ಕಸ್ತೂರಿ ರಂಗನ್, ಮಾಧವ ಗಾಡ್ಗೀಳ್ ವರದಿಗಳ ಕುರಿತು ವಿಸ್ತೃತ ಚರ್ಚೆಯಾಗಬೇಕು: ಮಾಜಿ ಶಾಸಕ ದತ್ತ

Update: 2018-11-18 13:41 GMT

ಶಿವಮೊಗ್ಗ, ನ. 18: ಪಶ್ಚಿಮಘಟ್ಟ ಅರಣ್ಯ ಸಂರಕ್ಷಣೆಯಾಗಬೇಕು. ಅರಣ್ಯ ನಾಶ ತಡೆಗಟ್ಟಬೇಕು. ಹಾಗೆಯೇ ಜನರು ಉಳಿಯಬೇಕು. ಈ ಕಾರಣದಿಂದ ಪಶ್ಚಿಮಘಟ್ಟಕ್ಕೆ ಸಂಬಂಧಿಸಿದ ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿಗಳನ್ನು ಕಾರ್ಯಗತಗೊಳಿಸುವುದಕ್ಕೂ ಮುನ್ನ ಸಮಗ್ರ ಚರ್ಚೆಯಾಗಬೇಕು' ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಅಭಿಪ್ರಾಯಪಟ್ಟಿದ್ದಾರೆ. 

ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಜಿಲ್ಲಾ ಶಾಖೆಯು 'ಪಶ್ಚಿಮ ಘಟ್ಟ ಉಳಿಸಿ ಅಭಿಯಾನ'ದ ಅಂಗವಾಗಿ ಮಾಧವ ಗಾಡ್ಗೀಳ್ ವರದಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, 'ಪಶ್ಚಿಮಘಟ್ಟ - ಬಯಲುಸೀಮೆ' ಎಂಬ ವಿಷಯದ ಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಎರಡು ವರದಿಗಳ ಕುರಿತಂತೆ ಪಶ್ಚಿಮಘಟ್ಟ ವ್ಯಾಪ್ತಿಯ ನಿವಾಸಿಗಳಲ್ಲಿ ಆತಂಕ, ಅನುಮಾನಗಳಿವೆ. ಈ ವರದಿಗಳು ಅನುಷ್ಠಾನಗೊಂಡರೆ, ರೈತರು ತಮ್ಮ ಕೃಷಿ ಭೂಮಿಗೆ ರಾಸಾಯನಿಕ ಬಳಸಲು ಅವಕಾಶವಾಗುವುದಿಲ್ಲ ಎಂಬಿತ್ಯಾದಿ ಅಂತೆಕಂತೆಗಳಿವೆ. ಈ ಕಾರಣದಿಂದ ಈ ವರದಿಗಳ ಸಾಧಕ-ಬಾಧಕಗಳ ಬಗ್ಗೆ ಕೂಲಂಕಷ ಚರ್ಚೆಯಾಗಬೇಕು. ಪರಿಸರ ತಜ್ಞರು, ವಿವಿಧ ಕ್ಷೇತ್ರಗಳ ಪರಿಣಿತರು, ಬಗರ್ ಹುಕುಂ ಸಾಗುವಳಿದಾರರು, ವರದಿ ಅನುಷ್ಠಾನಗೊಳ್ಳುವ ಘಟ್ಟ ವ್ಯಾಪ್ತಿಯ ಗ್ರಾಮಸ್ಥರು, ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಬೇಕು. ಆ ನಂತರವಷ್ಟೆ ವರದಿ ಅನುಷ್ಠಾನದ ಬಗ್ಗೆ ಮುಂದಡಿಯಿಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಈ ಮೂಲಕ ವರದಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಚರ್ಚೆಗಳಿಗೆ ತಾರ್ಕಿಂಕ ಅಂತ್ಯ ನೀಡಬೇಕು ಎಂದು ಅಭಿಪ್ರಾಯಪಟ್ಟರು. 

ಸಂಕಷ್ಟ: ಬಯಲುಸೀಮೆಯವರಿಗೆ ಮಲೆನಾಡು ಎಂದರೆ ಅಪಾರ ಅಭಿಮಾನವಿದೆ. ಇಲ್ಲಿನ ಅರಣ್ಯ, ನದಿತೊರೆಗಳನ್ನು ಕಂಡು ಅಚ್ಚರಿಗೊಳ್ಳುತ್ತಾರೆ. ಆದರೆ ಬಯಲುಸೀಮೆ ರೈತರ ಸ್ಥಿತಿ ದಯನೀಯವಾಗಿದೆ. 1000 ಅಡಿ ಆಳದವರೆಗೆ ಬೋರ್‍ವೆಲ್ ಕೊರೆಯಿಸಿದರೂ ನೀರು ಸಿಗುವುದಿಲ್ಲ. ಬತ್ತಿ ಹೋಗಿರುವ ಬಯಲುಸೀಮೆಯ ಕೆರೆಕಟ್ಟೆಗಳಿಗೆ ಮಲೆನಾಡಿನ ನದಿತೊರೆಗಳಿಂದ ನೀರು ಹರಿಸಲು ಅರಣ್ಯ ಇಲಾಖೆ ಕಾಯ್ದೆ, ಪರಿಸರ ನಿಯಮಗಳು ಅಡ್ಡಿಯಾಗುತ್ತವೆ ಎಂದರು. 

ಪರಿಸರ ಉಳಿಯಬೇಕು. ಜೊತೆಗೆ ಜನರು ಉಳಿಯಬೇಕಾಗಿದೆ. ಸಮಸ್ಯೆಗಳು ಪರಿಹಾರವಾಗಬೇಕಾಗಿದೆ. ಈ ಬಗ್ಗೆ ಸರ್ಕಾರಗಳೇ ಸೂಕ್ತ, ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸಮತೋಲನ ನಿರ್ಧಾರ ತಳೆಯಬೇಕಾಗಿದೆ ಎಂದು ತಿಳಿಸಿದ್ದಾರೆ. 

ವಿಚಿತ್ರ: ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕಾನೂನು ಅನುಷ್ಠಾನವೂ ವಿಚಿತ್ರವಾಗಿವೆ. ಒಂದು ಕಡೆ ಒಂದೊಂದು ರೀತಿಯಲ್ಲಿದೆ. ಸೊಪ್ಪಿನಬೆಟ್ಟಕ್ಕೆ ಸಂಬಂಧಿಸಿದ ಜಾಗ ಒತ್ತುವರಿಯಾದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಅದು ಅಕ್ರಮ ಕಾನೂನುಬಾಹಿರವಾಗಿದೆ. ಆದರೆ ಅದೇ ಸೊಪ್ಪಿನಬೆಟ್ಟ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒತ್ತುವರಿಯಾದರೆ, ಅದು ಸಕ್ರಮವಾಗಿದೆ. ಮತ್ತೊಂದೆಡೆ ಒಂದೇ ಒಂದು ಮರಗಿಡವಿಲ್ಲದ ಪ್ರದೇಶವನ್ನು ದಾಖಲೆಗಳಲ್ಲಿ ಅರಣ್ಯವೆಂದು ನಮೂದಿಸಲಾಗಿದೆ. ಕೆಲ ಜನವಸತಿ ಪ್ರದೇಶಗಳ ಸ್ಥಿತಿಯೂ ಇದೇ ರೀತಿಯಾಗಿದೆ. ಇದರಿಂದ ಉಂಟಾಗುತ್ತಿರುವ ಆಡಳಿತಾತ್ಮಕ ಹಾಗೂ ನಾಗರೀಕರು ಎದುರಿಸುತ್ತಿರುವ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮೊದಲು ಈ ರೀತಿಯ ಗೊಂದಲಗಳು ಪರಿಹಾರವಾಗಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ವೈ.ಎಸ್.ವಿ.ದತ್ತ ತಿಳಿಸಿದರು.

ವೇದಿಕೆಯಲ್ಲಿ ಪರಿಸರ ಹೋರಾಟಗಾರರಾದ ಬಸವರಾಜ್ ಪಾಟೀಲ್, ಸಿ.ಪಿ.ಮಾಧವನ್, ಆರ್.ಹೆಚ್.ಸಾವ್ಕಾರ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News