ಛತ್ತೀಸ್‍ಗಢ ಬಿಜೆಪಿ ಸಚಿವರ ಕೊಳಕು ರಾಜಕೀಯ

Update: 2018-11-18 09:06 GMT
ರಾಜೇಶ್ ಮುನಾತ್

ರಾಯಪುರ,ನ.18: ವಿಧಾನಸಭಾ ಚುನಾವಣೆ ನಡೆಯುತ್ತಿರುವ ಛತ್ತೀಸ್‍ಗಢದಲ್ಲಿ ಮುಸ್ಲಿಂ ಮತದಾರರನ್ನು ತಟಸ್ಥಗೊಳಿಸಲು ಬಿಜೆಪಿ ಸಚಿವರು ಕೀಳು ರಾಜಕೀಯ ತಂತ್ರ ಅನುಸರಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ರಾಜಸ್ಥಾನದ ಪವಿತ್ರ ಅಜ್ಮೀರ್ ಶರೀಫ್‍ಗೆ ಉಚಿತವಾಗಿ ಕರೆದೊಯ್ಯುವುದಾಗಿ ಭರವಸೆ ನೀಡುವ ಅಜ್ಞಾತ ಕರೆಗಳು ಬರುತ್ತಿವೆ ಎಂದು ಇಂಥ ಕರೆ ಸ್ವೀಕರಿಸಿರುವ ರಾಯಪುರದ ಈದ್ಗಾ ಭಾತಾದ ನಿವಾಸಿ ಅಫ್ರೋಜ್ ಬಾನು ದೂರಿದ್ದಾರೆ.

ಬಾನು ನೆರೆಯವರಲ್ಲಿ ಈ ಬಗ್ಗೆ ಹೇಳಿಕೊಂಡಾಗ ಹಲವು ಮಂದಿ ಇಂಥದ್ದೇ ಕರೆ ಬಂದಿದೆ ಎಂದು ಹೇಳಿದ್ದಾರೆ. ಮಗನಲ್ಲಿ ಈ ವಿಷಯ ಹಂಚಿಕೊಂಡಾಗ, ನವೆಂಬರ್ 20ರಂದು ಈ ಕ್ಷೇತ್ರದಲ್ಲಿ ಮತದಾನ ಇರುವ ಹಿನ್ನೆಲೆಯಲ್ಲಿ ನವೆಂಬರ್ 18ರಂದು ದೊಡ್ಡ ಸಂಖ್ಯೆಯ ಮುಸ್ಲಿಮರನ್ನು ಅಜ್ಮೀರ್‍ಗೆ ಕರೆದುಕೊಂಡು ಹೋಗಲು ಬಿಜೆಪಿ ನಾಯಕರು ಹೂಡಿರುವ ತಂತ್ರ ಇದಾಗಿದೆ ಎಂದು ವಿವರಿಸಿದ್ದಾನೆ.

ಬಿಜೆಪಿ ಸಚಿವ ರಾಜೇಶ್ ಮುನಾತ್ ಅವರು ಮುಸ್ಲಿಂ ಮತದಾರರು ಮತ ಹಾಕದಂತೆ ತಡೆಯಲು ಈ ತಂತ್ರ ಅನುಸರಿಸುತ್ತಿರುವ ಬಗ್ಗೆ ಇದೀಗ ಕ್ಷೇತ್ರದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ವ್ಯಾಪಕವಾಗಿದ್ದು, ತಮಗೆ ಮತ ಹಾಕುವುದಿಲ್ಲ ಎಂದು ಖಾತ್ರಿಯಾದವರನ್ನು ಹೊರಗೆ ಕಳುಹಿಸುವ ಹುನ್ನಾರ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ.

ರಾಯಪುರ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಈ ತಂತ್ರ ಅನುಸರಿಸಲಾಗುತ್ತಿದೆ ಎಂದು ಹಲವು ಮಂದಿ ನಾಗರಿಕರು ದೂರಿದ್ದಾರೆ. ಅಂತೆಯೇ 27 ಮಂದಿ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದ್ದು, ಮುಸ್ಲಿಂ ಮತ ವಿಭಜನೆಯಾಗುವಂತೆ ಮಾಡುವುದು ಇದರ ಉದ್ದೇಶ. ಇಂಥ ಅಭ್ಯರ್ಥಿಗಳಿಗೆ ತಲಾ 3 ಲಕ್ಷ ರೂಪಾಯಿ ನೀಡಲಾಗುತ್ತಿದೆ ಎಂದೂ ಆರೋಪ ಕೇಳಿಬಂದಿದೆ. ಇಲ್ಲಿ ಬಿಜೆಪಿ ಮುಖಂಡ ಬ್ರಿಜ್‍ಮೋಹನ್ ಅಗರ್‍ವಾಲ್ ಕಣದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News