ಆಗುಂಬೆ ಘಾಟಿಯಲ್ಲಿ ಮಿನಿ ಲಾರಿಗಳ ಸಂಚಾರಕ್ಕೆ ಅವಕಾಶ

Update: 2018-11-18 13:17 GMT

ಶಿವಮೊಗ್ಗ, ನ.18: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ಸರಕು ಸಾಗಾಣೆ ವಾಹನಗಳ ಸಂಚಾರದ ಮೇಲೆ ವಿಧಿಸಲಾಗಿದ್ದ ನಿರ್ಬಂಧದಲ್ಲಿ ಕೊಂಚ ಸಡಿಲಿಕೆ ಮಾಡಲಾಗಿದ್ದು, ಮಿನಿ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಡಾ. ಕೆ.ಎ ದಯಾನಂದರವರು ಅಧಿಕೃತ ಆದೇಶ ಹೊರಡಿಸಿದ್ದು, ಭಾನುವಾರ ಬೆಳಿಗ್ಗೆಯಿಂದ ಆಗುಂಬೆ ಘಾಟಿಯಲ್ಲಿ ಮಿನಿ ಲಾರಿಗಳ ಸಂಚಾರ ಪುನಾರಂಭಗೊಂಡಿದೆ. ಜಿಲ್ಲಾಡಳಿತದ ಈ ಕ್ರಮಕ್ಕೆ ಮಿನಿ ಲಾರಿ ಮಾಲಕರ ಸಂಘವು ಸ್ವಾಗತಿಸಿ, ಮೆಚ್ಚುಗೆ ವ್ಯಕ್ತಪಡಿಸಿದೆ. 

ಮನವಿ ಸಲ್ಲಿಕೆ: ಚಾರ್ಮಾಡಿ ಘಾಟಿಯಲ್ಲಿ ಲಾರಿಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ನಂತರ, ಆಗುಂಬೆ ಘಾಟಿಯಲ್ಲಿಯೂ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬೇಕೆಂಬ ಒತ್ತಾಯ ಕೇಳಿಬಂದಿತ್ತು. ಇತ್ತೀಚಿಗೆ ಲಾರಿ ಮಾಲಕರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಕೂಡ ಅರ್ಪಿಸಿತ್ತು. ಹಾಗೆಯೇ ಸೋಮವಾರ ಆಗುಂಬೆ ಘಾಟಿ ರಸ್ತೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಇದೀಗ ಜಿಲ್ಲಾಡಳಿತ ಮಿನಿ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದರಿಂದ ಲಾರಿ ಮಾಲಕರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.

ಸ್ಥಗಿತ: ಮಳೆಗಾಲದ ವೇಳೆ ಪಶ್ಚಿಮ ಘಟ್ಟದ ಆಗುಂಬೆ ವ್ಯಾಪ್ತಿಯಲ್ಲಿ ಧಾರಕಾರ ವರ್ಷಧಾರೆಯಾಗಿತ್ತು. ಇದರಿಂದ ಘಾಟಿ ರಸ್ತೆಯ ಎರಡು ತಿರುವುಗಳಲ್ಲಿ ಧರೆ ಕುಸಿತವುಂಟಾಗಿತ್ತು. ಜುಲೈ ತಿಂಗಳ ಕೊನೆಯ ವಾರದಲ್ಲಿ ಪ್ರಯಾಣಿಕ ಬಸ್ ಹೊರತುಪಡಿಸಿ ಲಾರಿ, ಭಾರೀ ಸರಕು-ಸಾಗಾಣೆ ವಾಹನ ಹಾಗೂ ಟ್ರಕ್‍ಗಳ ಸಂಚಾರವನ್ನ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. 

ಈ ನಡುವೆ ಆಗುಂಬೆಯಲ್ಲಿ ಮಳೆ ಕಡಿಮೆಯಾಗಿದ್ದರಿಂದ ಸಣ್ಣಲಾರಿ ಮಾಲಕರ ಮತ್ತು ಚಾಲಕರ ಸಂಘವು, ಲಾರಿಗಳ ಸಂಚಾರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿತ್ತು. ಮಿನಿ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶಿವಮೊಗ್ಗ ಸಾರಿಗೆ ಇಲಾಖೆಯ ಹಿರಿಯ ಪ್ರಾದೇಶಿಕ ಆಯುಕ್ತರು ಹಾಗೂ ಶೃಂಗೇರಿ ಉಪ ಸಾರಿಗೆ ಆಯುಕ್ತರಿಂದ ವರದಿ ಕೇಳಿದ್ದರು. 

ಕುಸಿತ ಉಂಟಾಗಿದ್ದ ಮಾರ್ಗಗಳಲ್ಲಿ ತಡೆಗೋಡೆ ನಿರ್ಮಿಸಲಾಗಿರುವುದರಿಂದ ಹಾಗೂ ಮಳೆಯ ಪ್ರಮಾಣ ಕೂಡ ಸಂಪೂರ್ಣ ಕಡಿಮೆಯಾಗಿರುವುದರಿಂದ, 4 ಟನ್ ಸಾಮರ್ಥ್ಯದ ಲಾರಿಗಳ ಸಂಚಾರಕ್ಕೆ ಅವಕಾಶ ನೀಡಬಹುದಾಗಿದೆ. ಇದರಿಂದ ಘಾಟಿ ರಸ್ತೆಗೆ ಯಾವುದೇ ಅಪಾಯವಿಲ್ಲ ಎಂದು ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಈ ವರದಿಯ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಮಿನಿ ಲಾರಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಆದೇಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News