದ್ರ ಬರ ಅಧ್ಯಯನ ತಂಡ ರಾಜ್ಯ ಪ್ರವಾಸ ಕೈಗೊಂಡಿದ್ದು, ಅದರ ವರದಿ ಆಧರಿಸಿ ಕೇಂದ್ರ ಸರ್ಕಾರ ಯಾವ ರೀತಿ ಆರ್ಥಿಕ ನೆರವು ನೀಡುವುದೋ ಕಾದು ನೋಡುತ್ತೇನೆ ಎಂದು ತಿಳಿಸಿದರು. 

ರಾಜ್ಯದ 100ಕ್ಕೂ ಹೆಚ್ಚು ತಾಲೂಕು ಬರ ಪೀಡಿತವೆಂದು ಘೋಷಿಸಲ್ಪಟ್ಟಿದ್ದು, 16 ಸಾವಿರ ಕೋಟಿಗೂ ಅಧಿಕ ಬೆಳೆಹಾನಿಯಾದ ಬಗ್ಗೆ ಕಂದಾಯ ಸಚಿವರು ಕಳೆದ ಅ.30ರಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಿಗೆ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ ಎಂದರು. 

ಜಿಲ್ಲೆಗಳಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿದೆ. ನ.18ರಂದು ದಾವಣಗೆರೆ ಜಿಲ್ಲೆಗೂ ತಂಡವು ಭೇಟಿ ನೀಡಿ, ಇಲ್ಲಿನ ಬೆಳೆ ಹಾನಿ, ವಾಸ್ತವ ಪರಿಸ್ಥಿತಿ ಅಧ್ಯಯನ ನಡೆಸಲಿದೆ. ಬರ ಅಧ್ಯಯನ ತಂಡವು ಸ್ಥಳ ಪರಿಶೀಲಿಸಿ, ಕೇಂದ್ರಕ್ಕೆ ಏನು ವರದಿ ನೀಡುತ್ತದೋ ನೋಡೋಣ ಎಂದರು.  

ರಾಜ್ಯದ 100 ತಾಲೂಕುಗಳಲ್ಲಿ ಕುಡಿಯುವ ನೀರು ಪೂರೈಸಲು 50 ಲಕ್ಷ ರೂ. ವರೆಗಿನ ಕಾಮಗಾರಿ ಕೈಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಸೂಚಿಸಿದ್ದೇವೆ. ಎಲ್ಲಾ ಜಿಲ್ಲೆಗೂ ತಲಾ 25 ಲಕ್ಷದಂತೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು. 

ಪರಮೇಶ್ವರ್ ಹೇಳಿಕೆಯ ಅಪಾರ್ಥ ಬೇಡ: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲು ಸಮರ್ಥರಿರುವಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೂಡಾ ಒಬ್ಬರು. ತಾವೂ ಒಬ್ಬ ಅಪೇಕ್ಷಿತನೆಂದ ಪರಮೇಶ್ವರ್ ಹೇಳಿಕೆ ತಪ್ಪೇನಲ್ಲ. ಅವಕಾಶಗಳಿದ್ದಾಗ, ಪಕ್ಷದ ಹೈಕಮಾಂಡ್ ಒಪ್ಪಿದರೆ ತಾವೂ ಮುಖ್ಯಮಂತ್ರಿ ಸ್ಥಾನಕ್ಕೆ ಅಪೇಕ್ಷಿತನೆಂದು ಹೇಳಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು. 

ಆ್ಯಕ್ಸಿಸ್ ಬ್ಯಾಂಕ್ ವರ್ತನೆ ತಿದ್ದಿಕೊಳ್ಳಲಿ
ರಾಜ್ಯದ ರೈತರ ವಿಚಾರದಲ್ಲಿ ಪದೇಪದೇ ಉದ್ಧಟತನ ತೋರಿದರೆ, ಸರ್ಕಾರದ ಮಾತಿಗೆ ಬೆಲೆ ಕೊಡದಿದ್ದರೆ ನಾನೂ ಕೆಲವು ಅಸ್ತ್ರ ಪ್ರಯೋಗಿಸಬೇಕಾದೀತು. ಪಶ್ಚಿಮ ಬಂಗಾಳದ ಕೊಲ್ಕತ್ತಾ ನ್ಯಾಯಾಲಯ ಸೇರಿದಂತೆ ಅನ್ಯ ರಾಜ್ಯಗಳ ನ್ಯಾಯಾಲಯದಿಂದ ರಾಜ್ಯದ ರೈತರ ಬಂಧನಕ್ಕೆ ವಾರೆಂಟ್ ಹೊರಡಿಸುತ್ತಿರುವ ಆ್ಯಕ್ಸಿಸ್ ಬ್ಯಾಂಕ್ ತನ್ನ ವರ್ತನೆ ತಿದ್ದಿಕೊಳ್ಳುವುದು ಕ್ಷೇಮ. ಇಲ್ಲದಿದ್ದರೆ, ನಾವೂ ಕೆಲವು ಅಸ್ತ್ರ ಪ್ರಯೋಗಿಸಬೇಕಾದೀತು ಎಂದು ಸಿಎಂ ಎಚ್ಚರಿಸಿದರು. 

ಆಕ್ಸಿಸ್ ಬ್ಯಾಂಕ್ ಉದ್ಧಟತನ ಇದೇ ರೀತಿ ಮುಂದುವರಿದರೆ, ಆಕ್ಸಿಸ್ ಬ್ಯಾಂಕ್‍ ನಲ್ಲಿರುವ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಠೇವಣಿಯನ್ನು ವಾಪಾಸ್ ಪಡೆಯಬೇಕಾದೀತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News