ಜಾತಿಯ ಹೆಸರಿನಲ್ಲಿ ವ್ಯಕ್ತಿಯನ್ನು ಗುರುತಿಸುವುದು ದುರಂತ: ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ

Update: 2018-11-17 18:10 GMT

ಮಡಿಕೇರಿ, ನ.17: ಯೋಗ್ಯತೆ ಮತ್ತು ಜ್ಞಾನಕ್ಕೆ ಬದಲಾಗಿ, ಜಾತಿ, ಮತ, ಧರ್ಮಗಳಿಂದ ವ್ಯಕ್ತಿಯನ್ನು ಗುರುತಿಸುವ ಕಾರ್ಯ ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿದ್ದು, ಇದು ದುರಂತವೆಂದು ಹಿರಿಯ ಸಾಹಿತಿಗಳು ಹಾಗೂ ವಕೀಲರಾದ ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಬೇಸರ ವ್ಯಕ್ತಪಡಿಸಿದ್ದಾರೆ.

ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ವತಿಯಿಂದ ನಗರದ ಕಾರುಣ್ಯ ಸದನದಲ್ಲಿ ನಡೆದ ‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಹೂವಿನ ತೋಟದಂತ್ತಿರುವ ಈ ಸಮಾಜದಲ್ಲಿ  ಪ್ರತಿಯೊಬ್ಬರು ಶ್ರೇಷ್ಠತೆಯನ್ನು ಗುರುತಿಸುವ ಕಾರ್ಯವನ್ನು ಮಾಡಬೇಕೆಂದರು. ಸಮುದ್ರಕ್ಕೆ ಅಭಿಮುಖವಾಗಿ ನಿಂತು ಹೊಗಳಿದರೆ ಸಮುದ್ರ ತನ್ನ ಮಟ್ಟವನ್ನೇನು ಹೆಚ್ಚಿಸಿಕೊಳ್ಳಲಾರದು. ಆದರೆ, ಅದೇ ಸಮುದ್ರದ ಅಗಾಧತೆಯನ್ನು ಮೈದುಂಬಿಕೊಳ್ಳುವ ಮನಸ್ಸು, ಶ್ರೇಷ್ಠತೆಯನ್ನು ಗುರುತಿಸುವ ಮನಸ್ಥಿತಿ ತಮ್ಮದಾದಾಗ ಮಾತ್ರ ನಾವು ಶ್ರೇಷ್ಠರಾಗುತ್ತಾ ಸಾಗುತ್ತೇವೆ ಎಂದು ಅಭಿಪ್ರಾಯಪಟ್ಟರು.

ಯೋಗ್ಯತೆಗೆ ಬದಲಾಗಿ ಟೇಸ್ಟಿ ಎನ್ನುವ ಮನೋಭಾವ ಹುಟ್ಟಿಕೊಂಡಿದೆ, ಧರ್ಮದ ಆಧಾರದಲ್ಲಿ ಮನುಷ್ಯನ ಹತ್ಯೆಯೇ ಟೇಸ್ಟಿಯಾಗಿ ಬಿಟ್ಟಿದೆ ಎಂದು ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ವಿಷಾದಿಸಿದರು. 

ನಾಡು ನೆನಪಿನಲ್ಲಿ ಇಡಬಹುದಾದ ಲೇಖಕರು ‘ಪ್ರವಾದಿ ಮುಹಮ್ಮದ್’ ಎನ್ನುವ ಪುಸ್ತಕದಲ್ಲಿ ಪ್ರವಾದಿಗಳ ಕುರಿತು ಮುಚ್ಚುಮರೆಗಳಿಲ್ಲದೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ರೀತಿ ಸಮಾಜದ ಎಲ್ಲಾ ಒಳಿತುಗಳನ್ನು ಅರಿತುಕೊಳ್ಳುವ ಮತ್ತು ಅದನ್ನು ಸ್ವೀಕರಿಸುವ ಮನೋಧರ್ಮ ನಮ್ಮದಾಗಬೇಕಾಗಿದೆ.  1500 ವರ್ಷಗಳ ಹಿಂದೆ ಜನರಿಗೆ ಪ್ರವಾದಿ ಮುಹಮ್ಮದ್ ಅವರು ನೀಡಿರುವ ಸಂದೇಶಗಳನ್ನು ಇಂದಿಗೂ ಅವುಗಳು ಪ್ರಸ್ತುತವೆಂದು ನಾವು ಹೇಳುತ್ತಿದ್ದೇವೆಯೇ ಹೊರತು ಇಂತಹ ಉತ್ತಮ ವಿಚಾರಗಳನ್ನು ಅನುಷ್ಟಾನ ಮಾಡುವ ಮನಸ್ಥಿತಿ ಮಾತ್ರ ನಮ್ಮದಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ವಿಶ್ವದ ಎಲ್ಲಾ ಒಳಿತುಗಳನ್ನು ಸ್ವೀಕರಿಸಬೇಕೆನ್ನುವ ಮಾತುಗಳ ನಡುವೆಯೂ ನಮ್ಮ ಹಿತಕ್ಕೆ ಬೇಕಾದುದನ್ನು ಮಾತ್ರ ನಾವು ಪಡೆಯುತ್ತಿದ್ದೇವೆ. ಪ್ರಸ್ತುತ ವ್ಯಕ್ತಿಯ ಗುಣಮಟ್ಟವನ್ನು ಅಳೆಯುವ ಮಾನದಂಡ ‘ಕೆಡುಕು’ ಆಗಿದ್ದರೆ ಉನ್ನತಿ ಹೇಗೆ ಸಾಧ್ಯವೆಂದು ಪ್ರಶ್ನಿಸಿದರು. ಆಕಾಶದಿಂದ ಧರೆಗಿಳಿದ ನೀರು ನಾನಾ ಕವಲುಗಳಾಗಿ ಹರಿದು ಅಂತಿಮವಾಗಿ ಸಮುದ್ರವನ್ನೆ ಸೇರುವಂತೆ ಎಲ್ಲಾ ಧರ್ಮಗಳ ಸಾರವೂ ಒಂದೇ ಆಗಿದೆ. ಆದರೆ ಇಂದು ತಮಗೆ ಬೇಕಾದ ಹಾಗೆ ಧರ್ಮವನ್ನು ಬಳಸಿಕೊಳ್ಳಲಾಗತ್ತಿದ್ದು, ಒಳಿತನ್ನು ಸ್ವೀಕರಿಸುವ ಮನಸ್ಥಿತಿ ಪ್ರತಿಯೊಬ್ಬರಲ್ಲೂ ಮೂಡಬೇಕೆಂದರು. 

ಸೌಹಾರ್ದತೆ ಇದ್ದಲ್ಲಿ ಮಾತ್ರ ಶಾಂತಿ ಪಾಲನೆ ಸಾಧ್ಯ, ಶತ್ರುವಿನೊಂದಿಗೆ ಸ್ನೇಹದಿಂದ ಇರುವುದೇ ದೊಡ್ಡ ಗುಣವಾಗುತ್ತದೆ. ಪ್ರತಿಯೊಂದರಲ್ಲೂ ಮತ್ತು ಪ್ರತಿಯೊಬ್ಬರಲ್ಲೂ ಸಹನೆಯನ್ನು ಸಾಧಿಸುವುದು ಕೂಡ ದೊಡ್ಡ ಗುಣವಾಗಿದೆ ಎಂದು ಕೆ.ಪಿ.ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು. ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳೇ ಆಗಿದ್ದರೂ ಇಂದಿಗೂ ಹೊಡಿ, ಬಡಿ, ಕೊಲ್ಲು ಎನ್ನುವ ಮಾತುಗಳೇ ಕೇಳಿ ಬರುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. 

‘ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ’ ಪುಸ್ತಕವನ್ನು ಅನಾವರಣಗೊಳಿಸಿದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರು ಹಾಗೂ ಸಾಹಿತಿಗಳಾದ ಶ್ರೀಧರ ಹೆಗಡೆ ಮಾತನಾಡಿ, ನಾನೇ ಶ್ರೇಷ್ಟ ಎನ್ನುವ ಮನೋಭಾವನೆ ಹೊಂದಿರುವ ಮಂದಿಗೆ ಈ ಪುಸ್ತಕ ಉತ್ತರವಾಗಬಲ್ಲುದು ಎಂದರು. ಮುಹಮ್ಮದ್ ಪೈಗಂಬರರ ಕುರಿತು 18ನೇ ಶತಮಾನದಿಂದೀಚೆಗಿನ ಶ್ರೇಷ್ಠ ವ್ಯಕ್ತಿಗಳ ಅನಿಸಿಕೆಗಳನ್ನು ಅತ್ಯಂತ ಸಂಕ್ಷಿಪ್ತವಾಗಿ ಕ್ರೋಢೀಕರಿಸಿ ಪುಸ್ತಕದಲ್ಲಿ ನೀಡುವ ಪ್ರಯತ್ನವನ್ನು ಶಾಂತಿ ಪ್ರಕಾಶನ ಸಂಸ್ಥೆ ಮಾಡಿದೆ. ಆ ಮೂಲಕ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಾಮಾಜಿಕವಾದ ಉತ್ತಮ ಬದುಕನ್ನು ಕಾಣಲು ಸಾಧ್ಯವಿದೆಯೆಂದು ಶ್ರೀಧರ ಹೆಗಡೆ ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮನೆ ಮನೆ ಕಾವ್ಯಗೋಷ್ಠಿ ಸಂಚಾಲಕ ವೈಲೇಶ್ ಪಿ.ಎಸ್., ಸಣ್ಣ ಪುಟ್ಟ ವಿಚಾರಗಳನ್ನು ಮುಂದಿಟ್ಟು ಸಾಮಾಜದ ಸ್ವಾಸ್ತ್ಯವನ್ನು ಕೆಡಿಸುವ ವಿಕೃತಿ ನಮ್ಮಲ್ಲಿ ಮೂಡಬಾರದೆಂದರು. ಇದೇ ಸಂದರ್ಭ ಸೌಹಾರ್ದತೆಯ ಕುರಿತಾದ ಕವನವೊಂದನ್ನು ಅವರು ವಾಚಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಮಂಗಳೂರು ವಲಯದ ಸಂಚಾಲಕ ಅಬ್ದುಸ್ಸಲಾಂ ಯು. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರವಾದಿ ಮುಹಮ್ಮದ್ ಅವರು ಜನಿಸಿದ ತಿಂಗಳಲ್ಲಿ ಅವರ ಸಂದೇಶ ಮತ್ತು ಅವರು ಪ್ರತಿಪಾದಿಸಿರುವ ಮಾನವೀಯ ಮೌಲ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ನವೆಂಬರ್ 16 ರಿಂದ 30 ರ ವರೆಗೆ ‘ಸೀರತ್ ಅಭಿಯಾನ’ವನ್ನು ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ವಿಚಾರಗೋಷ್ಠಿ, ಸಾರ್ವಜನಿಕ ಸಭೆ, ಪ್ರವಚನ, ಸದ್ಭಾವನಾ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಸೀರತ್ ಅಭಿಯಾನದ ಹಿನ್ನೆಲೆಯಲ್ಲಿ ನ.24ರಂದು ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ಸಂಜೆ 6.30 ಕ್ಕೆ ಸದ್ಭಾವನಾ ಸಮಾವೇಶವನ್ನು  ಆಯೋಜಿಸಲಾಗಿದೆ. ಇದನ್ನು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಎಸ್‍ಪಿ ಡಾ.ಸುಮನ್ ಪನ್ನೇಕರ್ ಭಾಗವಹಿಸಲಿದ್ದಾರೆ. ಸದ್ಭಾವನಾ ಸಂದೇಶವನ್ನು ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಮಡಿಕೇರಿ ಸಂತ ಮೈಕಲ್ ಚರ್ಚ್‍ನ ಧರ್ಮಗುರುಗಳಾದ ರೆ.ಫಾ.ಆಲ್‍ಫ್ರೆಡ್ ಜಾನ್ ಮೆಂಡೋನ್ಸ, ಶಾಂತಿ ಪ್ರಕಾಶನ ಮಂಗಳೂರಿನ ವ್ಯವಸ್ಥಾಪಕರು ಹಾಗೂ ಧರ್ಮಗುರುಗಳಾದ ಜ. ಮುಹಮ್ಮದ್ ಕುಂಞ ನೀಡಲಿದ್ದಾರೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೊಡಗು ಪ್ರಕೃತಿ ವಿಕೋಪದ ರಕ್ಷಣಾ ಕಾರ್ಯಗಳನ್ನು ನಿರ್ವಹಿಸಿದ ವಿಶೇಷ ರಕ್ಷಣಾ ಕಾರ್ಯಕರ್ತರನ್ನು ಹಾಗೂ ಸೇವಾ ಕಾರ್ಯ ನಿರ್ವಹಿಸಿದ ಸಮಾಜ ಸೇವಕರನ್ನು ಸನ್ಮಾನಿಸಲಾಗುತ್ತದೆ. ಸದ್ಭಾವನಾ ಸಮಾವೇಶದ ಅಂಗವಾಗಿ ಅಂದು ನಗರದಾದ್ಯಂತ ವಾಹನ ಜಾಥ ಆಯೋಜಿಸಲಾಗಿದೆ ಎಂದು ಅಬ್ದುಸ್ಸಲಾಂ ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಪ್ರಮುಖರಾದ ರೆಹಮಾನ್ ಕಾರ್ಯಕ್ರಮ ನಿರೂಪಿಸಿದರೆ, ಸಂಘಟನೆಯ ಜಿಲ್ಲಾ ಸಂಚಾಲಕ ಸಿ.ಹೆಚ್. ಅಫ್ಸರ್ ವಂದಿಸಿದರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News