ಬಿಜೆಪಿ ವಿರುದ್ಧ ಕಾಂಗ್ರೆಸ್ ಆರೋಪ ಚುನಾವಣಾ ಗಿಮಿಕ್: ವರಸಿದ್ದಿ ವೇಣುಗೋಪಾಲ್

Update: 2018-11-17 18:24 GMT

ಚಿಕ್ಕಮಗಳೂರು, ನ.17: ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರ ಅಧಿಕಾರದ ಗದ್ದುಗೆಯಲ್ಲಿದೆ. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸರಕಾರದ ಮೇಲೆ ಒತ್ತಡ ಹೇರಿ ಅತೀವೃಷ್ಟಿ ಪರಿಹಾರ ಅನುದಾನ ಸೇರಿದಂತೆ ನಗರದ ಅಭಿವೃದ್ಧಿಗೆ ನಯಾಪೈಸೆ ಅನುದಾನ ತರುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದು, ನಗರಸಭೆಯ ಅಧಿಕಾರ ಹಿಡಿದಿರುವ ಬಿಜೆಪಿ ವಿರುದ್ಧ ಸುಖಾಸುಮ್ಮನೆ ಆರೋಪಿಸುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ನಗರಸಭೆ ಚುನಾವಣಾ ಹಿನ್ನೆಲೆಯಲ್ಲಿ ಇಂತಹ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಬಿಜೆಪಿ ವಕ್ತಾರ ವರಸಿದ್ದಿ ವೇಣುಗೋಪಾಲ್ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಆಡಳಿತದಲ್ಲಿತ್ತು. ಈಗ ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅವರೇ ಅಧಿಕಾರದಲ್ಲಿದ್ದಾರೆ. ಆದರೆ ಇದುವರೆಗೂ ನಗರಸಭೆಗೆ ಯಾವುದೇ ವಿಶೇಷ ಅನುದಾನವನ್ನು ರಾಜ್ಯ ಸರಕಾರ ನೀಡಿಲ್ಲ. ಕಾಂಗ್ರೆಸ್‍ನವರಿಗೆ ನಗರಸಭೆಯ ಆಡಳಿತ ಮತ್ತು ಅಭಿವೃದ್ಧಿಯ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಆದರೂ ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಅವರು ಪತ್ರಿಕಾಗೋಷ್ಠಿ ನಡೆಸಿ ನಗರಸಭೆ ಹಾಗೂ ಬಿಜೆಪಿಯ ಇಲ್ಲದ ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.

ತಮ್ಮದೇ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದರೂ ಯಾವುದೇ ವಿಶೇಷ ಅನುದಾನವನ್ನು ಬಿಡುಗಡೆ ಮಾಡದ ಕಾಂಗ್ರೆಸ್ ಈಗ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯ ಬಗ್ಗೆ ಮಾತನಾಡುತ್ತಿದ್ದಾರೆ. ಕಳೆದ ಒಂಬತ್ತೂವರೆ ವರ್ಷದಿಂದ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಎಸಿ ಕಚೇರಿಯೊಳಗೆ ಕೂರುವ ಕಾಂಗ್ರೆಸ್ ಮುಖಂಡರು ಒಮ್ಮೆ ನಗರವನ್ನು ಸುತ್ತಿ ನೋಡಿದರೆ ನಗರದಲ್ಲಾಗಿರುವ ಅಭಿವೃದ್ಧಿ ಏನೆಂಬುದರ ಬಗ್ಗೆ ತಿಳಿಯುತ್ತದೆ ಎಂದ ಅವರು, ನಗರಸಭೆ ವತಿಯಿಂದ ಯಾರಿಗೂ ನಿವೇಶನ ನೀಡಿಲ್ಲವೆಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೂರಿದ್ದಾರೆ. ನಿವೇಶನವನ್ನು ವಿತರಿಸಲು ಮೊದಲು ರಾಜ್ಯ ಸರಕಾರ  ಜಾಗವನ್ನು ನೀಡಬೇಕು. ಆದರೆ ಈವರೆಗೂ ರಾಜ್ಯ ಸರಕಾರ ನಿವೇಶನ ವಿತರಿಸಲು ಜಾಗ ನೀಡಿಲ್ಲ. ರಾಜ್ಯದಲ್ಲಿ ಅವರದೇ ಸರಕಾರವಿದೆ ಎಂಬುದನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮರೆತಂತಿದೆ ಎಂದು ದೂರಿದರು.

ನಗರಕ್ಕೆ ಅಮೃತ್ ಯೋಜನೆಯಡಿ ದಿನದ 24 ಗಂಟೆಯೂ ಕುಡಿಯುವ ನೀರಿನ ಯೋಜನೆ ಮಂಜೂರಾಗಿದೆ. ಆದರೂ ಈ ಬಗ್ಗೆ ಕಾಂಗ್ರೆಸ್ ಟೀಕಿಸಿದೆ. ನಗರದ ಜನತೆಗೆ ದಿನದ 24 ಗಂಟೆ ಕುಡಿಯುವ ನೀರು ಬೇಕೊ ಬೇಡವೊ ಎಂಬುದನ್ನು ಕಾಂಗ್ರೆಸ್ ಪಕ್ಷದವರು ಬಹಿರಂಗವಾಗಿ ತಿಳಿಸಲಿ ಎಂದು ಸವಾಲು ಹಾಕಿದ ಅವರು, ಪೈಪ್‍ಲೈನ್ ಹಾಕಲು ರಸ್ತೆಯನ್ನು ಅಗೆಯುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ಅಗೆಯಲಾಗುತ್ತಿದೆ. ಅಗೆದರೂ ಅದನ್ನು ಗುತ್ತಿಗೆದಾರರೆ ಮುಚ್ಚಿಕೊಡುತ್ತಾರೆ. ಗುಂಡಿ ಮುಚ್ಚದಿದ್ದಾಗ ಪ್ರಶ್ನಿಸಿದರೆ ಅದಕ್ಕೆ ನಾವೂ ಧ್ವನಿ ಗೂಡಿಸುತ್ತೇವೆ ಎಂದರು. 
 
ನಗರದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯ ಬಗ್ಗೆ ಶಾಸಕ ಸಿ.ಟಿ.ರವಿ ಪ್ರತಿ ತಿಂಗಳೂ ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿದ್ದಾರೆ. ವಿಧಾನಸಭೆಯಲ್ಲಿ ಈ ಬಗ್ಗೆ ಹಲವು ಸಚಿವರ ಎದುರೂ ಪ್ರಸ್ತಾಪ ಮಾಡಿದ್ದಾರೆ. ಆದರೂ ಸರಕಾರ ಈ ಬಗ್ಗೆ ಗಮನಹರಿಸದಿರುವುದರಿಂದ ಕಾಮಗಾರಿ ವಿಳಂಬವಾಗಿದೆ. ಕಳೆದ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಾಗೂ ಈಗಿನ ಸಮ್ಮಿಶ್ರ ಸರಕಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವವರು ಕೇವಲ ರಾಷ್ಟ್ರೀಯ ಹಬ್ಬಗಳಿಗೆ ಮಾತ್ರ ಸೀಮಿತರಾಗಿದ್ದಾರೆ. ಅವರು ನಗರಕ್ಕಾಗಲಿ, ಜಿಲ್ಲೆಗಾಗಲಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಆರೋಪಿಸಿದ ಅವರು, ಅತಿವೃಷ್ಟಿಯಿಂದಾಗಿ ಜಿಲ್ಲೆಯ ಜನತೆ ತತ್ತರಿಸಿ ಹೋಗಿದ್ದಾರೆ. ಈಲ್ಲೆಗೆ 25 ಕೋಟಿ ರೂ. ಅನುದಾನವನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದರೂ ಈವರೆಗೂ ಅನುದಾನ ಬಿಡುಗಡೆ ಆಗಿಲ್ಲ. ಆ ಬಗ್ಗೆ ಚಕಾರವೆತ್ತದ ಕಾಂಗ್ರೆಸ್ಸಿಗರು ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಇದರ ಹಿಂದೆ ಚುನಾಚಣಾ ಗಿಮಿಕ್ ಅಡಗಿದೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಿ.ಆರ್.ಪ್ರೇಮ್‍ ಕುಮಾರ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News