ಮಹಾರಾಷ್ಟ್ರ: ಸುದೀರ್ಘ ಹೋರಾಟದ ಬಳಿಕ ಮರಾಠಾ ಸಮುದಾಯಕ್ಕೆ ಮೀಸಲಾತಿ ಭಾಗ್ಯ

Update: 2018-11-18 18:25 GMT

ಮುಂಬೈ,ನ.18: ಮೀಸಲಾತಿಗಾಗಿ ಮರಾಠಾ ಸಮುದಾಯದ ಸುದೀರ್ಘ ಹೋರಾಟಕ್ಕೆ ಕೊನೆಗೂ ಗೆಲುವು ಸಿಕ್ಕಿದೆ. ಮರಾಠಾ ಸಮುದಾಯವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಮಹಾರಾಷ್ಟ್ರ ಹಿಂದುಳಿದ ವರ್ಗಗಳ ಆಯೋಗವು ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಸಮುದಾಯವು ಉದ್ಯೋಗಗಳಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಪಡೆಯಲಿದೆ ಎಂದು ರವಿವಾರ ಇಲ್ಲಿ ಪ್ರಕಟಿಸಿದರು.

ಇತರ ಹಿಂದುಳಿದ ವರ್ಗಗಳಿಗೆ(ಒಬಿಸಿ) ನೀಡಲಾಗಿರುವ ಮೀಸಲಾತಿಗೆ ಯಾವುದೇ ಚ್ಯುತಿಯುಂಟಾಗದಂತೆ ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸಲು ಆಯೋಗವು ಶಿಫಾರಸು ಮಾಡಿತ್ತು.

ಮರಾಠಾರುಗಳು ಇನ್ನು ಪ್ರತಿಭಟನೆ ನಡೆಸಬೇಕಾದ ಅಗತ್ಯವಿಲ್ಲ. ಎಲ್ಲ ಕಾನೂನು ಔಪಚಾರಿಕತೆಗಳನ್ನು ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ತನ್ನ ಸರಕಾರವು ಪ್ರಯತ್ನಿಸಲಿದೆ ಎಂದ ಫಡ್ನವೀಸ್,ಡಿ.1ರಂದು ಸಂಭ್ರಮಾಚರಣೆಗೆ ಸಜ್ಜಾಗುವಂತೆ ಮರಾಠಾ ಸಮುದಾಯವನ್ನು ಕೇಳಿಕೊಂಡರು.

ಸೋಮವಾರದಿಂದ ಆರಂಭಗೊಳ್ಳುವ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಈ ಸಂಬಂಧ ಮಸೂದೆಯು ಮಂಡನೆಯಾಗಲಿದೆ.

ಮಹಾರಾಷ್ಟ್ರವು ಈಗಾಗಲೇ ಶೇ.52ರಷ್ಟು ಮೀಸಲಾತಿಯನ್ನು ಹೊಂದಿದ್ದು, ಸರಕಾರವು ಮರಾಠರಿಗೆ ಶೇ.16ರಷ್ಟು ಮೀಸಲಾತಿಯನ್ನು ಕಲ್ಪಿಸುವ ಸಾಧ್ಯತೆಯಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಶೇ.62ಕ್ಕೇರಲಿದ್ದು, ಇದು ಸರ್ವೋಚ್ಚ್ಚ ನ್ಯಾಯಾಲಯವು ರಾಜ್ಯಗಳಿಗೆ ನಿಗದಿಗೊಳಿಸಿರುವ ಶೇ.50 ಮೀಸಲಾತಿ ಮಿತಿಗಿಂತ ಅಧಿಕವಾಗುತ್ತದೆ.

ವಿಶೇಷ ಪರಿಸ್ಥಿತಿಯಲ್ಲಿ ಶೇ.50ಕ್ಕೂ ಹೆಚ್ಚಿನ ಮೀಸಲಾತಿಯನ್ನು ಒದಗಿಸಬಹುದು ಎಂದು ಹೇಳಿದ ಫಡ್ನವೀಸ್ ತಮಿಳುನಾಡಿನ ನಿದರ್ಶನವನ್ನು ನೀಡಿದರು.

ತಮಿಳುನಾಡು ದೇಶದಲ್ಲಿ ಅತ್ಯಂತ ಹೆಚ್ಚು(ಶೇ.69) ಮೀಸಲಾತಿಯನ್ನು ಒದಗಿಸಿರುವ ರಾಜ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News