ತುಕ್ಕು ಹಿಡಿಯುತ್ತಿರುವ ಅಕ್ರಮ ಗಣಿಗಾರಿಕೆ ವರದಿ: ನ್ಯಾ. ಸಂತೋಷ್ ಹೆಗ್ಡೆ ಬೇಸರ

Update: 2018-11-18 18:34 GMT

ಶಿವಮೊಗ್ಗ, ನ. 18: ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನೀಡಲಾಗಿದ್ದ ವರದಿಯು ತುಕ್ಕು ಹಿಡಿಯುತ್ತಿದೆ ಎಂದು ಲೋಕಾಯುಕ್ತ ಸಂಸ್ಥೆಯ ನಿವೃತ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆಯವರು ಬೇಸರ ವ್ಯಕ್ತಪಡಿಸಿದ್ದಾರೆ. 

ಭಾನುವಾರ ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಜಿಲ್ಲಾ ಶಾಖೆ ಆಯೋಜಿಸಿದ್ದ, 'ಪಶ್ಚಿಮ ಘಟ್ಟ ಉಳಿಸಿ ಅಭಿಯಾನ'ದ ಅಂಗವಾಗಿ ಮಾಧವ ಗಾಡ್ಗೀಳ್ ವರದಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು. 
ಕಳೆದ ಹಲವು ವರ್ಷಗಳಿಂದ ಅವ್ಯಾಹತವಾಗಿ ಖನಿಜ ಸಂಪತ್ತು ಲೂಟಿ ಮಾಡಲಾಗಿದೆ. ಅಕ್ರಮ ಗಣಿಗಾರಿಕೆಯಿಂದ ಅಪಾರ ಪ್ರಮಾಣದ ಅರಣ್ಯವೂ ನಾಶವಾಗಿದೆ. ಅಮೂಲ್ಯ ಖನಿಜ ಸಂಪತ್ತಿನ ಲೂಟಿ ಇದೇ ರೀತಿ ಮುಂದುವರಿದರೆ, ಭವಿಷ್ಯದಲ್ಲಿ ದೇಶವು ಮತ್ತೊಂದು ರಾಷ್ಟ್ರದಿಂದ ಖನಿಜಗಳನ್ನು ಆಮದು ಮಾಡಿಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಲಿದೆ ಎಂದರು. 

ವಿಷಾದ: ಈ ಹಿಂದೆ ಅಕ್ರಮ-ಭ್ರಷ್ಟಾಚಾರ ನಡೆಸಿ ಜೈಲಿಗೆ ಹೋಗಿ ಬಂದವರನ್ನು ಸಮಾಜ ಬಹಿಷ್ಕರಿಸುತ್ತಿತ್ತು. ಆದರೆ ಪ್ರಸ್ತುತ ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸನ್ಮಾನಿಸಲಾಗುತ್ತಿದೆ. ಇದು ನಿಜಕ್ಕೂ ವಿಷಾದಕರ ಸಂಗತಿಯಾಗಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. 

ಭ್ರಷ್ಟಾಚಾರದ ಪ್ರಮಾಣ ಹೆಚ್ಚಾಗಿದೆ. ಮೌಲ್ಯಗಳು ಕುಸಿಯುತ್ತಿವೆ. ಮಾನವನ ಅತೀಯಾದ ದುರಾಸೆಯಿಂದ ಪರಿಸರ ಕೂಡ ನಾಶವಾಗುತ್ತಿದೆ. ಕೆಲವೇ ಕೆಲ ವ್ಯಕ್ತಿಗಳ ದುರಾಸೆಗೆ ಕಾನೂನುಗಳು ಬಲಿಯಾಗುತ್ತಿವೆ. ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗವು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವೈಫಲ್ಯಕ್ಕೀಡಾಗುತ್ತಿವೆ ಎಂದರು. 

ರಕ್ಷಣೆಯಾಗಬೇಕು: ಅತ್ಯಮೂಲ್ಯ ಪ್ರಾಕೃತಿಕ ಸಂಪತ್ತಾಗಿರುವ ಪಶ್ಚಿಮಘಟ್ಟ ಸಂರಕ್ಷಣೆಯಾಗಬೇಕು. ವಿನಾಶ ತಡೆಗಟ್ಟಬೇಕು. ಮುಂದಿನ ಪೀಳಿಗೆಗೆ ಇದನ್ನು ಉಳಿಸಿ, ಬೆಳೆಸಬೇಕಾಗಿದೆ. ಈ ಕಾರಣದಿಂದ ಪಶ್ಚಿಮಘಟ್ಟ ಸಂರಕ್ಷಣೆಗೆ ಸಂಬಂಧಿಸಿದ ಮಾಧವ ಗಾಡ್ಗೀಳ್ ಹಾಗೂ ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೊಳಿಸಲು ಕೇಂದ್ರ - ರಾಜ್ಯ ಸರ್ಕಾರಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪರಿಸರ ಸಂರಕ್ಷಣೆಗಾಗಿ ಹಲವಾರು ಜನರು, ಸಂಘಟನೆಗಳು ಹೋರಾಟ ನಡೆಸುತ್ತಿವೆ. ಮುಂದಿನ ಪೀಳಿಗೆಯಲ್ಲಿಯೂ ಹೋರಾಟ ಭಾವನೆ ಬಿತ್ತಬೇಕಾಗಿದೆ. ಯುವಕ - ಯುವತಿಯರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ತಿಳಿಸಿದರು. 

ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರರವರು ಮಾತನಾಡಿ, ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ವರದಿಗಳಿಗೆ ಸಂಬಂಧಿಸಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ರೈತ ಸಮುದಾಯದಲ್ಲಿ ಹಲವು ರೀತಿಯ ಗೊಂದಲ-ಸಂಶಯಗಳಿವೆ. ಈ ಕುರಿತಂತೆ ರೈತರು ಹಾಗೂ ಘಟ್ಟ ಭಾಗದ ಜನರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯವನ್ನು ಸರ್ಕಾರ ಮಾಡಬೇಕಾಗಿದೆ. ಈ ವರದಿಗಳಿಂದ ಅವರ ಜೀವನದ ಮೇಲೆ ಏನಾದರೂ ಪರಿಣಾಮ ಬೀರಲಿದೆಯೇ ಎಂಬುವುದರ ಬಗ್ಗೆ ಕೂಲಂಕಷ ಚರ್ಚೆಯಾಗಬೇಕಾಗಿದೆ ಎಂದರು. 

ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರು ಮಾತನಾಡಿ, ಎತ್ತಿನಹೊಳೆ ಯೋಜನೆಯಿಂದ ಪಶ್ಚಿಮಘಟ್ಟದ ಮೇಲಾಗುವ ಪರಿಣಾಮದ ಕುರಿತಂತೆ ವಿವರಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಕೆ.ಎಸ್.ಗೋವಿಂದಾಚಾರ್ಯ, ಬಸವರಾಜ ಪಾಟೀಲ್, ಚರಕ ಸಂಸ್ಥೆಯ ಪ್ರಸನ್ನ ಸೇರಿದಂತೆ ಮೊದಲಾದವರಿದ್ದರು. 

ಸರ್ಕಾರಗಳಲ್ಲಿ ವ್ಯತ್ಯಾಸ ಕಂಡುಬರುತ್ತಿಲ್ಲ: ರಂಗಕರ್ಮಿ ಪ್ರಸನ್ನ
'ಪರಿಸರ ಸಂರಕ್ಷಣೆ ಸಮಗ್ರ ಸತ್ಯ ನಮ್ಮ ರೈತರು ಹಾಗೂ ಕುಶಲಕರ್ಮಿಗಳಿಗೆ ಚೆನ್ನಾಗಿ ಗೊತ್ತಿದೆ. ಆದರೆ ನಾವು ಹೇರಿರುವ ಪ್ರತ್ಯೇಕತೆಯ ಜ್ಞಾನದಿಂದ ಅವರ ಮನಸ್ಸುಗಳು ಕಲುಷಿತಗೊಳ್ಳುವಂತಾಗಿದೆ. ಸದ್ಯ ಕೇಂದ್ರ - ರಾಜ್ಯ ಸರ್ಕಾರಗಳನ್ನು ಗಮನಿಸಿದರೆ, ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ರಾಜಕೀಯ ರಂಗಕ್ಕೆ ನೀಡುತ್ತಿರುವ ಪ್ರಾಮುಖ್ಯತೆ ಕಡಿಮೆಯಾಗಬೇಕು. ಸರ್ಕಾರವನ್ನು ದೂಷಿಸುತ್ತ ಕೂರದೆ, ಹೊಸ ಬದಲಾವಣೆಗೆ ನಾವೆಲ್ಲರೂ ಮುಂದಾಗಬೇಕು. ಹೊಸ ಬದುಕು ರೂಪಿಸಿಕೊಳ್ಳುವತ್ತ ದೃಢ ಹೆಜ್ಜೆಯಿಡಬೇಕು. ಪಶ್ಚಿಮಘಟ್ಟ ಸಂರಕ್ಷಣೆಯಾಗಬೇಕು. ಅಮೂಲ್ಯ ಸಂಪತ್ತು ಉಳಿಯಬೇಕು. ಘಟ್ಟ ವ್ಯಾಪ್ತಿಯ ಜನರಲ್ಲಿಯೂ ಜಾಗೃತಿ ಮೂಡಿಸಬೇಕು' ಎಂದು ಹಿರಿಯ ರಂಗಕರ್ಮಿ, ಚರಕ ಸಂಸ್ಥೆಯ ಪ್ರಸನ್ನರವರು ಅಭಿಪ್ರಾಯಪಟ್ಟಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News