ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ತೆರೆ: ಹಾವೇರಿ ಜಿಲ್ಲಾ ಪೊಲೀಸ್ ತಂಡಕ್ಕೆ ಸಮಗ್ರ ಪ್ರಶಸ್ತಿ

Update: 2018-11-17 17:42 GMT

ದಾವಣಗೆರೆ,ನ.17: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಪೂರ್ವ ವಲಯ ಮಟ್ಟದ ಪೊಲೀಸ್ ಕರ್ತವ್ಯ ಕೂಟಕ್ಕೆ ತೆರೆ ಬಿದ್ದಿದ್ದು, ಕೂಟದಲ್ಲಿ ನಡೆದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿಯನ್ನು ಹಾವೇರಿ ಜಿಲ್ಲೆ ಪೊಲೀಸ್ ತಂಡ ಬಾಚಿಕೊಂಡಿದೆ.

ಉತ್ತಮ ಶ್ವಾನ ದಳ ಪ್ರಶಸ್ತಿಯನ್ನು ಹಾಗೂ ಬೆಸ್ಟ್ ಎಎಸ್‍ಸಿ ಮತ್ತು ಬಿಡಿಡಿಎಸ್ ಪ್ರಶಸ್ತಿಯನ್ನು ದಾವಣಗೆರೆ ಪೊಲೀಸ್ ತಂಡ ಗಳಿಸಿದೆ. ಎಹೆಚ್‍ಸಿ ಅವರ ಸಿಂಧೂ ಎಂಬ ಶ್ವಾನವು ಉತ್ತಮ ಶ್ವಾನ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದು, ವಿಜೇತ ತಂಡಗಳಿಗೆ ಶುಕ್ರವಾರ ಸಂಜೆ ನಡೆದ ಕರ್ತವ್ಯ ಕೂಟ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೂರ್ವ ವಲಯ ಐಜಿಪಿ ದಯಾನಂದ್, ಪೊಲೀಸ್ ಕರ್ತವ್ಯ ಕೂಟವು ಅಪರಾಧ ತಡೆ ಮತ್ತು ಅಪರಾಧ ಪತ್ತೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು. ಪ್ರತಿ ವರ್ಷ ರಾಷ್ಟ್ರೀಯ ಮಟ್ಟದಲ್ಲಿ ಪೊಲೀಸ್ ಕರ್ತವ್ಯ ಕೂಟವನ್ನು ಆಯೋಜಿಸುತ್ತಿದ್ದು, ಈ ಕರ್ತವ್ಯ ಕೂಟದಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಅರೆ ಸೇನಾ ತುಕುಡಿಗಳು ಪಾಲ್ಗೊಳ್ಳಲಿದ್ದು, ಇದು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿರುವ ವೃತ್ತಿ ಪರತೆಯನ್ನು ಅನಾವರಣ ಗೊಳಿಸಲು ಸೂಕ್ತವಾದ ವೇದಿಕೆಯಾಗಿದೆ ಎಂದರು.

ರಾಷ್ಟ್ರೀಯ ಕರ್ತವ್ಯ ಕೂಟದ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕು, ಜಿಲ್ಲಾ ಹಾಗೂ ವಲಯ ಮಟ್ಟಗಳಲ್ಲಿ ಪೊಲೀಸ್ ಕರ್ತವ್ಯ ಕೂಟವನ್ನು ಆಯೋಜಿಸಿ, ಈ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ರಾಜ್ಯ ಮಟ್ಟದ ಕರ್ತವ್ಯ ಕೂಟಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು. ಅಲ್ಲೂ ಉತ್ತಮ ಪ್ರದರ್ಶನ ನೀಡಿ ಆಯ್ಕೆಯಾಗುವ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳಿಗೆ ವೃತ್ತಿ ಪರತೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಿ, ಬರುವ ಫೆಬ್ರವರಿ 12ರಿಂದ 16ರ ವರೆಗೆ ಲಕ್ನೋದಲ್ಲಿ ನಡೆಯುವ ರಾಷ್ಟ್ರೀಯ ಪೊಲೀಸ್ ಕರ್ತವ್ಯ ಕೂಟಕ್ಕೆ ಕಳುಹಿಸಿಕೊಡಲಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ಎಸ್‍ಪಿ ಚೇತನ್.ಆರ್, ಚಿತ್ರದುರ್ಗ ಎಸ್‍ಪಿ ಡಾ.ಅರುಣ್.ಕೆ, ಹಾವೇರಿ ಎಸ್‍ಪಿ ಪರಶುರಾಮ್, ದಾವಣಗೆರೆ ಹೆಚ್ಚುವರಿ ಎಸ್‍ಪಿ ಟಿ.ಜೆ.ಉದೇಶ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News