ಕೆಆರ್‍ಎಸ್ ವ್ಯಾಪ್ತಿ ಗಣಿಗಾರಿಕೆ ನೀಷೇಧಕ್ಕೆ ಆಗ್ರಹ: ಜನಾಂದೋಲನ ನಡೆಸಲು ಸಮಾಲೋಚನಾ ಸಭೆ ನಿರ್ಣಯ

Update: 2018-11-17 18:39 GMT

ಮಂಡ್ಯ, ನ.17: ಕೆಆರ್‍ಎಸ್ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯ ಎಲ್ಲಾ ತಾಲೂಕುಗಳಲ್ಲಿ ಶಾಶ್ವತವಾಗಿ ಕಲ್ಲುಗಣಿಗಾರಿಕೆ ನಿಷೇಧಿಸಬೇಕು ಎಂದು ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಕೆಆರ್‍ಎಸ್ ಉಳಿವಿಗಾಗಿ ಪೂರ್ವಭಾವಿ ಸಮಾಲೋಚನಾ ಸಭೆ ಆಗ್ರಹಿಸಿದೆ.

ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ವ್ಯಾಪಕ ಗಣಿಗಾರಿಕೆಯಿಂದ ಅಣೆಕಟ್ಟೆಯ ಸುರಕ್ಷತೆಗೆ ಭಾರಿ ಅಪಾಯವಿರುವ ಮುನ್ಸೂಚನೆ ಈಗಾಗಲೇ ಲಭ್ಯವಾಗಿದ್ದು, ಮುಂದೆ ಮಾನವ ದರುಂತಗಳೂ ಸಂಭವಸಲಿವೆ ಎಂಬುದಾಗಿ ಸಭೆಯಲ್ಲಿ ಆತಂಕ ವ್ಯಕ್ತವಾಯಿತು. ಗಣಿಗಾರಿಕೆ ನಿಷೇಧಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಈ ಕುರಿತು ತಜ್ಞರೊಂದಿಗೆ ಸಮಾಲೋಚನೆ, ವಿಚಾರಸಂಕಿರಣ ಮತ್ತು ಜನಜಾಗೃತಿ ಹೋರಾಟಗಳನ್ನು ರೂಪಿಸುವ ಮೂಲಕ ಜನಾಂದೋಲನ ನಡೆಸಲು ಸಭೆ ಸರ್ವಾನುಮತದಿಂದ ನಿರ್ಣಯಿಸಿತು.

ಕೊಡಗಿನಿಂದ ಬೆಂಗಳೂರುವರೆಗೆ ಕಾವೇರಿ ಮತ್ತು ಅದರ ಉಪನದಿಗಳು ಹರಿಯುವ ಮತ್ತು ನೀರನ್ನು ಬಳಸುವ ಎಲ್ಲಾ ಜಿಲ್ಲೆಗಳ ಪ್ರಾತಿನಿಧಿಕ ಸಮಿತಿಗಳ ಮೂಲಕ ಹೋರಾಟ ರೂಪಿಸಲು ಸಭೆಯು ಅನುಮೋದಿಸಿ, ಅದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಸಂಘಟನಾ ಸಮಿತಿ ರಚಿಸಲು ಒಪ್ಪಿಗೆ ನೀಡಿತು.
ಕೆಆರ್‍ಎಸ್ ಬಳಿ ಬೃಹತ್ ಪ್ರತಿಮೆ ಮತ್ತು ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ಸ್ಥಾಪನೆಯಿಂದಾಗುವ ಹಾನಿ, ಸಮಸ್ಯೆಗಳ ಬಗ್ಗೆ ಸಭೆ ಕಳವಳ ವ್ಯಕ್ತಪಡಿಸಿತು. ಅಣೆಕಟ್ಟೆ ಸುರಕ್ಷತೆ ಬಗ್ಗೆ ಚಿಂತಿಸದೆ, ಪ್ರವಾಸೋದ್ಯಮದ ಲಾಭದ ಮೇಲೆ ಕಣ್ಣಿಟ್ಟು ಯೋಜನೆ ರೂಪಿಸುವ ಸರಕಾರದ ಧೋರಣೆಯನ್ನು ಖಂಡಿಸಿತು. ಜನಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿ ಸರಕಾರ ಜೆಜ್ಜೆ ಹಿಡಬಾರದು ಎಂದು ಆಗ್ರಹಿಸಲಾಯಿತು.

ಕಾವೇರಿ ನದಿಯು ಕರ್ನಾಟಕದ ಪ್ರಮುಖ ಜೀವನದಿಗಳಲ್ಲೊಂದಾಗಿದ್ದು, ಅಂತರರಾಜ್ಯ ಮಹತ್ವವನ್ನು ಪಡೆದಿದೆ. ಈ ನದಿಯ ಜಲಾನಯನ ಪ್ರದೇಶ, ನೀರಿನ ಹರಿವು, ಅಂತರ್ಜಲ, ಅಣೆಕಟ್ಟೆಗಳು, ನಾಲೆಗಳು, ನದಿತೀರ ಇವುಗಳೆಲ್ಲದರ ಆರೋಗ್ಯವನ್ನು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳುವುದು ಅತ್ಯಂತ ಜರೂರು ಎಂದು ಸಭೆ ಅಭಿಪ್ರಾಯಪಟ್ಟಿತು.

ತಲಕಾವೇರಿಯಿಂದ ಪೂಂಪುಹಾರ್‍ವರೆಗೆಇನ ಕಾವೇರಿ ಹರಿವಿನ ಪ್ರದೇಶ ಮತ್ತು ಕಾವೇರಿ ನೀರನ್ನು ಬಳಸಿಕೊಳ್ಳುವ ಬೆಂಗಳೂರು ಹಾಗೂ ಕಾವೇರಿ ಉಪನದಿಗಳ ನೀರನ್ನು ಬಳಸುವ ಎಲ್ಲಾ ಜಿಲ್ಲೆಗಳವರೂ ಸೇರಿದ ಬೃಹತ್ ಕಾವೇರಿ ಕುಟುಂಬ ನಮ್ಮದು. ಈ ಭಾಗದ ಕೃಷಿ, ಕುಡಿಯುವ ನೀರು, ಸಸ್ಯಸಂಕುಲ, ಪ್ರಾಣಿಸಂಕುಲ, ಅರಣ್ಯ, ಪರಿಸರದ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಾನಿಯನ್ನು ಸಂಪೂರ್ಣವಾಗಿ ತಡೆಯುವುದ ನಮ್ಮ ಆದ್ಯ ಕರ್ತವ್ಯವೆಂದು ಸಭೆ ತೀರ್ಮಾನಿಸಿತು.

ಜನಪರ ಸಂಘಟನೆಗಳ ಹಿರಿಯ ಹೋರಾಟಗಾರ ಮೈಸೂರಿನ ಪ.ಮಲ್ಲೇಶ್ ಸಮಾಲೋಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂದಸ ಜಿ.ಮಾದೇಗೌಡ, ಜನಪರ ಚಿಂತಕರಾದ ಪ್ರೊ.ಜಿ.ಟಿ.ವೀರಪ್ಪ, ಕೆ.ಮಾಯಿಗೌಡ, ಪ್ರೊ.ಹುಲ್ಕೆರೆ ಮಹದೇವ, ದಸಂಸ ನಾಯಕ ಗುರುಪ್ರಸಾದ್ ಕೆರಗೋಡು, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಸುನಂದ ಜಯರಾಂ, ಶಂಭೂನಹಳ್ಳಿ ಸುರೇಶ್, ಕೆ.ಆರ್.ಜಯರಾಂ, ಲತಾ ಶಂಕರ್, ಸುಧೀರ್ ಕುಮಾರ್, ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಂ, ಕರ್ನಾಟಕ ಜನಶಕ್ತಿಯ ಡಾ.ವಾಸು, ಸಿಐಟಿಯುನ ಸಿ.ಕುಮಾರಿ, ಆರ್‍ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ, ಅಮ್ಜದ್ ಪಾಷ ಸೇರಿದಂತೆ ಮಂಡ್ಯ, ಮೈಸೂರು, ಬೆಂಗಳೂರು ಭಾಗದ ಜನಪರ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಹಾಗೂ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News