ಅಮೃತಸರ ಗ್ರೆನೇಡ್ ದಾಳಿ ಉಗ್ರರ ಕೃತ್ಯವಾಗಿರಬಹುದು: ಪೊಲೀಸರ ಹೇಳಿಕೆ

Update: 2018-11-19 15:13 GMT

ಅಮೃತಸರ, ನ.19: ಅಮೃತಸರ ನಗರದ ಹೊರವಲಯದಲ್ಲಿ ನಡೆಯುತ್ತಿದ್ದ ಧಾರ್ಮಿಕ ಕಾರ್ಯಕ್ರಮದ ಮೇಲೆ ರವಿವಾರ ನಡೆದ ಗ್ರೆನೇಡ್ ದಾಳಿ ಪ್ರಕರಣ ಭಯೋತ್ಪಾದಕರ ಕೃತ್ಯವಾಗಿರುವ ಸಾಧ್ಯತೆಯಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

ಗ್ರೆನೇಡ್ ದಾಳಿ ಯಾವುದೇ ವ್ಯಕ್ತಿಯ ಮೇಲೆ ನಡೆಯದೆ ಗುಂಪಿನ ಮೇಲೆ ನಡೆದಿರುವ ಕಾರಣ ಈ ಕೃತ್ಯ ಭಯೋತ್ಪಾದಕ ಚಟುವಟಿಕೆಯಾಗಿರುವ ಸಾಧ್ಯತೆಯಿದೆ. ಯಾವುದೇ ಕಾರಣವಿಲ್ಲದೆ ಜನರ ಗುಂಪಿನ ಮೇಲೆ ಹ್ಯಾಂಡ್‌ಗ್ರೆನೇಡ್ ಎಸೆಯಲಾಗಿದೆ. ಮೇಲ್ನೋಟಕ್ಕೆ ಇದು ಉಗ್ರರ ಕೃತ್ಯದಂತೆ ಕಾಣುತ್ತದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸುರೇಶ್ ಅರೋರಾ ಹೇಳಿದ್ದಾರೆ. ನಿರಂಕಾರಿ ಭವನದ ಮೇಲೆ ದಾಳಿ ನಡೆಸುವ ಬಗ್ಗೆ ಯಾವುದೇ ಬೆದರಿಕೆ ಅಥವಾ ಎಚ್ಚರಿಕೆ ನೀಡಲಾಗಿಲ್ಲ. ಅಲ್ಲದೆ ಈ ಧಾರ್ಮಿಕ ಪಂಥದ ಬಗ್ಗೆ ಯಾವುದೇ ದೂರು ಕೂಡಾ ದಾಖಲಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರವಿವಾರ ನಿರಂಕಾರಿ ಪಂಗಡದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಗ್ರೆನೇಡ್ ಎಸೆದು ಪರಾರಿಯಾಗಿದ್ದರು. ಘಟನೆಯಲ್ಲಿ ಮೂವರು ಮೃತಪಟ್ಟು 10 ಮಂದಿ ಗಾಯಗೊಂಡಿದ್ದಾರೆ. ದಾಳಿ ನಡೆದ ಸಂದರ್ಭದಲ್ಲಿ ಸಭಾಂಗಣದಲ್ಲಿ ಸುಮಾರು 200 ಭಕ್ತರು ಸೇರಿದ್ದರು ಎಂದು ಅರೋರಾ ವಿವರಿಸಿದ್ದಾರೆ.

ದಾಳಿ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಮತ್ತು ವ್ಯವಸ್ಥೆಯನ್ನು ಪರಿಶೀಲಿಸಿದ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ತಕ್ಷಣ ಸ್ಥಳಕ್ಕೆ ಧಾವಿಸಿ ತನಿಖೆಯ ಮೇಲುಸ್ತುವಾರಿ ವಹಿಸುವಂತೆ ಗೃಹ ಇಲಾಖೆಯ ಕಾರ್ಯದರ್ಶಿ, ಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಶಂಕಿತ ದಾಳಿಕೋರರ ಮಾಹಿತಿ ನೀಡಿದವರಿಗೆ 50 ಲಕ್ಷ ರೂ. ಪುರಸ್ಕಾರ: ಗ್ರೆನೇಡ್ ದಾಳಿ ಘಟನೆಯಲ್ಲಿ ಶಾಮೀಲಾದವರ ಕುರಿತು ಮಾಹಿತಿ ನೀಡುವವರಿಗೆ 50 ಲಕ್ಷ ರೂ. ಬಹುಮಾನ ನೀಡುವುದಾಗಿ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ.

 ಪಂಜಾಬ್ ಪೊಲೀಸ್ ಹೆಲ್ಪ್‌ಲೈನ್- 181ಕ್ಕೆ ಮಾಹಿತಿ ಒದಗಿಸಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಲಾಗಿದೆ. ಈ ಮಧ್ಯೆ ರವಿವಾರ ರಾತ್ರಿ ತನಿಖಾಧಿಕಾರಿಗಳೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದ ತಂಡವು ಪರಿಶೀಲನೆ ನಡೆಸಿತಲ್ಲದೆ ಪಂಜಾಬ್ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News