ಮಲೆನಾಡಿನಲ್ಲಿ ಅತಿವೃಷ್ಟಿ ಪಾಲಾದ ಕಾಫಿ, ಕಾಳುಮೆಣಸು

Update: 2018-11-18 18:29 GMT

ಚಿಕ್ಕಮಗಳೂರು, ನ.18: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರಸಕ್ತ ಕಾಫಿ ಕಟಾವಿಗೆ ಸಿದ್ಧತೆ ಆರಂಭವಾಗಿದೆ. ಈ ಬಾರಿ ಆರಂಭದಲ್ಲಿ ಜಿಲ್ಲೆಯಾದ್ಯಂತ ಉತ್ತಮ ಮಳೆ ಆದ ಪರಿಣಾಮ ಕಾಫಿ ಬೆಳೆಗಾರರು ಉತ್ತಮ ಕಾಫಿ, ಕಾಳು ಮೆಣಸಿನ ಫಸಲಿನ ನಿರೀಕ್ಷೆಯಲ್ಲಿದ್ದರು. ಉತ್ತಮ ಮಳೆಯಾಗಿದ್ದರಿಂದ ಕಾಫಿ ತೋಟಗಳು ಉತ್ತಮ ಫಸಲಿನಿಂದಲೇ ನಳನಳಿಸುತ್ತಿದ್ದರಿಂದ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ಕಾಫಿ ಹೂ ಮೊಗ್ಗಾಗಿ ಕಾಯಿ ಕಟ್ಟುವ ಹಂತದಲ್ಲಿ ಮಲೆನಾಡಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆ ಸುರಿದ ಪರಿಣಾಮ ಕಾಫಿ ತೋಟಗಳಲ್ಲಿನ ಬಹುತೇಕ ಫಸಲು ಅತೀವೃಷ್ಟಿಗೆ ತುತ್ತಾಗಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಈ ನಡುವೆ ಕಟಾವಿಗೆ ಬಂದಿರುವ ಕಾಫಿ ಬೆಳೆ ಕೊಯ್ಲು ಮಾಡಲು ಕೂಲಿ ಕಾರ್ಮಿಕರ ಕೊರತೆ ಎದುರಾಗಿದ್ದು, ಇದು ಬೆಳೆಗಾರರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಚಿಕ್ಕಮಗಳೂರು ಜಿಲ್ಲೆ ರೊಬಾಸ್ಟಾ ಹಾಗೂ ಅರೇಬಿಕಾ ಕಾಫಿ ಬೆಳೆಗೆ ಹೆಸರಾಗಿದ್ದು, ಜಿಲ್ಲೆಯಲ್ಲಿ ಕಾಫಿ ಬೆಳೆ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಕಾಫಿ ಬೆಳೆ ಪ್ರತ್ಯಕ್ಷ, ಪರೋಕ್ಷವಾಗಿ ಲಕ್ಷಾಂತರ ಮಂದಿಗೆ ಉದ್ಯೋಗವಕಾಶ ಒದಗಿಸಿದ್ದು, ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೂ ಕಾಫಿ ಬೆಳೆ ತನ್ನದೇಯಾದ ಕೊಡುಗೆ ನೀಡಿದೆ. ಅಡಿಕೆ, ಕಾಳು ಮೆಣಸು ಹೊರತು ಪಡಿಸಿದರೆ ಕಾಫಿ ಬೆಳೆ ಜಿಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ದೇಶದಲ್ಲೇ ಅತೀ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಒಂದಾಗಿದೆ. ಜಿಲ್ಲೆಯ ಕಾಫಿಗೆ ವಿದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಅದರಲ್ಲೂ ಅರೇಬಿಕಾ ಕಾಫಿಗೆ ಭಾರೀ ಬೇಡಿಕೆ ಇದ್ದು, ಯೂರೋಪ್ ದೇಶಗಳಿಗೆ ಇಲ್ಲಿನ ಕಾಫಿ ರಫ್ತಾಗುವುದರಿಂದ ದೇಶದ ವಿದೇಶೀ ವಿನಿಯಮಯದ ಆದಾಯದಲ್ಲಿ ಕಾಫಿ ಬೆಳೆಯದ್ದು ಸಿಂಹಪಾಲಿದೆ. 

ಜಿಲ್ಲೆಯಲ್ಲಿ ರೊಬಾಸ್ಟಾ, ಅರೇಬಿಕಾ ಕಾಫಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಚಿಕ್ಕಮಗಳೂರು ತಾಲೂಕು, ಆಲ್ದೂರು ಹೋಬಳಿ, ಮೂಡಿಗೆರೆ, ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ವಾರ್ಷಿಕ ಲಕ್ಷಾಂತರ ಟನ್ ಅರೇಬಿಕಾ ಕಾಫಿ ಉತ್ಪಾದನೆಯ ಕೇಂದ್ರವಾಗಿರುವ ಜಿಲ್ಲೆಯಲ್ಲಿ ಈ ಮಳೆಗಾಲದ ಆರಂಭದಲ್ಲಿ ಉತ್ತಮ ಮಳೆ ಸುರಿದ ಪರಿಣಾಮ ಕಾಫಿತೋಟಗಳಲ್ಲಿ ಅರಳಿ ನಿಂತ ಕಾಫಿ ಹೂ ಕಂಡು  ಬೆಳೆಗಾರರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು. ಆದರೆ ನಂತರ ಜಿಲ್ಲಾದ್ಯಂತ ಅತೀವೃಷ್ಟಿಯಾದ ಪರಿಣಾಮ ಬಹುತೇಕ ಕಾಫಿ ತೋಟಗಳ ಕಾಫಿ ಫಸಲು ಮಳೆ ನೀರಿಗೆ ಆಹುತಿಯಾಗಿದೆ. ಅತೀವೃಷ್ಟಿ ಕಾಫಿ ಬೆಳೆಯೊಂದಿಗೆ ಕಾಫಿ ತೋಟಗಳ ಉಪಬೆಳೆಯಾದ ಕಾಳು ಮೆಣಸಿನ ಫಸಲನ್ನೂ ಬಹುತೇಕ ನಾಶ ಮಾಡಿದೆ. ಬಂಪರ್ ಕಾಫಿ, ಕಾಳು ಮೆಣಸು ಬೆಳೆಯ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಸದ್ಯ ಬೆಳೆ ನಷ್ಟದಿಂದ ಕಂಗಾಲಾಗಿದ್ದು, ರಾಜ್ಯ ಹಾಗೂ ಕೇಂದ್ರ ಸರಕಾರಗಳಿಂ ಪರಿಹಾರದ ಪ್ಯಾಕೇಜ್ ಘೋಷಣೆಗೆ ಆಗ್ರಹಿಸುತ್ತಿದ್ದಾರೆ.

ಸಾಮಾನ್ಯವಾಗಿ ಅರೇಬಿಕಾ ಕಾಪಿಯನ್ನು ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಕಟಾವು ಮಾಡಲಾಗುತ್ತದೆ. ಪ್ರಸಕ್ತ ಜಿಲ್ಲೆಯ ಅರೇಬಿಕಾ ಕಾಫಿ ತೋಟಗಳಲ್ಲಿ ಅಳಿದುಳಿದಿರುವ ಕಾಫಿ ಬೆಳೆ ಕಟಾವಿಗೆ ಸಿದ್ಧತೆ ಆರಂಭಿಸಿದ್ದಾರೆ. ಆದರೆ ಜಿಲ್ಲೆಯಾದ್ಯಂತ ಅರೇಬಿಕಾ ಕಾಫಿ ಕಟಾವಿಗೆ ಬಂದಿದ್ದರೂ ಕಾಫಿ ಕೊಯ್ಲಿಗೆ ಕಾರ್ಮಿಕರು ಸಿಗದೇ ಪರಿತಪಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ಮೂರರಿಂದ 5 ತಿಂಗಳು ಕಾಫಿ ಕಟಾವು ನಡೆಯುತ್ತದೆ. ಈ ಅವಧಿಯಲ್ಲಿ ಮಲೆನಾಡಿನಲ್ಲಿ ಬೇಡಿಕೆಗೆ ತಕ್ಕಂತೆ ಕಾರ್ಮಿಕರ ಲಭ್ಯತೆ ಇಲ್ಲವಾದ್ದರಿಂದ ಕಾಫಿ ಕಟಾವು ಆರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದ ಕಾರ್ಮಿಕರು ಕಾಫಿ ಕಟಾವಿಗೆ ಆಗಮಿಸುವುದು ವಾಡಿಕೆಯಾಗಿದೆ. ಆದರೆ ಈ ಬಾರಿ ಈ ಕಾರ್ಮಿಕರ ಪೂರೈಕೆಯು ಸಕಾಲದಲ್ಲಿ ಆಗದ ಕಾರಣದಿಂದ ಸದ್ಯ ಕಾಫಿ ಕೊಯ್ಲು ಆರಂಭವಾಗಿದ್ದರೂ ತೋಟಗಳು ಕಾರ್ಮಿಕರಿಲ್ಲದೇ ಭಣಗುಡುತ್ತಿವೆ. 

ಸದ್ಯ ಜಿಲ್ಲೆಯ ಅರೇಬಿಕಾ ಕಾಫಿ ತೋಟಗಳಲ್ಲಿ ಅಳಿದುಳಿದಿರುವ ಕಾಫಿ ಹಣ್ಣಾಗಿ ನಿಂತಿವೆ. ಈ ಕಾಫಿ ಬೆಳೆಯನ್ನು ಸಕಾಲದಲ್ಲಿ ಕೊಯ್ಲು ಮಾಡದಿದ್ದಲ್ಲಿ ಅಳಿದುಳಿದಿರುವ ಬೆಳೆಯೂ ಪ್ರಾಣಿ ಪಕ್ಷಿಗಳ ಪಾಲಾಗಲಿವೆ ಎಂಬ ಚಿಂತೆ ಬೆಳೆಗಾರನ್ನು ಕಾಡುತ್ತಿದೆ. ಈ ಕಾರಣಕ್ಕೆ ಕಾಫಿ ತೋಟಗಳ ಮಾಲಕರು ಸಿಕ್ಕ ಸ್ಥಳೀಯ ಕಾರ್ಮಿಕರಿಂದಲೇ ಅರೇಬಿಕಾ ಕಾಫಿ ಕಟಾವು ಮಾಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿಯ ಅತೀವೃಷ್ಟಿ ಕಾಫಿಯೊಂದಿಗೆ ಅದರ ಉಪ ಬೆಳೆಯಾಗಿರುವ ಕಾಳು ಮೆಣಸು ಬೆಳೆಯನ್ನೂ ಆಪೋಶನಕ್ಕೆ ಪಡೆದಿದೆ. ಇದರಿಂದ ಈ ಬಾರಿ ತೋಟಗಳಲ್ಲಿ ಉಳಿದಿರುವ ಬೆಳೆಗಳಿಂದ ಬರುವ ಆದಾಯ ತೋಟಗಳ ನಿರ್ವಹಣೆ ಹಾಗೂ ಕಾರ್ಮಿಕರ ಕೂಲಿಗೆ ಸರಿದೂಗಲಿದೆ. 

ಕಾಳುಮೆಣಸು ಧಾರಣೆ ಕುಸಿತ; ಗಾಯದ ಮೇಲೆ ಬರೆ

ಮಲೆನಾಡಿನಲ್ಲಿ ಕಾಫಿ ಬೆಳೆಯೊಂದಿಗೆ ಕಾಳು ಮೆಣಸನ್ನು ಉಪಬೆಳೆಯನ್ನಾಗಿ ಬೆಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಫಿ ಬೆಲೆ ಏರಿಳಿತ ಸಾಮಾನ್ಯವಾಗಿದೆ. ಕಪ್ಪುಚಿನ್ನ ಎಂದು ಕರೆಸಿಕೊಳ್ಳುತ್ತಿದ್ದ ಕಾಳು ಮೆಣಸು ಬೆಳೆಗಿದ್ದ ಧಾರಣೆ ಬೆಳೆಗಾರರನ್ನು ಇಂತಹ ಬೆಲೆ ಏರಿಳಿತದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರ ಕೈ ಹಿಡಿಯುತ್ತಿತ್ತು. ಆದರೆ ಈ ಬಾರಿಯ ಅತೀವೃಷ್ಟಿ ಕಾಫಿಯೊಂದಿಗೆ ಕಾಳು ಮೆಣಸಿನ ಫಸಲನ್ನೂ ನೆಲಕಚ್ಚುವಂತೆ ಮಾಡಿರುವುದರಿಂದ ಕಾಫಿ ಬೆಳೆಗಾರರು ಸಂಕಷ್ಟ ಎದುರಿಸುವಂತಾಗಿದೆ. ಆದರೆ ಕಳೆದೊಂದು ವರ್ಷದಿಂದ ಕಾಳು ಮೆಣಸಿನ ಧಾರಣೆಯೂ ಪಾತಾಳಕ್ಕೆ ಕುಸಿದಿದ್ದು, ಸದ್ಯ ಪ್ರತೀ ಕೆಜಿಗೆ 280 ರಿಂದ 300 ರೂ. ಧಾರಣೆ ಇದೆ. ಈ ಬೆಲೆ ಇದುವರೆಗೂ ಚೇತರಿಕೆ ಕಂಡಿಲ್ಲ. ಇದು ಬೆಳೆಗಾರರ ಗಾಯದ ಮೇಲೆ ಉಪ್ಪು ಸುರಿದಂತಾಗಿದೆ. ಈ ಹಿಂದೆ ಕಾಳು ಮೆಣಸಿನ ಬೆಲೆ ಸರಾಸರಿ 500 ರೂ. ನಿಂದ 800 ರೂ. ಇರುತ್ತಿತ್ತು. ಈ ಧಾರಣೆ ಕಾಫಿ ಬೆಲೆ ಕುಸಿತದಂತಹ ಸಂದರ್ಭಗಳಲ್ಲಿ ಬೆಳೆಗಾರರ ನೆರವಿಗೆ ಬರುತ್ತಿತ್ತು. ಆದರೆ ಈ ಬಾರಿ ಮಾತ್ರ ಬೆಳೆಯೂ ಇಲ್ಲ, ಬೆಲೆಯೂ ಇಲ್ಲದಂತಾಗಿರುವುದರಿಂದ ರೈತರು ಸರಕಾರದ ನೆರವಿನ ಹಸ್ತಕ್ಕೆ ಎದುರು ನೋಡುವಂತಾಗಿದೆ. ತೋಟಗಳ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಜಿಲ್ಲೆಯ ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.


ಮಲೆನಾಡಿನಲ್ಲಿ ಅತೀವೃಷ್ಟಿಯಿಂದ ಬಹುತೇಕ ಕಾಫಿ, ಕಾಳು ಮೆಣಸು ನಾಶವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ನಾಟಕ ಬೆಳೆಗಾರರ ಸಂಘದ ವತಿಯಿಂದ ಈಗಾಗಲೇ ಕಾಫಿ ತೋಟಗಳ ಸ್ಥಿತಿ ಪರಿಶೀಲಿಸಿ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಸೂಕ್ತ ಪರಿಹಾರದ ಪ್ಯಾಕೇಜ್ ಘೋಷಣೆಗೆ ಒತ್ತಾಯಿಸಿದೆ. ಆದರೆ ಈ ಬಗ್ಗೆ ಸರಕಾರಗಳು ಇದುವರೆಗೂ ಸಮರ್ಪಕವಾಗಿ ಸ್ಪಂದಿಸಿಲ್ಲ. ಕಾಫಿ ಮಂಡಳಿಯೂ ಕಾಟಾಚಾರದ ಸಮೀಕ್ಷೆ ನಡೆಸಿ ಬೆಳೆಗಾರರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ರಾಜ್ಯ ಸಂಸದರು ಕಾಫಿ ಬೆಳೆಗಾರರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೇಂದ್ರ ಸರಕಾರ ವಿದೇಶಿ ಕಾಳು ಮೆಣಸು ಆಮದಿಗೆ ಸಹಕಾರ ನೀಡಿದ್ದರಿಂದ ಸ್ಥಳೀಯ ಕಾಳು ಮೆಣಸಿಗೆ ಧಾರಣೆ ಇಲ್ಲದಂತಾಗಿದೆ. ಈ ಪರಿಸ್ಥಿತಿ ರಾಜ್ಯದ ಕಾಫಿ ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಲಿದೆ. ಸರಕಾರಗಳು ಸೂಕ್ತ ಸಮಯದಲ್ಲಿ ಬೆಳೆ ಪರಿಹಾರ ನಷ್ಟದ ಪ್ಯಾಕೇಜ್ ನೀಡದಿದ್ದಲ್ಲಿ ಬೆಳೆಗಾರರು ಆತ್ಮಹತ್ಯೆಯ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ. 
- ಅಶೋಕ್ ಸೂರಪ್ಪನಹಳ್ಳಿ, ಕಾಫಿ ಬೆಳೆಗಾರ

Writer - ಕೆ.ಎಲ್.ಶಿವು

contributor

Editor - ಕೆ.ಎಲ್.ಶಿವು

contributor

Similar News