ಕಬ್ಬು ತುಂಬಿದ ಲಾರಿಯನ್ನು ಬೆಳಗಾವಿ ಸುವರ್ಣ ಸೌಧ ಆವರಣದೊಳಗೆ ನುಗ್ಗಿಸಿದ ರೈತರು

Update: 2018-11-18 12:20 GMT

ಬೆಳಗಾವಿ, ನ.18: ಕಬ್ಬಿನ ಬಾಕಿ ಪಾವತಿ ಮತ್ತು ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಧರಣಿ ನಡೆಸುತ್ತಿರುವ ರೈತರು ಆಯೋಜಿಸಿದ್ದ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಂದು ಸಮಸ್ಯೆಯನ್ನು ಆಲಿಸಲಿಲ್ಲವೆಂದು ಆಕ್ರೋಶಗೊಂಡ ರೈತರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಿದರು.

 ಮುಖ್ಯಮಂತ್ರಿಗಳು ರೈತರ ಸಭೆಗೆ ಬರುವುದಿಲ್ಲವೆಂಬ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ರೈತರು ಸುವರ್ಣಸೌಧದ ಗೇಟ್ ಬೀಗವನ್ನು ಕಲ್ಲಿನಿಂದ ಒಡೆಯಲು ಯತ್ನಿಸಿದರು. ನಂತರ ಭದ್ರತಾ ಸಿಬ್ಬಂದಿಯ ಕೈಯಿಂದ ಕೀ ಕಿತ್ತುಕೊಂಡು ಗೇಟ್ ತೆರೆದಿದ್ದಾರೆ. ಬಳಿಕ ಕಬ್ಬು ತುಂಬಿದ 4 ಲಾರಿಗಳನ್ನು ಸುವರ್ಣಸೌಧದೊಳಗೆ ನುಗ್ಗಿಸಿದ್ದಾರೆ.

ಸಮಸ್ಯೆಗಳನ್ನು ಬಗೆಹರಿಸುತ್ತೇನೆಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಇಂದು ಆಯೋಜಿಸಿದ್ದ ರೈತರ ಸಭೆಗೆ ಗೈರು ಹಾಜರಾಗುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲಿದ್ದ ನಂಬಿಕೆ ಹುಸಿಯಾಗುತ್ತಿದೆ. ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲದಕ್ಕೂ ಬೆಂಗಳೂರಿನಲ್ಲಿ ಸಭೆ ನಡೆಸುವುದಾದರೆ ಸುವರ್ಣ ಸೌಧವನ್ನು ಯಾಕೆ ಬೆಳಗಾವಿಯಲ್ಲಿ ಕಟ್ಟಿಸಿದ್ದೀರಿ? ನೀವು ಕೇವಲ ದಕ್ಷಿಣ ಕರ್ನಾಟಕಕ್ಕೆ ಮಾತ್ರ ಮುಖ್ಯಮಂತ್ರಿಯೆಂದು ಭಾವಿಸಿದಂತಿದೆ. ನಮ್ಮ ಕಷ್ಟ ಕೇಳುವವರು ಯಾರು. ಸಕ್ಕರೆ ಕಾರ್ಖಾನೆ ಮಾಲಕರೊಂದಿಗೆ ಸರಕಾರ ಶಾಮೀಲಾಗಿ ರೈತರಿಗೆ ಅನ್ಯಾಯ ಮಾಡುತ್ತಿದೆ, ರೈತರನ್ನು ಸರಕಾರ ನೇಣಿಗೇರಿಸುತ್ತಿದೆ ಎಂದು ರೈತ ನಾಯಕಿ ಜಯಶ್ರೀ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ರೈತರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಲವು ರೈತರನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ರವಾನಿಸಿದರು. ರೈತರ ಪ್ರತಿಭಟನೆ ತಾರಕ್ಕಕೇರಿದ ಹಿನ್ನೆಲೆಯಲ್ಲಿ ಸುವರ್ಣಸೌಧಕ್ಕೆ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಭೇಟಿ ನೀಡಿ, ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News