ಸಂಪುಟ ವಿಸ್ತರಣೆ ಬೇಗ ಆಗಲಿ: ಎಚ್.ಎಂ.ರೇವಣ್ಣ

Update: 2018-11-18 17:20 GMT

ಹೊಸದಿಲ್ಲಿ/ಬೆಂಗಳೂರು, ನ.18: ಸಂಪುಟ ವಿಸ್ತರಣೆ ಆದಷ್ಟು ಬೇಗ ಆಗಬೇಕು. ಖಾಲಿ ಇರುವ 8 ಸಚಿವ ಸ್ಥಾನ ಭರ್ತಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ. ರೇವಣ್ಣ ಒತ್ತಾಯಿಸಿದ್ದಾರೆ.

ರವಿವಾರ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಂಪುಟದಲ್ಲಿ ಇಷ್ಟೊಂದು ಸ್ಥಾನಗಳನ್ನು ಖಾಲಿ ಇರಿಸುವುದು ಪಕ್ಷಕ್ಕೂ, ರಾಜ್ಯಕ್ಕೂ ಒಳ್ಳೆಯದಲ್ಲ. ಕುರುಬ ಸಮುದಾಯದವರಿಗೆ ಸಚಿವ ಸಂಪುಟದಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು. ಆಷಾಢ, ಉಪ ಚುನಾವಣೆ ನೆಪ ಇರಿಸಿ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಂದಕ್ಕೆ ಹಾಕಲಾಗಿದೆ. ಈಗ ಕಾಲ ಕೂಡಿ ಬಂದಿದ್ದು ತಡ ಮಾಡದೆ ಆಕಾಂಕ್ಷಿಗಳಿಗೆ ಸಚಿವ ಸ್ಥಾನ ನೀಡಬೇಕು. ಈ ಕುರಿತು ಪಕ್ಷದ ರಾಜ್ಯ ಮುಖಂಡರು ಹೈಕಮಾಂಡ್ ಗಮನ ಸೆಳೆಯಬೇಕು ಎಂದು ರೇವಣ್ಣ ನುಡಿದರು.

ಕಾನೂನು ರೂಪಿಸಿ: ಎಸ್ಸಿ-ಎಸ್ಟಿ ಸಮುದಾಯದ ಪ್ರತಿಭಾವಂತರು ಸಾಮಾನ್ಯ ವರ್ಗದಿಂದ ಗೆಜೆಟೆಡ್ ಹುದ್ದೆ ಪಡೆಯುವ ಅವಕಾಶವನ್ನು ಕಸಿದುಕೊಳ್ಳುತ್ತಿರುವ ಕೆಪಿಎಸ್ಸಿ ಕ್ರಮ ಸರಿಯಲ್ಲ. ಈ ಸಂಬಂಧ ಮುಖ್ಯಮಂತ್ರಿಯವರು ಕೂಡಲೇ ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ಸೂಕ್ತ ಕಾನೂನು ರೂಪಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News