ದಾವಣಗೆರೆ: ಕೇಂದ್ರ ಬರ ಅಧ್ಯಯನ ತಂಡದಿಂದ ಹಳ್ಳಿಗಳಿಗೆ ಭೇಟಿ; ರೈತರೊಂದಿಗೆ ಚರ್ಚಿಸಿ ಮಾಹಿತಿ ಕಲೆಹಾಕಿದ ತಂಡ

Update: 2018-11-18 18:37 GMT

ದಾವಣಗೆರೆ, ನ.18: ಜಿಲ್ಲೆಯ ದಾವಣಗೆರೆ ತಾಲೂಕು, ಹರಪನಹಳ್ಳಿ, ಜಗಳೂರು ತಾಲೂಕಿನ ವಿವಿಧ ಗ್ರಾಮಗಳಿಗೆ ಕೇಂದ್ರ ಬರ ಅಧ್ಯಯನ ತಂಡವು ರವಿವಾರ ಕೇಂದ್ರ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ಅಮಿತಾಭ್ ಗೌತಮ್, ಬಿ.ಕೆ.ಶ್ರೀವಾಸ್ತವ್, ಎಸ್.ಕೆ.ಶರ್ಮ ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು.

ತಾಲೂಕುಗಳ ಬರಪೀಡಿತ ಹಳ್ಳಿಗಳಲ್ಲಿ ಕುಡಿಯುವ ನೀರು, ಬೆಳೆ ಹಾನಿ, ಮತ್ತಿತರ ಸಮಸ್ಯೆಗಳ ಪರಿಶೀಲನೆ ಕೈಗೊಂಡಿತು. ಹರಪನಹಳ್ಳಿ ತಾಲೂಕು ಬೆಣ್ಣೆಹಳ್ಳಿ, ಮತ್ತಿಹಳ್ಳಿ, ಜಗಳೂರು ತಾಲೂಕು ಬಸವನಕೋಟೆ ಮತ್ತು ದಾವಣಗೆರೆ ತಾಲೂಕು ಆನಗೋಡು ಗ್ರಾಮಗಳಲ್ಲಿ ಕೇಂದ್ರ ತಂಡ ಬರ ಅಧ್ಯಯನ ನಡೆಸಿತು.

ಬೆಣ್ಣೆಹಳ್ಳಿ ಗ್ರಾಮದಲ್ಲಿ ನಷ್ಟಕ್ಕೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ಗ್ರಾಮದ ಬಿ.ಜೆ.ಮಂಜುನಾಥ ಮಾತನಾಡಿ, ತನ್ನ ಭತ್ತದ ಇಳುವರಿ ಕುಸಿದಿದ್ದು, ಬೆಳೆಗಾಗಿ 60 ಸಾವಿರ ರೂ. ಖರ್ಚು ಮಾಡಿದ್ದರೂ ನಷ್ಟವಾಗಿದೆ ಎಂದರು. ಇದಕ್ಕೆ ಅಧಿಕಾರಿಗಳು, ಬೆಳೆ ವಿಮೆ ಮಾಡಿಸಿರಲಿಲ್ಲವೇ? ಎಂದು ರೈತನನ್ನು ಪ್ರಶ್ನಿಸಿದರು. ಕಳೆದ ವರ್ಷದ ವಿಮಾ ಹಣವೇ ಬಂದಿಲ್ಲ, ಹಾಗಾಗಿ ಈ ಬಾರಿ ಮಾಡಿಸಿರಲಿಲ್ಲ. 5 ವರ್ಷದಿಂದ ಭತ್ತ ಬೆಳೆಯುತ್ತಿದ್ದು, 3 ವರ್ಷ ಚೆನ್ನಾಗಿ ಇಳುವರಿ ಬಂದಿತ್ತು. ಕಳೆದೆರೆಡು ವರ್ಷ ನಷ್ಟವಾಗಿದೆ ಎಂದು ರೈತ ಮಂಜುನಾಥ್ ತಿಳಿಸಿದರು. ಜಿಲ್ಲೆಯಲ್ಲಿ 4.9 ಕೋಟಿ ರೂ. ಬೆಳೆ ವಿಮೆ ಹಣ ಬಾಕಿ ಇರುವುದರಿಂದ ರೈತರು ವಿಮಾ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಹಣ ಬಿಡುಗಡೆಗೆ ರಾಜ್ಯ ಸರಕಾರ ಸೂಚಿಸಿದ್ದರೂ, ವಿಮಾ ಕಂಪೆನಿಗಳು ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು.

ಆನಗೋಡು ಗ್ರಾಮದ ರೈತ ವಿರೂಪಾಕ್ಷಪ್ಪಎಂಬುವರ ಜಮೀನಿಗೆ ಭೇಟಿ ನೀಡಿದ್ದ ತಂಡ, ಮೆಕ್ಕೆಜೋಳ ಬೆಳೆ ಹಾಳಾಗಿರುವುದನ್ನು ಪರಿಶೀಲಿಸಿತು.
ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳಲ್ಲಿ ನೀರು ಬರುತ್ತಿಲ್ಲ. ಸಾಮಾನ್ಯ ವರ್ಗದ ಬಡ ರೈತರಿಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಸಲು ವ್ಯವಸ್ಥೆಯಾಗಬೇಕು ಎಂದು ರೈತರು ಮನವಿ ಮಾಡಿದರು. ಜಿಪಂ ಸಿಇಒ ಎಸ್.ಅಶ್ವತಿ, ಜಂಟಿ ಕೃಷಿ ನಿರ್ದೇಶಕ ಶರಣಪ್ಪಮುದಗಲ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ವೇದಮೂರ್ತಿ, ತಹಶೀಲ್ದಾರರು, ಕೃಷಿ ಇಲಾಖೆ ಸಹಾಯ ನಿರ್ದೇಶಕರು ಉಪಸ್ಥಿತರಿದ್ದರು.

‘ಸೂಕ್ತ ನೆರವು ನೀಡುವಂತೆ ಕೇಂದ್ರಕ್ಕೆ ಶಿಫಾರಸ್ಸು’

ಜಿಲ್ಲೆಯ ಬರ ಪರಿಸ್ಥಿತಿ ಗಮನಕ್ಕೆ ಬಂದಿದ್ದು, ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಉತ್ತಮ ಶಿಫಾರಸುಗಳನ್ನು ಮಾಡುತ್ತೇವೆ. ಬೆಂಗಳೂರಿನಲ್ಲಿ ಸಭೆ ನಡೆಸಿ, ಸಮಗ್ರ ವರದಿ ತಯಾರಿಸಿ ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತೇವೆ. ಪರಿಶೀಲನೆ ಸಂದರ್ಭದಲ್ಲಿ ಬೆಳೆ, ನೀರು, ಮೇವು ಪರಿಸ್ಥಿತಿ ಗಮನಕ್ಕೆ ಬಂದಿದ್ದು, ಅದರ ಆಧಾರದ ಮೇಲೆ ಕೇಂದ್ರಕ್ಕೆ ಸೂಕ್ತ ಶಿಫಾರಸು ಮಾಡುತ್ತೇವೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ ಅಮಿತಾಭ್ ಗೌಮ್ ಸುದ್ದಿಗಾರರಿಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News