ಮಡಿಕೇರಿಯಲ್ಲಿ ತ್ಯಾಜ್ಯ ರೀ ಸೈಕ್ಲಿಂಗ್ ಘಟಕ ಸ್ಥಾಪನೆಗೆ ಅಗತ್ಯ ಸಹಕಾರ: ಕ್ರಿಕೆಟಿಗ ರಾಬಿನ್ ಉತ್ತಪ್ಪ ಭರವಸೆ

Update: 2018-11-19 11:48 GMT

ಮಡಿಕೇರಿ, ನ.19: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸದ ರಾಶಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ರೀ ಸೈಕ್ಲಿಂಗ್ ಘಟಕ ಸ್ಥಾಪಿಸಲು ಅಗತ್ಯ ಸಹಕಾರ ನೀಡುವುದಾಗಿ ಖ್ಯಾತ ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ ಭರವಸೆ ನೀಡಿದ್ದಾರೆ.

ಗ್ರೀನ್ ಸಿಟಿ ಫೋರಂ ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಶೌಚಾಲಯ ದಿನ ಮತ್ತು ವಿಶ್ವ ಪಾರಂಪರಿಕ ವಾರ ಕಾರ್ಯಕ್ರಮಕ್ಕೆ ನಗರದ ಕೋಟೆ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ವೈಜ್ಞಾನಿಕ ರೂಪದಲ್ಲಿ ತ್ಯಾಜ್ಯಗಳನ್ನು ಪರಿಷ್ಕರಿಸಲು ರೀ ಸೈಕ್ಲಿಂಗ್ ಯೂನಿಟನ್ನು ಸ್ಥಾಪಿಸಲು ಅಗತ್ಯವಿರುವ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಗ್ರೀನ್ ಸಿಟಿ ಫೋರಂ ಮತ್ತು ಸರ್ಕಾರದ ಸಹಕಾರ ಪಡೆದು ಯೂನಿಟ್ ಸ್ಥಾಪನೆಗೆ ಸಂಬಂಧಿಸಿದ ಸಂಸ್ಥೆಗಳೊಂದಿಗೆ ಚರ್ಚಿಸುವುದಾಗಿ ರಾಬಿನ್ ಉತ್ತಪ್ಪ ಭರವಸೆ ನೀಡಿದರು. 

ಸುಂದರ ಪರಿಸರದ ಕೊಡಗು ಜಿಲ್ಲೆ ಸ್ವಚ್ಛತೆಯಲ್ಲಿ ಮಾದರಿಯಾಗಬೇಕು. ಕೊಡಗಿನಿಂದ ಹೊರ ಹೋಗಿ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ಪ್ರಮುಖರು ಕೊಡಗಿನ ಅಭಿವೃದ್ಧಿ ಮತ್ತು ಸ್ವಚ್ಛತೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು. ನಗರದ ಸುಬ್ರಹ್ಮಣ್ಯ ನಗರ ವ್ಯಾಪ್ತಿಯಲ್ಲಿ ಕಸದ ರಾಶಿಯಿಂದ ಉಂಟಾಗುತ್ತಿರುವ ತೊಂದರೆಯನ್ನು ತಪ್ಪಿಸಲು ಎಲ್ಲರ ಅಪೇಕ್ಷೆಯಂತೆ ರೀ ಸೈಕ್ಲಿಂಗ್ ಘಟಕ ಸ್ಥಾಪಿಸುವ ಇಂಗಿತವನ್ನು ರಾಬಿನ್ ಉತ್ತಪ್ಪ ವ್ಯಕ್ತಪಡಿಸಿದರು.

ಇಂದಿನ ಮಕ್ಕಳು ನಾಳೆಯ ದೇಶದ ಭವಿಷ್ಯವಾಗಿದ್ದು, ತಾವಿರುವ ಪ್ರದೇಶ ಮತ್ತು ಊರನ್ನು ಸ್ವಚ್ಛವಾಗಿಡುವ ಮೂಲಕ ಇಡೀ ದೇಶವನ್ನು ಸ್ವಚ್ಛವಾಗಿಡುವ ಜವಾಬ್ದಾರಿಯನ್ನು ಹೊಂದಬೇಕೆಂದರು ಕರೆ ನೀಡಿದರು. ಕಸವನ್ನು ಎಲ್ಲೆಂದರಲ್ಲಿ ಹಾಕದೆ ಕಸದ ಬುಟ್ಟಿಯನ್ನೆ ಬಳಸುವಂತೆ ರಾಬಿನ್ ಉತ್ತಪ್ಪ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮಡಿಕೇರಿ ಕೋಟೆ ಅಭಿವೃದ್ಧಿ
ಭಾರತೀಯ ಪುರಾತತ್ವ ಇಲಾಖೆಯ ಮುಖ್ಯ ಆಯುಕ್ತ ಕೆ.ಮೂರ್ತೇಶ್ವರಿ ಮಾತನಾಡಿ, ಮಡಿಕೇರಿ ಕೋಟೆಯ ಅಭಿವೃದ್ಧಿಗೆ ಇಲಾಖೆ ಉತ್ಸುಕವಾಗಿದ್ದು, ಜಿಲ್ಲಾಡಳಿತ ಮತ್ತು ಸ್ಥಳೀಯ ಜನರ ಸಹಕಾರದ ಅಗತ್ಯವಿದೆ ಎಂದರು. ಕೋಟೆ ಆವರಣದಲ್ಲಿ ಜಿಲ್ಲಾ ಪಂಚಾಯತ್ ಕಚೇರಿ ಹಾಗೂ ಜನ ಪ್ರತಿನಿಧಿಗಳ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇವುಗಳು ಸ್ಥಳಾಂತರಗೊಂಡ ನಂತರ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸುಲಭವಾಗಲಿದೆ ಎಂದರು.

ಮಡಿಕೇರಿ ಕೋಟೆ ಮತ್ತು ಅರಮನೆಯ ಮಾಲಕತ್ವದ ಬಗ್ಗೆ ಗೊಂದಲವಿದ್ದು, ಪ್ರಸ್ತುತ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಕೋಟೆ, ಎರಡು ಆನೆಯ ಪ್ರತಿಮೆಗಳು ಮಾತ್ರ ಬರುತ್ತವೆ, ಕೋಟೆಯ ಒಳಗಿನ ಅರಮನೆ ನಮ್ಮ ಸುಪರ್ದಿಗೆ ಬರುತ್ತಿಲ್ಲ. ಅರಮನೆ ಪುರಾತತ್ವ ಇಲಾಖೆಯ ವಶಕ್ಕೆ ಬಂದಲ್ಲಿ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಈಗಾಗಲೆ ಮಾತುಕತೆ ನಡೆಸಲಾಗಿದ್ದು, ಪೂರಕ ಪ್ರತಿಕ್ರಿಯೆ ದೊರಕಿದೆ. ಕೋಟೆ ಮತ್ತು ಅರಮನೆ ನಮ್ಮ ಅಧೀನಕ್ಕೆ ಬಂದ ನಂತರ ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುವುದೆಂದು ಮೂರ್ತೇಶ್ವರಿ ತಿಳಿಸಿದರು.

ದೇಶದ ಇತಿಹಾಸದ ಕುರುಹುಗಳ ಬಗ್ಗೆ ತಿಳಿಯದೆ ಇದ್ದರೆ ಯಾವುದೇ ಶಿಕ್ಷಣವನ್ನು ಪಡೆದರೂ ವ್ಯರ್ಥವೆಂದು ಅವರು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರು ಇತಿಹಾಸವನ್ನು ಅರಿತಿರಬೇಕು. ಇತಿಹಾಸದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಹೇಳಬೇಕು. ಕನಿಷ್ಠ ತಾವು ವಾಸವಿರುವ ಊರಿನ ಐತಿಹಾಸಿಕ ಕುರುಹುಗಳ ಬಗ್ಗೆ ಮಾಹಿತಿಯನ್ನು ತಿಳಿದಿರಬೇಕೆಂದರು.

ಪ್ರತಿಯೊಂದು ಐತಿಹಾಸಿಕ ತಾಣಗಳು ಆಯಾ ಪ್ರದೇಶದ ಜನರ ಆಸ್ತಿಯಾಗಿದ್ದು, ಅವುಗಳನ್ನು ರಕ್ಷಣೆ ಮಾಡುವುದಕ್ಕೆ ಸರ್ಕಾರದೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದರು. ನಿಮ್ಮ ಆಸ್ತಿಯನ್ನು ನೀವೇ ರಕ್ಷಣೆ ಮಾಡಬೇಕಿದ್ದು, ಅಧಿಕಾರಿಗಳಿಗೆ ನೀವು ಆದೇಶ ಮಾಡಿ ಎಂದರು. ಇತಿಹಾಸದ ಕುರುಹುಗಳನ್ನು ವಿರೂಪಗೊಳಿಸುವವರಿಗೆ ಅದರ ಮಹತ್ವ ತಿಳಿದಿಲ್ಲ. ಇತಿಹಾಸವನ್ನು ತಿಳಿದುಕೊಂಡಾಗ ಮಾತ್ರ ಕುರುಹುಗಳ ಮಹತ್ವ ಅರಿವಿಗೆ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಿಯ ಮಾತನಾಡಿ ವಿಶ್ವ ಶೌಚಾಲಯ ದಿನದ ಮಹತ್ವವನ್ನು ತಿಳಿಸಿದರು. ಅತಿವೃಷ್ಟಿಯಿಂದಾಗಿ ಹಾನಿಗೊಳಗಾದ ಕೆಲವು ಪ್ರದೇಶಗಳಲ್ಲಿ ಶೌಚಾಲಯದ ಕೊರತೆ ಎದುರಾಗಿದೆ. ಇವುಗಳನ್ನು ಪುನರ್ ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಶೌಚಾಲಯವನ್ನು ನಿರ್ವಹಣೆ ಮಾಡುವ ಬಗ್ಗೆ ಸರ್ಕಾರ ಈಗಾಗಲೆ ವೈಜ್ಞಾನಿಕ ಚಿಂತನೆ ಮಾಡಿದ್ದು, ಹೊಸ ನಿಯಮದಂತೆ ಶೌಚಾಲಯಕ್ಕೆ 2 ಶೌಚ ಗುಂಡಿಗಳು ಇರುವುದು ಅಗತ್ಯವಾಗಿದೆ. ಒಂದು ತುಂಬಿದಲ್ಲಿ ಮತ್ತೊಂದರಲ್ಲಿ ತ್ಯಾಜ್ಯ ಸಂಗ್ರಹವಾಗುವ ಮೂಲಕ, ಮೊದಲ ಶೌಚ ಗುಂಡಿಯ ತ್ಯಾಜ್ಯ ವರ್ಷದ ಬಳಿಕ ಗೊಬ್ಬರವಾಗಿ ಪರಿವರ್ತನೆಯಾಗಿ ಬಳಕೆಗೆ ಯೋಗ್ಯವಾಗುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಶೌಚಾಲಯ ನಿರ್ಮಾಣ ಮತ್ತು ನಿರ್ವಹಣೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದು ಲಕ್ಷ್ಮೀ ಪ್ರಿಯ ಕರೆ ನೀಡಿದರು.

ಡಿವೈಎಸ್‍ಪಿಗೆ ಸನ್ಮಾನ
ಕಾರ್ಯದಕ್ಷತೆ ಮತ್ತು ಸ್ವಚ್ಛತಾ ಶ್ರಮದಾನದ ಕಾಳಜಿಗಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿವೈಎಸ್‍ಪಿ ಸುಂದರ ರಾಜ್, ಜಿಲ್ಲೆಯಲ್ಲಿ ಅತಿವೃಷ್ಟಿ ಸಂಭವಿಸಿದಾಗ ವಿವಿಧ ಸಂಘ ಸಂಸ್ಥೆಗಳು ಧರ್ಮಾತೀತ ಮತ್ತು ಜಾತ್ಯತೀತವಾಗಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡ ಕಾರಣ ನಮಗೆ ಇದು ದೊಡ್ಡ ಸವಾಲಾಗಿ ಕಂಡು ಬರಲಿಲ್ಲವೆಂದು ಅಭಿಪ್ರಾಯಪಟ್ಟರು. ಸಮಸ್ಯೆಗಳು ಬಂದಾಗ ತಮಗೆ ದೂರವಾಣಿ ಕರೆ ಮಾಡಿದರೆ ಯಾವುದೇ ಸಂದರ್ಭದಲ್ಲೂ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯಾ ಚಿಣ್ಣಪ್ಪ, ಮಕ್ಕಳು, ಕುಟುಂಬ ಊರು ಸ್ವಚ್ಛವಾಗಿದ್ದರೆ ಇಡೀ ದೇಶವೇ ಸ್ವಚ್ಛವಾಗಿರಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ದೇಶವನ್ನು ಸ್ವಚ್ಛ ಭಾರತ ಮಾಡಬೇಕೆನ್ನುವ ಮಹಾತ್ಮಾಗಾಂಧಿಯವರ ಕನಸನ್ನು ನನಸು ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು. ಕೇಂದ್ರ್ರ ಸರ್ಕಾರ ದೇಶವನ್ನು ಬಯಲು ಶೌಚ ಮುಕ್ತ ದೇಶವನ್ನಾಗಿ ಮಾಡಲು ಈಗಾಗಲೆ 8.72 ಕೋಟಿ ಶೌಚಾಲಯಗಳನ್ನು ನಿರ್ಮಾಣ ಮಾಡಿದೆ ಎಂದು ಅವರು ತಿಳಿಸಿದರು.

ನಮ್ಮ ಪರಿಸರ ನಮ್ಮ ಸ್ವಚ್ಛತೆಯಡಿ ಗ್ರೀನ್ ಸಿಟಿ ಫೋರಂ ಇತ್ತೀಚೆಗೆ ಕೋಟೆ ಆವರಣದಲ್ಲಿ ಶ್ರಮದಾನ ನಡೆಸಿದ್ದು, ಸುಮಾರು 600 ಮಂದಿ ಸ್ವಚ್ಛತಾ ಶ್ರಮದಾನ ನಡೆಸಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭ ಜಯಾ ಚಿಣ್ಣಪ್ಪ ವಿದ್ಯಾರ್ಥಿಗಳಿಗೆ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. 

ಸಂಘಟನೆಯ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಕಸವನ್ನು ರಸವ್ನಾಗಿ ಮಾಡಿ ಲಾಭ ಗಳಿಸುವ ವಿಧಾನವನ್ನು ನಮ್ಮ ದೇಶ ಇನ್ನೂ ಕಲಿತುಕೊಂಡಿಲ್ಲ. ನಮ್ಮ ಪರಿಸರವನ್ನು ನಾವೇ ಶುದ್ಧ ಮಾಡಬೇಕು, ಕೇವಲ ಸರ್ಕಾರದ ಮೇಲೆ ಅವಲಂಬಿತವಾಗಿರದೆ, ಸಾರ್ವಜನಿಕರು ಕೂಡ ಕೈಜೋಡಿಸಬೇಕು ಎಂದರು.

ಇದೇ ಸಂದರ್ಭ ಅಂತರಾಷ್ಟ್ರೀಯ ಕ್ರಿಕೆಟ್ ಪಟು ರಾಬಿನ್ ಉತ್ತಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ರಾಷ್ಟ್ರೀಯ ಏಕೀಕರಣ ಸಪ್ತಾಹದ ಅಂಗವಾಗಿ ಕೋಟೆ ಆವರಣಲ್ಲಿ ಆಯೋಜಿಸಿರುವ ವಿಶ್ವ ಪಾರಂಪರಿಕ ತಾಣಗಳ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಪ್ರಿಯ ಅವರು ಇದೇ ಸಂದರ್ಭ ಉದ್ಘಾಟಿಸಿದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಹೆಸರುವಾಸಿ ಪ್ರವಾಸಿ ತಾಣ ರಾಜಾಸೀಟು ಉದ್ಯಾನವನದಲ್ಲಿ ಗ್ರೀನ್ ಸಿಟಿ ಫೋರಂನಿಂದ ನಿರ್ಮಿಸಿರುವ ಬಾಟಲ್ ಡ್ರಾಪ್‍ನ್ನು ರಾಬಿನ್ ಉತ್ತಪ್ಪ ಉದ್ಘಾಟಿಸಿದರು.

ಇದೇ ಸಂದರ್ಭ ರಾಬಿನ್ ಉತ್ತಪ್ಪ ಅವರು ಜನರಲ್ ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪ ಗೌರವ ಅರ್ಪಿಸಿದರು. ನಂತರ ಎನ್‍ಸಿಸಿ, ಸೇವಾದಳ ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಗೃತಿ ಜಾಥ ನಗರದ ಮುಖ್ಯ ಬೀದಿಗಳಲ್ಲಿ ನಡೆಯಿತು. ಕೋಟೆ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದ ವಿದ್ಯಾರ್ಥಿಗಳು ರಾಶಿ ರಾಶಿ ಕಸವನ್ನು ಸಂಗ್ರಹಿಸಿ ಕಾರ್ಯಕ್ರಮದ ಆಯೋಜಕರ ಮೆಚ್ಚುಗೆಗೆ ಪಾತ್ರರಾದರು.

ವೇದಿಕೆಯಲ್ಲಿ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಜಗನ್ನಾಥ್ ಉಪಸ್ಥಿತರಿದ್ದರು. ಸಂಘಟನೆಯ ಪ್ರಮುಖ ಅಂಬೆಕಲ್ ನವೀನ್ ಕುಶಾಲಪ್ಪ ಸ್ವಾಗತಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News