ಹೊರನಾಡ ಕನ್ನಡಿಗರು ಸಾಂಸ್ಕೃತಿಕ ರಾಯಭಾರಿಗಳಾಗಿ ಶ್ರಮಿಸಬೇಕು: ಶ್ರೀಕಾಂತ ವಾಲ್ಗದ್

Update: 2018-11-19 16:08 GMT

ಬೆಂಗಳೂರು, ನ. 19: ರಾಜ್ಯ ಸರಕಾರ ರಾಜ್ಯೋತ್ಸವ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹೊರನಾಡಿನಲ್ಲಿ ಹಮ್ಮಿಕೊಳ್ಳುವ ಮೂಲಕ ನಮಗೆಲ್ಲಾ ಶಕ್ತಿ ತುಂಬುವ ಕೆಲಸ ಮಾಡುತ್ತಿರುವುದು ಸಂತಸದ ವಿಷಯ. ಹೊರನಾಡ ಕನ್ನಡಿಗರು ರಾಜ್ಯದ ಸಾಂಸ್ಕೃತಿಕ ರಾಯಭಾರಿಗಳಾಗಿ ಶ್ರಮಿಸಬೇಕು ಎಂದು ಹರಿಯಾಣ ಸರಕಾರದ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕನ್ನಡಿಗ ಶ್ರೀಕಾಂತ ವಾಲ್ಗದ್ ಕರೆ ನೀಡಿದ್ದಾರೆ.

ಸೋಮವಾರ ದಿಲ್ಲಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಚಂಡಿಗಡ್ ಕನ್ನಡ ಸಂಘದ ಸಹಯೋಗದಲ್ಲಿ ಚಂಡಿಗಡದಲ್ಲಿ ಹಮ್ಮಿಕೊಂಡಿದ್ದ 63ನೆ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇಶದ ಇತರೆ ಭಾಷೆಗಳಿಗೆ ಮತ್ತು ರಾಜ್ಯಗಳಿಗೆ ಹೋಲಿಸಿದರೆ ಕನ್ನಡ ಭಾಷೆ, ಕಲೆ, ಸಂಸ್ಕೃತಿ, ನೈಸರ್ಗಿಕ ಪ್ರಕೃತಿ ಶ್ರೀಮಂತವಾಗಿದೆ. ಹೊರನಾಡ ಕನ್ನಡಿಗರಾದ ನಾವೆಲ್ಲ ರಾಜ್ಯದ ರಾಯಭಾರಿಗಳಾಗಿ ಇದನ್ನು ಅನ್ಯ ಭಾಷಿಕರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಹರಿಯಾಣ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕ ವಿಜಯಕುಮಾರ ಭಾವಿಕಟ್ಟಿ ಮಾತನಾಡಿ, ಹೊರನಾಡಿನಲ್ಲಿ ನಾಡಹಬ್ಬದ ಆಚರಣೆಯ ಈ ಸಂದರ್ಭ ನಾನು ತಾಯ್ನಾಡಿನಲ್ಲಿದ್ದ ಅನುಭವವಾಗುತ್ತಿದೆ. ಚಂಡಿಗಡ್‌ ನಲ್ಲಿನ ಕನ್ನಡಿಗರೆಲ್ಲರೂ ಒಟ್ಟಿಗೆ ಸೇರಿ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವುದು ಸಂತೋಷದ ವಿಷಯ. ಈ ಸಂತಸ ಒಂದು ದಿನಕ್ಕೆ ಮಾತ್ರ ಸೀಮಿತವಾಗದೆ ಕನ್ನಡದ ತೇರನ್ನು ವರ್ಷಪೂರ್ತಿ ಎಳೆಯುವ ಕೆಲಸ ಮಾಡೋಣ ಎಂದರು.

ಕಾರ್ಯಕ್ರಮದ ಅತಿಥಿಯಾದ ಚಂಡಿಗಡ ಏರ್‌ಫೋರ್ಸ್ ಗ್ರೂಪ್ ಕ್ಯಾಪ್ಟನ್, ಕನ್ನಡಿಗ ಎಂ.ಪಿ.ಮಹೇಶ್ ಕುಮಾರ್ ಮಾತನಾಡಿ, ಫೀಲ್ಡ್ ಮಾರ್ಷಲ್ ಜನರಲ್ ಕಾರ್ಯಪ್ಪನವರು ಹಾಕಿಕೊಟ್ಟ ಭದ್ರ ಬುನಾದಿಯ ಮೇಲೆ ಕನ್ನಡಿಗರು ದೇಶ ಕಾಯುವ ಕೆಲಸದಲ್ಲಿ ಇಂದಿಗೂ ಮುಂಚೂಣಿಯಲ್ಲಿದ್ದೇವೆ. ರಾಜ್ಯದಿಂದ ಹೊರಗಡೆ ಕೆಲಸ ನಿರ್ವಹಿಸುವ ನಮಗೆ ಮತ್ತು ನಮ್ಮ ಯುವ ಪೀಳಿಗೆಗೆ ಕರ್ನಾಟಕದ ಸಂಸ್ಕೃತಿಯೊಂದಿಗೆ ಉಳಿಯಲು ಕರ್ನಾಟಕ ರಾಜ್ಯೋತ್ಸವದಂತ ಹಲವು ಕಾರ್ಯಕ್ರಮಗಳು ತುಂಬಾ ಅವಶ್ಯಕ ಎಂದು ಅವರು ತಿಳಿಸಿದರು. 

ಪ್ರಾಸ್ತಾವಿಕ ಮಾತನಾಡಿದ ವಾರ್ತಾಧಿಕಾರಿ ಡಾ.ಗಿರೀಶ ಎಲ್.ಪಿ., ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರನಾಡಿನಲ್ಲಿ ಹಮ್ಮಿಕೊಳ್ಳುತ್ತಿರುವ ಕರ್ನಾಟಕ ರಾಜ್ಯೋತ್ಸವಕ್ಕೆ ವರ್ಷದಿಂದ ವರ್ಷಕ್ಕೆ ಹೊರನಾಡಿನ ಕನ್ನಡಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಹೊರನಾಡಿನಲ್ಲಿ ಕರ್ನಾಟಕ ಚಲನಚಿತ್ರೋತ್ಸವ ಹಮ್ಮಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದರು. ಚಂಡೀಗಡ್ ಪಿಜಿಐ ವೈದ್ಯ ಡಾ.ವಿಜಯ ಜಿ.ಗೋಣಿ, ಚಂಡಿಗಡ್ ಕನ್ನಡ ಸಂಘದ ಅಧ್ಯಕ್ಷ ಡಾ.ಗಂಗಾಧರ ಹೂಗಾರ, ಕಾರ್ಯದರ್ಶಿ ಸುರೇಶ ಜಂಬಿಗೆ ಉಪಸ್ಥಿತರಿದ್ದರು. ಏರ್‌ಫೋರ್ಸ್‌ನ ರಮೇಶ ನಿರೂಪಿಸಿ, ಅಮರೇಶ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News