ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ ಸಕಲೇಶಪುರ ಬೀದಿ ನಾಯಿ ಹತ್ಯೆ ಪ್ರಕರಣ

Update: 2018-11-18 14:38 GMT

ಸಕಲೇಶಪುರ, ನ.19: ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಪ್ರಕರಣ ಈಗ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದು, ಪುರಸಭೆ ಮುಖ್ಯಾಧಿಕಾರಿ ವಿಲ್ಸನ್ ಮತ್ತು ಗುತ್ತಿಗೆದಾರ ವಿ.ಜಾರ್ಜ್ ರಾಬರ್ಟ್ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 

ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಮೀರಿದ್ದಕ್ಕೆ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪ್ರಾಣಿಗಳ ಹಕ್ಕು ಕಾರ್ಯಕರ್ತರಾದ ನವೀನ ಕಾಮತ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಗೆ ಒಪ್ಪಿದ ನ್ಯಾಯಮೂರ್ತಿ ಎನ್.ವಿ.ರಾಮಣ್ಣ ಮತ್ತು ಎಂ.ಎಂ.ಶಾಂತನಗೌಡರ್ ಅವರನ್ನು ಒಳಗೊಂಡ ಪೀಠ, ಪುರಸಭೆಯ ಮುಖ್ಯಾಧಿಕಾರಿ ವಿಲ್ಸನ್ ವಿ.ಟಿ. ಮತ್ತು ಗುತ್ತಿಗೆದಾರ ವಿ.ಜಾರ್ಜ್ ರಾಬರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ನಾಲ್ಕು ವಾರಗಳಲ್ಲಿ ಉತ್ತರಿಸಲು ಸೂಚಿಸಿದೆ.

ನವೀನ ಕಾಮತ್ ಪರವಾಗಿ ಹಾಜರಾದ ವಕೀಲ ಸಿದ್ಧಾರ್ಥ್ ಗರ್ಗ್ ಅವರು, ಸುಪ್ರೀಂ ಕೋರ್ಟ್‌ನ ನಿರ್ದಿಷ್ಟ ನಿರ್ದೇಶನಗಳನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಂಗ ನಿಂದನಾ ಕ್ರಮಗಳನ್ನು ಆರಂಭಿಸಬೇಕೆಂದು ಕೋರಿದರು.

ಪುರಸಭೆ ವಿರುದ್ಧ ಆರೋಪ
ಬೀದಿನಾಯಿ ಸಮಸ್ಯೆ ಪರಿಹರಿಸುವ ನೆಪದಲ್ಲಿ ಪುರಸಭೆ 350 ನಾಯಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲು 91,537 ರೂ. ಬಿಲ್ ಮಾಡಿ ಕೆಲವು ನಾಯಿಗಳನ್ನು ಹಿಡಿದು ಕೊಂದು, ಭೂಮಿಯಲ್ಲಿ ಹೂತಿರುವ ಅಮಾನವೀಯ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಈ ಪ್ರಕರಣಕ್ಕೆ ಸಂಬಂದಿಸಿದಂತೆ ಮೇನೆಕಾ ಗಾಂಧಿ ಸಂಸ್ಥೆಯ ಶಿಫಾರಸು ಮೇರೆಗೆ ಬೆಂಗಳೂರಿನ ಕ್ಯೂಪ ಸಂಸ್ಥೆಯ ಹರೀಶ್ ಕೆ.ಪಿ. ಎಂಬವರು ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದರು.
ಪುರಸಭೆಯ ಮುಖ್ಯಧಿಕಾರಿ, ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಸಾಕ್ಷಿ ನಾಶ ಪಡಿಸುವ ಸಾಧ್ಯತೆ ಇರುವುದರಿಂದ ನಾಯಿಗಳನ್ನು ಹೂತಿರುವ ಸ್ಥಳಕ್ಕೆ ಭದ್ರತೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದರು.

ದಾಖಲೆಗಳ ಪ್ರಕಾರ ನಾಯಿಗಳನ್ನು ಹಿಡಿಯಲು ಪುರಸಭೆ ಟೆಂಡರ್ ಕಾಲ್ ಮಾಡಲಾಗಿತ್ತು. ಹಾಗೂ 1 ನಾಯಿಗೆ 250 ರೂ.ನಂತೆ ನಿಗದಿಪಡಿಸಿ ಸ್ಥಳೀಯ ಪತ್ರಿಕೆಗಳಲ್ಲಿ ಜಾಹಿರಾತು ನೀಡಲಾಗಿತ್ತು. ಕೇರಳ ಮೂಲದ ವ್ಯಕ್ತಿಗೆ ಟೆಂಡರ್ ನೀಡಲಾಗಿದ್ದು, ಈತನ ಹೆಸರಿಗೆ 91,537 ರೂ. ಚೆಕ್ ನೀಡಲಾಗಿದೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ.

ಹಿಡಿದ ನಾಯಿಗಳನ್ನು ಏನು ಮಾಡಲಾಯಿತು? ಎಷ್ಟು ರೋಗಗ್ರಸ್ಥ ನಾಯಿಗಳು ಕಂಡು ಬಂದವು? ಈ ನಾಯಿಗಳಿಗೆ ರೋಗವಿದೆ ಎಂದು ಹೇಗೆ ಪರೀಕ್ಷಿಸಲಾಯಿತು? ಪರೀಕ್ಷಿಸಿದ ವೈದ್ಯರು ಯಾರು? ಹಾಗೂ ದಾಖಲೆಗಳಿವೆಯೇ? ಫೋಟೊ ಇದೆಯೇ? ಎಂದು ಪ್ರಶ್ನಿಸಿ ಹರೀಶ್ ಕೆ.ಬಿ. ಅವರು ಮಾಹಿತಿ ಪಡೆದುಕೊಳ್ಳಲು ಪುರಸಭೆಗೆ ಅರ್ಜಿ ಸಲ್ಲಿಸಿದ್ದರು. ಈ ಯಾವುದೇ ಪ್ರಶ್ನೆಗೆ ಪುರಸಭೆಯ ಮುಖ್ಯಾಧಿಕಾರಿ ಉತ್ತರಿಸಿರಲಿಲ್ಲ.

ಎಫ್‌ಐಆರ್ ದಾಖಲುಬೀದಿ ನಾಯಿಗಳನ್ನು ಕೊಂದು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆಯ ಮುಖ್ಯ ಅಧಿಕಾರಿ ವಿಲ್ಸನ್ ಹಾಗೂ ನಾಯಿ ಹಿಡಿಯುವ ಗುತ್ತಿಗೆದಾರ ಜಾರ್ಜ್ ರೊರ್ಬಟ್ ವಿರುದ್ದ ಎಫ್ಐಆರ್ ದಾಖಲಾಗಿತ್ತು.

ನಾಯಿಗಳನ್ನು ಕೊಲ್ಲುವುದು ಅಪರಾಧ: ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಣಿದಯಾ ಸಂಘದ ಕಾರ್ಯಕರ್ತ ಹರೀಶ್ ಬಿ.ಕೆ. ಮಾತನಾಡಿ, ಐಪಿಸಿ 1860 ಸೆಕ್ಷನ್ 428, 429 ಹಾಗೂ ಪಿಸಿಎ 1960 ಕಾಯ್ದೆ ಸೆಕ್ಷನ್ 11 ಪ್ರಕಾರ ನಾಯಿ ಕೊಲ್ಲುವುದು ಅಪರಾಧವಾಗಿರುತ್ತದೆ. ಬೀದಿ ನಾಯಿ ಸಮಸ್ಯೆ ಪರಿಹಾರಕ್ಕೆ ನಾಯಿಗಳನ್ನು ಕೊಲ್ಲುವುದು ಪರಿಹಾರವಲ್ಲ. ಇತರ ವೈಜ್ಞಾನಿಕ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಸಂತಾನೋತ್ಪತ್ತಿ ತಡೆಗಟ್ಟುವುದು ಸರಿಯಾದ ಕ್ರಮವಾಗಿದೆ ಎಂದರು. ನಾಯಿಗಳು ಮನುಷ್ಯರನ್ನು ಕಚ್ಚುವುದು ಗಂಭೀರವಾದ ಸಮಸ್ಯೆ. ಈ ಸಮಸ್ಯೆಗೆ ಪುರಸಭೆ ನೇರ ಹೊಣೆಯಾಗಿದೆ. ಹಂತ ಹಂತವಾಗಿ ಸಂತಾನ ಹರಣ ಮಾಡುವುದರಿಂದ ನಾಯಿಗಳು ದೈಹಿಕವಾಗಿ ಬಲಹೀನವಾಗುತ್ತವೆ. ನಾಯಿ ಸಂತಾನ ಕಡಿಮೆಯಾಗುತ್ತದೆ. ಈ ಮೂಲಕ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ. ಕೊಲ್ಲುವ ಕ್ರಮ ಅಮಾನವೀಯ ಹಾಗೂ ಪುರಸಭೆಯ ಅಧಿಕಾರಿಗಳಿಗೆ ಆದಾಯವಾಗುತ್ತದೆ ಎಂದರು.

ಪುರಸಭೆಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಕೋರ್ಟ್‌ನ ಆದೇಶದಿಂದ ನುಣುಚಿಕೊಳ್ಳುವ, ನವೀನ ತಂತ್ರಗಳ ಪ್ರಯೋಗವನ್ನು ಸಹಿಸುವುದಿಲ್ಲ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ಮತ್ತು ಪ್ರಾಣಿಗಳ ಜನನ ನಿಯಂತ್ರಣ ನಿಯಮಾವಳಿ 2001ನ್ನು ಕಡ್ಡಾಯವಾಗಿ ಪಾಲಿಸಬೇಕು. ನಾಯಿಗಳನ್ನು ಸಂತಾನ ಶಕ್ತಿ ಹರಣ ಚಿಕಿತ್ಸೆಗಾಗಿ ಹಿಡಿದಿದ್ದರೂ ಹಿಂದಿದ್ದ ಪ್ರದೇಶದಲ್ಲೇ ತಂದು ಬಿಡಬೇಕು.

ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪ್ರಕರಣ: ಸುಪ್ರೀಂ ಕೋರ್ಟ್ ಪ್ರಕರಣವನ್ನು ಕೈಗೆತ್ತಿಕೊಂಡ ಬಳಿಕ ಸುದ್ದಿ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಮಾಧ್ಯಮಗಳಲ್ಲಿ ಪ್ರಕಟವಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಸಾಮಾಜಿಕ ತಾಣಗಳಲ್ಲಿಯೂ ಸುದ್ದಿ ವೈರಲ್ ಆಗಿತ್ತು. ತಾಲೂಕಿನಲ್ಲಿ ಜನ ಸಾಮಾನ್ಯರಲ್ಲೂ ಚರ್ಚೆಯಾಗುತ್ತಿತ್ತು. ಊರಿನ ಬೀದಿನಾಯಿಯ ಸಾವಿನ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣೆ ನಡೆಸುವುದು ಜನಸಾಮಾನ್ಯರಿಗೆ ಸೋಜಿಗದ ಸಂಗತಿಯಾಗಿದೆ.

ಐಪಿಸಿ 1860 ಸೆಕ್ಷನ್ 428, 429 ಹಾಗೂ ಪಿಸಿಎ 1960 ಕಾಯ್ದೆ ಸೆಕ್ಷನ್ 11 ಪ್ರಕಾರ ನಾಯಿ ಕೊಲ್ಲುವುದು ಅಪರಾಧವಾಗಿರುತ್ತದೆ. ನಾಯಿಗಳನ್ನು ಕೊಲ್ಲುವುದು ಸಮಸ್ಯೆಗೆ ಪರಿಹಾರವಲ್ಲ. ಇತರ ವೈಜ್ಞಾನಿಕ ಅಂಶಗಳನ್ನು ಕಾರ್ಯರೂಪಕ್ಕೆ ತರಬೇಕು. ಸಂತಾನೋತ್ಪತ್ತಿ ತಡೆಗಟ್ಟುವುದು ಸರಿಯಾದ ಕ್ರಮವಾಗಿದೆ. ಕೊಲ್ಲುವ ಕ್ರಮ ಅಮಾನವೀಯ.

-ಹರೀಶ್ ಬಿ.ಕೆ., ಪ್ರಾಣಿದಯಾ ಸಂಘದ ಕಾರ್ಯಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News