ಚಿಕ್ಕಮಗಳೂರು: ಪ್ರತಿಭಟನೆ ನೆಪದಲ್ಲಿ ಗ್ರಾಮ ಲೆಕ್ಕಾಧಿಕಾರಿಗೆ ನಿಂದನೆ; ಆರೋಪ

Update: 2018-11-19 11:51 GMT

ಚಿಕ್ಕಮಗಳೂರು, ನ.19: ಪ್ರತಿಭಟನೆ ನೆಪದಲ್ಲಿ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರಿಗೆ ರೈತಸಂಘದ ಕಾರ್ಯಕರ್ತೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾರೆಂದು ಆರೋಪಿಸಿ ತಾಲೂಕು ಗ್ರಾಮಲೆಕ್ಕಾಧಿಕಾರಿಗಳ ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕಾರ್ಯಕರ್ತೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಸೋಮವಾರ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷ ಹೇಮಂತ್ ಹಾಗೂ ಚಿಕ್ಕಮಗಳೂರು ತಾಲೂಕು ಘಟಕ ಅಧ್ಯಕ್ಷ ನಾಗೇಶ್ ಅವರ ನೇತೃತ್ವದಲ್ಲಿ ನೂರಾರು ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಮಾಯಿಸಿ ನಂತರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ಮನವಿ ಸಲ್ಲಿಸಿ ರೈತಸಂಘದ ಕಾರ್ಯಕರ್ತೆ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಮುಖಂಡರು, ಕಳೆದ ನ.16ರಂದು ಶುಕ್ರವಾರ ರಾಜ್ಯ ರೈತಸಂಘದಿಂದ ರಾಜ್ಯವ್ಯಾಪಿ ಕರೆ ನೀಡಲಾಗಿದ್ದ ಪ್ರತಿಭಟನೆ ಅಂಗವಾಗಿ ಮೂಡಿಗೆರೆ ತಾಲೂಕು ಕಚೇರಿ ಎದುರು ರೈತಸಂಘದ ಕಾರ್ಯಕರ್ತರು ಸಮಾವೇಶಗೊಂಡಿದ್ದರು. ಈ ವೇಳೆ ರೈತಸಂಘದ ಸದಸ್ಯೆಯಾಗಿರುವು ಮೂಡಿಗೆರೆ ಸಮೀಪದ ಕೃಷ್ಣಾಪುರ ನಿವಾಸಿ ಪ್ರಜ್ವಲ ಎಂಬವರು ಧ್ವನಿವರ್ಧಕದ ಮೂಲಕ ತಾಲೂಕು ಕಚೇರಿ ಅಧಿಕಾರಿಗಳು, ನೌಕರರ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಅಲ್ಲದೇ ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಗ್ರಾಮಲೆಕ್ಕಾಧಿಕಾರಿ ಬಿ.ವೈ.ಗೀತಾ ಎಂಬವರ ವಿರುದ್ಧ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಾನಸಿಕವಾಗಿ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘದ ಸದಸ್ಯರು ಅಂದು ನಡೆಸಿದ ಪ್ರತಿಭಟನೆ ವೇಳೆ ಧ್ವನಿವರ್ಧಕ ಬಳಕೆ ಮಾಡಲು ಅನುಮತಿ ಪಡೆದಿರಲಿಲ್ಲ. ಆದರೂ ಪ್ರಜ್ವಲಾ ಅವರು ಧ್ವನಿವರ್ಧಕದ ಮೂಲಕ ಬಹಿರಂಗವಾಗಿ ಗ್ರಾಮಲೆಕ್ಕಾಧಿಕಾರಿ ಗೀತಾ ಅವರನ್ನು ಮನಸೋ ಇಚ್ಛೆ ನಿಂದಿಸಿ ಅಸಭ್ಯ ವರ್ತನೆ ತೋರಿದ್ದಾರೆ. ಇದರಿಂದಾಗಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೀತಾ ಅವರು ಮಾನಸಿಕವಾಗಿ ನೊಂದು ಜಿಗುಪ್ಸೆ ಅನುಭವಿಸಿದ್ದು, ಸರಕಾರಿ ಕೆಲಸ ನಿರ್ವಹಿಸದಂತೆ ತಡೆ ಮಾಡಿದ್ದಾರೆಂದು ದೂರಿದರು.

ಈ ಘಟನೆ ಸಂಬಂಧ ತಹಶೀಲ್ದಾರ್ ಅವರು ರೈತಸಂಘದ ಕಾರ್ಯಕರ್ತರು ಅನುಮತಿ ಇಲ್ಲದೇ ಧ್ವನಿವರ್ಧಕ ಬಳಸಿ ಕರ್ತವ್ಯಕ್ಕೆ ತೊಂದರೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದ ಅವರು, ಪ್ರಜ್ವಲಾ ಅವರು ಬಹಿರಂಗವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಸಂಬಂಧ ತಾಲೂಕು ಗ್ರಾಮಾಧಿಕಾರಿಗಳ ಸಂಘದ ವತಿಯಿಂದ ದೂರು ನೀಡಲಾಗಿದೆ. ಆದರೆ ದೂರು ದಾಖಲಿಸಿಕೊಂಡು ಎಫ್‍ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಪ್ರಜ್ವಲಾ ಅವರನ್ನೂ ಇದುವರೆಗೂ ಬಂಧಿಸಿಲ್ಲ. ಕೂಡಲೇ ಆರೋಪಿ ಪ್ರಜ್ವಲಾ ಅವರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಂಘದ ಸದಸ್ಯರು ಒತ್ತಾಯಿಸಿದರು.

ಈ ವೇಳೆ ಸಂಘದ ಸದಸ್ಯರಾದ ಹೇಮಂತ್, ಸತ್ಯನಾರಾಯಣ, ದಿನೇಶ್, ಹರ್ಷವರ್ಧನ್, ರವಿಕುಮಾರ್ ಹಾಗೂ ಸಂಘದ ಇತರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News