ಶೃಂಗೇರಿ: ಬೆಳೆ ನಷ್ಟ ಪರಿಹಾರ ಶೀಘ್ರ ಬಿಡುಗಡೆಗೆ ರೈತಸಂಘ ಒತ್ತಾಯ

Update: 2018-11-19 17:03 GMT

ಶೃಂಗೇರಿ, ನ.19: ಅತಿವೃಷ್ಟಿಯಿಂದ ರೈತರು ಬೆಳೆದ ಕಾಫಿ, ಕಾಳುಮೆಣಸು, ಅಡಿಕೆ ಮುಂತಾದ ಬೆಳೆಗಳು ನಷ್ಟಗೊಂಡಿದ್ದು, ತಾಲೂಕಿನ ಪ್ರಮುಖ ಬೆಳೆ ಅಡಿಕೆ ಹಳದಿ ಎಲೆ ರೋಗವು ಕೂಡಾ ಅಷ್ಟೇ ತೀವ್ರವಾಗಿ ಹರಡಿ ರೈತರ ಪರಿಸ್ಥಿತಿ ದುಸ್ತರವಾಗಿದೆ. ಅರ್ಥಿಕ ಸಂಕಷ್ಟದಲ್ಲಿರುವ ಕೃಷಿಕರ ನೆರವಿಗೆ ಸರಕಾರ ಕೂಡಲೇ ಸೂಕ್ತಪರಿಹಾರ ನೀಡಬೇಕು ಎಂದು ತಾಲೂಕು ರೈತಸಂಘದ ಅಧ್ಯಕ್ಷ ಕಾನೊಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಸೋಮವಾರ ತಾಲೂಕು ರೈತಸಂಘದ ಸದಸ್ಯರು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಕೃಷಿಕರ ಸಾಲ ವಸೂಲಾತಿಗೆ ವಾಣಿಜ್ಯ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುತ್ತ ಒತ್ತಡ ಹಾಕುತ್ತಿವೆ. ಒತ್ತುವರಿ ಕುರಿತು ನಮೂನೆ 50ಮತ್ತು 53ರಲ್ಲಿ ಸಾಗುವಳಿ ಚೀಟಿಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳು ರೈತರ ಗಮನಕ್ಕೆ ಬಾರದೆ ಅರ್ಜಿಯನ್ನು ವಜಾ ಮಾಡಲಾಗಿದೆ. ಅಂತಹ ಕೃಷಿಕರಿಗೆ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕಿದೆ ಎಂದರು.

ಗೌರವಾಧ್ಯಕ್ಷ ಬಂಡ್ಲಾಪುರ ಶ್ರೀಧರ್ ರಾವ್ ಮಾತನಾಡಿ, ತಾಲೂಕಿನಲ್ಲಿ ಈ ಹಿಂದೆ ಇದ್ದ ನಾರಾಯಣ್ ರಾವ್ ತಮ್ಮ ಅವಧಿಯಲ್ಲಿ 58 ಪ್ರಕರಣಗಳಿಗೆ ಸೊಪ್ಪಿನ ಬೆಟ್ಟ ವರ್ಗೀಕರಣ ಜಮೀನನ್ನು ಮಂಜೂರು ಮಾಡಿದ್ದಾರೆ. ಆದರೆ ಅದರ ಕಡತಗಳು ಜಿಲ್ಲಾಧಿಕಾರಿಗಳ ವಶದಲ್ಲಿವೆ. ಪ್ರಸ್ತುತ ಸೊಪ್ಪಿನ ಬೆಟ್ಟದ ಜಮೀನು 94 ಸಿ ಅಡಿಯಲ್ಲಿ ಉಲ್ಲೇಖ 1ರ ಆದೇಶದಂತೆ ಮಂಜೂರು ಮಾಡುವ ಅವಕಾಶವಿದೆ. ಗ್ರಾ.ಪಂನಲ್ಲಿ ಈ-ಸ್ವತ್ತು ಮಾಡಿಸಲು ಅವಶ್ಯವಾಗಿ ಬೇಕಾಗಿರುವ ಕಡತಗಳನ್ನು ಜಿಲ್ಲಾಧಿಕಾರಿ ಕೂಡಲೇ ನೀಡಬೇಕು ಎಂದು ಒತ್ತಾಯಿಸಿದರು.

ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ಡಾ.ಸಹನಾ.ಎಸ್.ಹಾದಿಮನಿ, ಕೃಷಿಕರ ಜೊತೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಸರಕಾರಕ್ಕೆ ತಾಲೂಕಿನ ರೈತರ ಸಮಸ್ಯೆಗಳ ಬಗ್ಗೆ ಕೂಡಲೇ ಮಾಹಿತಿ ನೀಡಿ ಪರಿಹಾರ ಒದಗಿಸಲು ಪ್ರಾಮಾಣಿಕವಾಗಿ ಸ್ಪಂದಿಸುತ್ತೇನೆ ಎಂಬ ಭರವಸೆ ಇತ್ತರು.

ಸಮಾರಂಭದಲ್ಲಿ ಉಪಾಧ್ಯಕ್ಷ ಚನ್ನಕೇಶವ ಮೆಣಸೆ,ಪದಾಧಿಕಾರಿಗಳಾದ ಶ್ರೀನಿವಾಸ್ ಹಾಲಂದೂರು,ತೆಕ್ಕೂರು ಚಂದ್ರಪ್ಪ,ಜಗದೀಶ್ ಧರೆಕೊಪ್ಪ,ಯೋಗಪ್ಪ,ವೆಂಕಟರಮಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News