ಕಥುವಾ ಸಂತ್ರಸ್ತೆಯ ಕುಟುಂಬಕ್ಕೆ ಸಂಗ್ರಹಿಸಲಾದ ಹಣವನ್ನುಶೆಹ್ಲಾ ರಶೀದ್ ದುರುಪಯೋಗ ಪಡಿಸಿದ್ದಾರೆಯೇ ?

Update: 2018-11-19 10:53 GMT

ಹೊಸದಿಲ್ಲಿ,ನ.19 : ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್ ನಾಯಕಿ ಹಾಗೂ ಹೋರಾಟಗಾರ್ತಿ  ಶೆಹ್ಲಾ ರಶೀದ್ ಅವರು ಕಥುವಾ ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆಂದು ಕ್ರೌಡ್ ಫಂಡಿಂಗ್ ಮೂಲಕ  ಸಂಗ್ರಹಿಸಲಾದ ಹಣವನ್ನು ದುರುಪಯೋಗ ಪಡಿಸಿದ್ದಾರೆಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದವು. ಈ ಆರೋಪಗಳು ಯಾವ ಮಟ್ಟಕ್ಕೆ ತಲುಪಿತ್ತೆಂದರೆ ವಕೀಲ ವಿಭೋರ್ ಆನಂದ್  ತಾವು ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚಿಸುತ್ತಿರುವುದಾಗಿ ಆಕೆಯಿಂದ `ವಂಚನೆ'ಗೊಳಗಾದವರಿಗೆ ತಿಳಿಸಿದ್ದರು.

ಸಂಗ್ರಹಿಸಲಾದ ಹಣ ಸಂತ್ರಸ್ತ ಕುಟುಂಬಕ್ಕೆ ತಲುಪಿದೆ ಎಂದು ಕ್ರೌಡ್ ಫಂಡಿಂಗ್ ಸಂಘಟಕರು ಹೇಳಿಕೊಂಡರೂ ಆರೋಪಗಳು ಮುಂದುವರಿದಿದ್ದವು. ನಂತರ ಅವರು ಸಂತ್ರಸ್ತ ಕುಟುಂಬದ ಬ್ಯಾಂಕ್ ಪಾಸ್ ಪುಸ್ತಕದ ಫೋಟೋ ಕೂಡ ಪೋಸ್ಟ್ ಮಾಡಿದರು.

ಅತಿಯಾದ ದ್ವೇಷದ ಮಾತುಗಳು ಕೇಳಿ ಬರುತ್ತಿವೆಯೆಂದು ಶೆಹ್ಲಾ ರಶೀದ್ ಅವರು ತಮ್ಮ ಟ್ವಿಟ್ಟರ್ ಖಾತೆಯನ್ನು ರದ್ದುಗೊಳಿಸಲು  ನಿರ್ಧರಿಸಿದಾಗ ಆರೋಪಗಳು ಇನ್ನಷ್ಟು ಹೆಚ್ಚಾಗಿದ್ದವು. ಸಂತ್ರಸ್ತ ಕುಟುಂಬಕ್ಕಾಗಿ ಸಂಗ್ರಹಿಸಲಾಗಿದ್ದ ರೂ 40 ಲಕ್ಷ ಕುರಿತಾದ ಪ್ರಶ್ನೆಗಳನ್ನು  ನಿವಾರಿಸಲು ಅವರು ಈ ರೀತಿ ಮಾಡುತ್ತಿದ್ದಾರೆಂದು ಸೋನಂ ಮಹಾಜನ್ ಆರೋಪಿಸಿದ್ದರು. ಅವರ ಈ ಟ್ವೀಟ್  ಅನ್ನು 7,000ಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಲಾಗಿದೆ ಹಾಗೂ 16,000ಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ಕ್ರೌಡ್ ಫಂಡಿಂಗ್ ಅನ್ನು ಎಪ್ರಿಲ್ ತಿಂಗಳಲ್ಲಿ ಆರಂಭಿಸಿದಾಗಲೂ ಇಂತಹುದೇ ಆರೋಪಗಳು ಕೇಳಿ ಬಂದಿದ್ದವಲ್ಲದೆ ಕುಟುಂಬಕ್ಕೆ ಯಾವುದೇ ಸಹಾಯ ದೊರಕುತ್ತಿಲ್ಲ ಎಂದೂ ದೂರಲಾಗಿತ್ತು.ಶೆಹ್ಲಾ ರಶೀದ್ ಈ ಅಭಿಯಾನ ಆರಂಭಿಸುವಲ್ಲಿ ಮುಂಚೂಣಿಯಲ್ಲಿದ್ದರು. ಅದಕ್ಕೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯ ಹಿನ್ನೆಲೆಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಗೂ ಹಣ ಸಂಗ್ರಹಿಸಲಾಗಿತ್ತು.

ನವೆಂಬರ್ 4ರಂದು ಕ್ರೌಡ್ ನ್ಯೂಸಿಂಗ್ ಪತ್ರಿಕಾಗೋಷ್ಠಿ ನಡೆಸಿ  ಹಣ ಸಂದಾಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಿತ್ತಲ್ಲದೆ ಕಥುವಾ ಸಂತ್ರಸ್ತ ಕುಟುಂಬದ ಹೇಳಿಕೆಯ ವೀಡಿಯೋ ಕೂಡ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಿತ್ತು.

ಕಥುವಾ ಮತ್ತು ಉನ್ನಾವೋ ಸಂತ್ರಸ್ತ ಕುಟುಂಬಗಳಿಗೆ ಸಂಗ್ರಹಿಸಲಾದ ಮೊತ್ತ ಸಂದಿದೆ ಎಂದು 'ಆಲ್ಟ್ ನ್ಯೂಸ್' ಕೂಡ ಸ್ವತಂತ್ರವಾಗಿ ದೃಢೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News