ಎಲ್ಗಾರ್ ಪರಿಷದ್ ಪ್ರಕರಣ: ವರವರ ರಾವ್‌ಗೆ ನ. 26ರ ವರೆಗೆ ಪೊಲೀಸ್ ಕಸ್ಟಡಿ

Update: 2018-11-18 17:14 GMT

ಹೊಸದಿಲ್ಲಿ, ನ. 18: ಎಲ್ಗಾರ್ ಪರಿಷದ್ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ, ಲೇಖಕ ಹಾಗೂ ಕವಿ ವರವರ ರಾವ್ ಅವರನ್ನು ಪುಣೆಯ ಸೆಷನ್ಸ್ ನ್ಯಾಯಾಲಯ ನವೆಂಬರ್ 26ರ ವರೆಗೆ ಪೊಲೀಸ್ ವಶಕ್ಕೆ ನೀಡಿದೆ.

ಹೈದರಾಬಾದ್ ಉಚ್ಚ ನ್ಯಾಯಾಲಯ ನೀಡಿದ್ದ ಗೃಹ ಬಂಧನದ ಅವಧಿ ಶನಿವಾರ ಮುಗಿದ ಬಳಿಕ ಅವರನ್ನು ಪೊಲೀಸರ ವಶಕ್ಕೆ ನೀಡಲಾಯಿತು. ವರವರ ರಾವ್ ಅವರು ನಿಷೇಧಿತ ಸಿಪಿಐ-ಮಾವೋವಾದಿ ಸಂಘಟನೆಯ ಹಿರಿಯ ಹಾಗೂ ಸಕ್ರಿಯ ಕಾರ್ಯಕರ್ತ. ಅವರು ನೇಪಾಳ ಹಾಗೂ ಮಣಿಪುರದ ಸಂಪರ್ಕದ ಮೂಲಕ ಶಸ್ತ್ರಾಸ್ತ್ರಗಳನ್ನು ಹೊಂದುವುದು ಸೇರಿದಂತೆ ಹಲವು ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಗಡ್‌ಚಿರೋಳಿಯ ಸುರ್ಜಾಗಾಂಡ್‌ನಲ್ಲಿ ಅವರು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ. ಸಿಪಿಐ-ಮಾವೋವಾದಿಗಳೊಂದಿಗೆ ಸಂಪರ್ಕ ಹಾಗೂ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಕಾರಣವಾದ ಡಿಸೆಂಬರ್ 31ರ ಎಲ್ಗಾರ್ ಪರಿಷತ್‌ನ ಕಾರ್ಯಕ್ರಮ ಆಯೋಜಿಸಿದ ಆರೋಪದಲ್ಲಿ ಆಗಸ್ಟ್ 28ರಂದು ವರವರ ರಾವ್ ಅವರೊಂದಿಗೆ ಸಾಮಾಜಿಕ ಹೋರಾಟಗಾರರಾದ ಸುಧಾ ಭಾರದ್ವಾಜ್, ವೆರ್ನನ್ ಗೊನ್ಸಾಲ್ವಿಸ್, ಅರುಣ್ ಫೆರೇರಾ ಹಾಗೂ ಗೌತಮ್ ನೌಲಾಖಾ ಅವರನ್ನು ಪುಣೆ ನಗರ ಪೊಲೀಸರು ಬಂಧಿಸಿದ್ದರು.

ಈ ಸಾಮಾಜಿಕ ಹೋರಾಟಗಾರರು ಫ್ಯಾಶಿಸ್ಟ್ ವಿರೋಧಿ ರಂಗ ರೂಪಿಸುವುದಕ್ಕಾಗಿ ನಿಷೇಧಿತ ಸಿಪಿಐ-ಮಾವೇವೋದಿಗಳೊಂದಿಗೆ ಅತಿ ದೊಡ್ಡ ಸಂಚಿನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News