ಎಚ್ಐವಿ ಚಿಕಿತ್ಸೆಗೆ ಔಷಧಿಗಳ ಪೂರೈಕೆಗೆ ಕೇಂದ್ರ, ಆಪ್ ಸರಕಾರಗಳ ನಿರ್ಲಕ್ಷ್ಯ: ಹೈಕೋರ್ಟ್ ಗೆ ದೂರು

Update: 2018-11-18 14:03 GMT

ಹೊಸದಿಲ್ಲಿ,ನ.18: ಎಚ್‌ಐವಿ ಚಿಕಿತ್ಸೆಯಲ್ಲಿ ಬಳಸಲಾಗುವ ಆ್ಯಂಟಿರೆಟ್ರೋವೈರಲ್(ಎಆರ್‌ವಿ) ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳುವುದಾಗಿ ಕೇಂದ್ರ,ದಿಲ್ಲಿಯ ಆಪ್ ಸರಕಾರ ಮತ್ತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ(ಎನ್‌ಎಸಿಒ) ನ್ಯಾಯಾಲಯಕ್ಕೆ ನೀಡಿದ್ದ ಭರವಸೆಯನ್ನು ಪಾಲಿಸುತ್ತಿಲ್ಲ ಎಂದು ದೂರಿ ದಿಲ್ಲಿ ನಿವಾಸಿ ರೇಖಾದೇವಿ ಎನ್ನುವವರು ದಿಲ್ಲಿ ಉಚ್ಚ ನ್ಯಾಯಾಲಯಲ್ಲಿ ನ್ಯಾಯಾಂಗ ನಿಂದನೆ ದೂರನ್ನು ದಾಖಲಿಸಿದ್ದು,ಈ ಬಗ್ಗೆ ತನ್ನ ನಿಲುವನ್ನು ತಿಳಿಸುವಂತೆ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶ ನೀಡಿದೆ.

ದೂರಿಗೆ ಉತ್ತರವಾಗಿ ಸ್ಥಿತಿಗತಿ ವರದಿಯನ್ನು ಸಲ್ಲಿಸುವಂತೆ ನ್ಯಾ.ಸುನಿಲ ಗೌರ್ ಅವರು ಆರೋಗ್ಯ ಸಚಿವಾಲಯಕ್ಕೆ ಸೂಚಿಸಿದ್ದಾರೆ.

ರೇಖಾದೇವಿ ದಿಲ್ಲಿಯ ಎಲ್ಲ ಸರಕಾರಿ ಆಸ್ಪತ್ರೆಗಳು ಮತ್ತು ಎಆರ್‌ವಿ ಚಿಕಿತ್ಸೆ ನೀಡುವ ಎಆರ್‌ಟಿ ಕೇಂದ್ರಗಳಲ್ಲಿ ಎಆರ್‌ವಿ ಔಷಧಿಗಳ ಕೊರತೆಯಿದೆ ಎಂದು ಕಳೆದ ವರ್ಷದ ಮೇ ತಿಂಗಳಲ್ಲಿ ಉಚ್ಚ ನ್ಯಾಯಾಲಯದಲ್ಲಿ ದೂರಿಕೊಂಡಿದ್ದರು. ಈ ವೇಳೆ ಭವಿಷ್ಯದಲ್ಲಿ ಎಆರ್‌ವಿ ಔಷಧಿಗಳ ಕೊರತೆಯಾಗುವುದಿಲ್ಲ ಎಂದು ಕೇಂದ್ರ ಮತ್ತು ದಿಲ್ಲಿ ಸರಕಾರಗಳು ಹಾಗೂ ಎನ್‌ಎಸಿಒ ನ್ಯಾಯಾಲಯಕ್ಕೆ ಭರವಸೆ ನೀಡಿದ್ದವು.

ಭಾರತದಲ್ಲಿ 21 ಲಕ್ಷ ಜನರು ಎಚ್‌ಐವಿಯೊಂದಿಗೆ ಬದುಕುತ್ತಿದ್ದು,ಎಅರ್‌ಟಿ ಮೂಲಕ ಈ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ ಮತ್ತು ರೋಗಿಗಳು ಏಡ್ಸ್‌ಗೆ ತುತ್ತಾಗದೆ ಹೆಚ್ಚು ಕಾಲ ಬದುಕಬಹುದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News