2019ರ ಚುನಾವಣೆ: ಶಿವಸೇನೆ ಘೋಷವಾಕ್ಯ ಏನು ಗೊತ್ತೇ?

Update: 2018-11-19 03:56 GMT

ಮುಂಬೈ, ನ.19: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಭಿಯಾನವನ್ನು ತೀವ್ರಗೊಳಿಸಲು ನಿರ್ಧರಿಸಿರುವ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, "ಮೊದಲು ಮಂದಿರ, ಬಳಿಕ ಸರ್ಕಾರ" ಎಂಬ ಘೋಷವಾಕ್ಯವನ್ನು ಪ್ರಕಟಿಸಿದ್ದಾರೆ.

ಅಯೋಧ್ಯೆಗೆ ಈ ತಿಂಗಳ 24 ಹಾಗೂ 25ರಂದು ನೀಡುವ ತಮ್ಮ ಭೇಟಿಯ ಪೂರ್ವಸಿದ್ಧತೆಗಳ ಬಗ್ಗೆ ಹಿರಿಯ ಮುಖಂಡರ ಜತೆ ಚರ್ಚಿಸುವ ವೇಳೆ ಈ ನಿರ್ಧಾರ ಪ್ರಕಟಿಸಿದರು. ಮಹಾರಾಷ್ಟ್ರ ಮಾತ್ರವಲ್ಲದೇ ಇತರ ರಾಜ್ಯಗಳ ಮುಖಂಡರೂ ಈ ಸಭೆಯಲ್ಲಿ ಭಾಗವಹಿಸಿದ್ದರು.

"ಹರ್ ಹಿಂದೂ ಕಿ ಯಹಿ ಪುಕಾರ್, ಪೆಹ್ಲೆ ಮಂದಿರ್ ಫಿರ್ ಸರ್ಕಾರ್ (ಎಲ್ಲ ಹಿಂದೂಗಳ ಬೇಡಿಕೆ ಒಂದೇ; ಮೊದಲು ಮಂದಿರ, ಬಳಿಕ ಸರ್ಕಾರ) ಎಂದು ಸ್ಪಷ್ಟಪಡಿಸಿದರು. ಮಹಾರಾಷ್ಟ್ರ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಅಂಗಪಕ್ಷವಾಗಿರುವ ಶಿವಸೇನೆ, ಕಳೆದ ತಿಂಗಳು ನಡೆದ ವಾರ್ಷಿಕ ದಸರಾ ರ್ಯಾಲಿಯಲ್ಲಿ, ಮಂದಿರ ನಿರ್ಮಾಣದ ಬೇಡಿಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿತ್ತು.

ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷವಾದರೂ ಮಂದಿರ ನಿರ್ಮಿಸಲು ಅಸಮರ್ಥವಾಗಿರುವ ಬಿಜೆಪಿ ವಿರುದ್ಧ ಶಿವಸೇನೆ ಸದಾ ಟೀಕಾಸ್ತ್ರ ಪ್ರಯೋಗಿಸುತ್ತಲೇ ಬಂದಿತ್ತು. ರಾಜ್ಯಾದ್ಯಂತ ಮತ್ತು ಶಿವಸೇನೆ ಅಸ್ತಿತ್ವದಲ್ಲಿರುವ ದೇಶದ ಎಲ್ಲ ಕಡೆಗಳಲ್ಲಿ ನವೆಂಬರ್ 24ರಂದು "ಮಹಾ ಆರತಿ" ನಡೆಸಿ ಮಂದಿರ ಬೇಡಿಕೆಗೆ ಒತ್ತಾಯಿಸುವಂತೆಯೂ ಠಾಕ್ರೆ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಅಂದು ಠಾಕೆ, ಅಯೋಧ್ಯೆಯಲ್ಲಿ ಸರಯೂ ಪೂಜೆ ನೆರವೇರಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News