ಮಡಿಕೇರಿ: ಚೋಕಂಡಳ್ಳಿಯಲ್ಲಿ ನ.24, 25ರಂದು ಈದ್ ಮಿಲಾದ್ ಕಂದೂರಿ ಕಾರ್ಯಕ್ರಮ

Update: 2018-11-19 11:34 GMT

ಮಡಿಕೇರಿ, ನ.19: ವೀರಾಜಪೇಟೆ ತಾಲೂಕಿನ ಅಮ್ಮತ್ತಿ ನಲ್ವತ್ತೊಕ್ಲುವಿನ ಚೋಕಂಡಳ್ಳಿಯಲ್ಲಿ ಹಲವಾರು ವರ್ಷಗಳಿಂದ ಮುಹಮ್ಮದ್ ಪೈಗಂಬರ್ (ಸ) ಅವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಈದ್‍ ಮಿಲಾದ್ ಕಂದೂರಿ ಕಾರ್ಯಕ್ರಮವನ್ನು ಈ ಬಾರಿ ನ.24 ಮತ್ತು 25ರಂದು ಆಚರಿಸಲಾಗುವುದು ಎಂದು ಈದ್‍ ಮಿಲಾದ್ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿ ಸದಸ್ಯ ಪಿ.ಎ.ಅಬ್ದುಲ್ ಮಜೀದ್ ಅವರು, ಹಲವಾರು ರೋಗ ರುಜಿನಗಳಿಗೆ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕ್ಷೇತ್ರವಾದ ಚೋಕಂಡಳ್ಳಿಯಲ್ಲಿ ತಲತಲಾಂತರದಿಂದ ಕಂದೂರಿಯನ್ನು ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಬಾರಿಯೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ನ.24ರಂದು ಅಸರ್ ನಮಾಜ್‍ನ ಬಳಿಕ ಈದ್‍ ಮಿಲಾದ್ ಸಂರಕ್ಷಣಾ ಸಮಿತಿ ಅಧ್ಯಕ್ಷ ಕೆ.ಎ.ಮಮ್ಮುಞ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ರಾತ್ರಿ 8 ಗಂಟೆಗೆ ದಫ್ ಪ್ರದರ್ಶನ, 8.30ಕ್ಕೆ ಕೇರಳದ ವಳವಟ್ಟಣಂನ ಸಯ್ಯದ್ ಸಹದುದ್ದೀನ್ ತಂಙಳ್ ಅವರಿಂದ ಮತಪ್ರವಚನ ನಡೆಯಲಿದೆ ಎಂದು ಹೇಳಿದರು.

ನ.25ರಂದು ಬೆಳಗ್ಗೆ 8 ಗಂಟೆಗೆ ಚೋಕಂಡಳ್ಳಿಯ ರಿಫಾಯಿ ರಾತಿಬ್ ಸಂಘದ ವತಿಯಿಂದ ಮನೆ ಸಂದರ್ಶನ ಹಾಗೂ ಭಂಡಾರ ಇಡುವ ಕಾರ್ಯಕ್ರಮ, 10 ಗಂಟೆಗೆ ಈದ್‍ ಮಿಲಾದ್ ಸಂದೇಶ ರ್ಯಾಲಿ ನಡೆಯಲಿದ್ದು, 11 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಎಸ್ಸೆಸ್ಸೆಫ್ ಅಖಿಲ ಭಾರತ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಅಂದು ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಪಿ.ಎಂ.ಇಸ್ಮಾಯಿಲ್, ಕೆ.ಎ.ಹಮೀದ್, ಪಿ.ಎ.ನೌಫಲ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News