ಶಿವಮೊಗ್ಗ: ವಿಜಯನಗರ ಅರಸರ ಆರಂಭ ಕಾಲದ ಮಾಸ್ತಿಕಲ್ಲು ಶಾಸನಗಳು ಪತ್ತೆ

Update: 2018-11-20 12:15 GMT

ಶಿವಮೊಗ್ಗ, ನ.20: ಹೊಯ್ಸಳರ ಆಡಳಿತಾವಧಿ ಕೊನೆ ಹಾಗೂ ವಿಜಯನಗರ ಆಡಳಿತದ ಪ್ರಾರಂಭದ ಅವಧಿಯ, 14 ನೇ ಶತಮಾನ ಕಾಲದ ಎರಡು ಮಾಸ್ತಿಕಲ್ಲು ಶಾಸನಗಳು ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಾಗಲಮನೆ ಗ್ರಾಮದಲ್ಲಿ ನಡೆದಿದೆ. 

ಶಿವಪ್ಪನಾಯಕ ಅರಮನೆ ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಶೇಜೇಶ್ವರವರು ಹಾಗಲಮನೆ ಗ್ರಾಮದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದ ವೇಳೆ ಈ ಶಿಲಾ ಶಾಸನಗಳು ಪತ್ತೆಯಾಗಿವೆ. ರೈತರೊಬ್ಬರ ಜಮೀನಿನಲ್ಲಿ ಉಳುಮೆ ಮಾಡುವಾಗ ಸಿಕ್ಕಿದ್ದ ಶಾಸನಗಳನ್ನು, ಜಮೀನಿನ ಒಂದು ಬದಿಯಲ್ಲಿಡಲಾಗಿತ್ತು. 

ಈ ಶಿಲಾಶಾಸನಗಳ ಕುರಿತಂತೆ ಇತ್ತೀಚೆಗೆ ಕೆಲ ಗ್ರಾಮಸ್ಥರು ಆರ್.ಶೇಜೇಶ್ವರ್ ರವರ ಗಮನಕ್ಕೆ ತಂದಿದ್ದರು. ಇದರ ಆಧಾರದ ಮೇಲೆ ಆರ್.ಶೇಜೇಶ್ವರ್ ರವರು ಕ್ಷೇತ್ರಕಾರ್ಯ ಕೈಗೊಂಡು ಪರಿಶೀಲಿಸಿದಾಗ, 14 ನೇ ಶತಮಾನದ ಮಾಸ್ತಿಕಲ್ಲು ಶಿಲಾಶಾಸನಗಳಾಗಿರುವುದು ತಿಳಿದುಬಂದಿದೆ. ಎರಡೂ ಶಾಸನಗಳು ಸಿಸ್ಟ್ ಶಿಲೆಯದ್ದಾಗಿದ್ದು, ಒಂದೇ ರೀತಿಯ ಕೆತ್ತನೆಯಿರುವುದು ಕಂಡುಬರುತ್ತದೆ. 

ಒಂದು ಶಾಸನವು 75 ಸೆ.ಮೀ. ಉದ್ದ ಹಾಗೂ 65 ಸೆ.ಮೀ. ಅಗಲವಾಗಿದ್ದು, ಶಿಲೆಯು ತುಂಡಾಗಿದೆ. ಇನ್ನೊಂದು ಶಾಸನವು 1 ಮೀಟರ್ 20 ಸೆ.ಮೀ. ಉದ್ದ ಮತ್ತು 59 ಸೆ.ಮೀ. ಅಗಲವಿದೆ. ಎರಡು ಶಾಸನಗಳ ಮೇಲೆ ಹಳೇಗನ್ನಡದ ಅಕ್ಷರಗಳು ಕಂಡುಬರುತ್ತವೆ. 

'ಒಂದು ಶಾಸನದ ಮೇಲಿನ ಅಕ್ಷರಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಓದಬಹುದಾಗಿದೆ. ಆದರೆ ಮತ್ತೊಂದು ಶಾಸನದ ಮೇಲೆ ಬರೆದಿರುವ ಅಕ್ಷರಗಳು ಅಸ್ಪಷ್ಟವಾಗಿದೆ. ಓದಲು ಸಾಧ್ಯವಿಲ್ಲ. ಆದರೆ ಎರಡೂ ಶಾಸನಗಳ ಕೆತ್ತನೆಯಲ್ಲಿ ಸಾಮ್ಯತೆಯಿರುವುದು ಕಂಡುಬರುತ್ತದೆ' ಎಂದು ಆರ್.ಶೇಜೇಶ್ವರ್ ರವರು ಮಾಹಿತಿ ನೀಡುತ್ತಾರೆ.

ವಿವರ: ಈ ಮಾಸ್ತಿಗಲ್ಲುಗಳು ಮೂರು ಪಟ್ಟಕಗಳಿಂದ ಕೂಡಿದೆ. ಎರಡನೇ ಪಟ್ಟಿಕೆಯಲ್ಲಿ ಎರಡು ಸಾಲಿನ ಬರಹ ಕಂಡುಬರುತ್ತದೆ. ಮೊದಲ ಪಟ್ಟಿಕೆಯಲ್ಲಿ ಸತಿ ಸಹಗಮನವಾದ ಸ್ತ್ರೀಯು ಕೆದಿಗೆ ಹೂವನ್ನು ಮುಡಿದು, ಒಂದು ಕೈಯಲ್ಲಿ ಕನ್ನಡಿ ಹಿಡಿದಿರುವುದು ಹಾಗೂ ಇನ್ನೊಂದು ಕೈಯಲ್ಲಿ ಲಿಂಬೆಹಣ್ಣು ಹಿಡಿದಿರುವುದು ಕಂಡುಬರುತ್ತದೆ. 

ಎರಡನೇ ಪಟ್ಟಿಕೆಯಲ್ಲಿ ಮಂಟಪ (ವಿಮಾನ) ದಲ್ಲಿ ಅಂಜಲಿ ಮುದ್ರೆಯಲ್ಲಿ ವೀರ ಮತ್ತು ಆತನ ಪತ್ನಿ ಕುಳಿತಿದ್ದಾರೆ. ಅಕ್ಕಪಕ್ಕದಲ್ಲಿ ಅಪ್ಸರೆಯರು ಚಾಮರ ಬೀಸುತ್ತಾ ದಂಪತಿಗಳನ್ನು ಸ್ವರ್ಗಕ್ಕೆ ಕರೆದೊಯ್ಯುತ್ತಿರುವ ಸ್ಪಷ್ಟ ಕೆತ್ತನೆ ಕಂಡುಬರುತ್ತದೆ. ಮೂರನೇ ಪಟ್ಟಿಕೆಯಲ್ಲ ಸ್ವರ್ಗ ಲೋಕದಲ್ಲಿ ಯತಿಯು ಶಿವಲಿಂಗ ಹಾಗೂ ನಂದಿಯನ್ನು ಪೂಜಿಸುತ್ತಿರುವುದು, ವೀರ ಮತ್ತು ಪತ್ನಿಯು ಅಂಜಲಿ ಮುದ್ರೆಯಲ್ಲಿ ಕುಳಿತ್ತಿದ್ದಾರೆ. ಇವರ ಮೇಲ್ಭಾಗದಲ್ಲಿ ಸೂರ್ಯ, ಚಂದ್ರರ ಚಿತ್ರಗಳಿವೆ. ಸೂರ್ಯ-ಚಂದ್ರರಿರುವವರೆಗೆ ಈ ಮಾಸ್ತಿಕಲ್ಲುಗಳು ಶಾಶ್ವತ ಎಂಬುವುದು ಇದರರ್ಥವಾಗಿದೆ ಎಂದು ಆರ್. ಶೇಜೇಶ್ವರ್ ತಿಳಿಸುತ್ತಾರೆ. 

ರಾಷ್ಟ್ರಕೂಟ ಹಾಗೂ ಕಲ್ಯಾಣಿ ಚಾಲುಕ್ಯರ ಅವಧಿಯ ಮಾಸ್ತಿಕಲ್ಲುಗಳ ಕೆತ್ತನೆಯಲ್ಲಿ ವೀರಮರಣ ಹೊಂದಿದ ಪುರಷನ ಬಗ್ಗೆ ಹೆಚ್ಚಿನ ಕೆತ್ತನೆಯಿರುವುದು ಕಂಡುಬರುತ್ತದೆ. ಆದರೆ ಸತಿ ಸಹಗಮನವಾದ ಪತ್ನಿಯ ಕೆತ್ತನೆ ಅತ್ಯಲ್ಪವಾಗಿರುತ್ತದೆ. ಆದರೆ ಹೊಯ್ಸಳ ಹಾಗೂ ವಿಜಯನಗರ ಆಡಳಿತಾವಧಿಯ ಮಾಸ್ತಿಕಲ್ಲುಗಳಲ್ಲಿ ಸತಿ ಸಹಗಮನವಾದ ಮಹಿಳೆಯರ ಕೆತ್ತನೆಗಳು ಹೆಚ್ಚಿನದ್ದಾಗಿರುತ್ತದೆ. ಪ್ರಸ್ತುತ ಭದ್ರಾವತಿ ತಾಲೂಕಿನ ಹಾಗಲಮನೆಯಲ್ಲಿ ಪತ್ತೆಯಾಗಿರುವ ಎರಡು ಮಾಸ್ತಿಕಲ್ಲುಗಳಲ್ಲಿಯೂ ಸತಿ ಸಹಗಮನವಾದ ಮಹಿಳೆಯ ಕೆತ್ತನೆಯ ವಿವರಣೆ ವೀರ ಮರಣ ಹೊಂದಿದ ಪುರುಷನಿಗಿಂತ ಹೆಚ್ಚಿರುವುದು ಕಂಡುಬರುತ್ತದೆ. ಈ ಶಾಸನಗಳನ್ನು ಗಮನಿಸಿದರೆ ಹೊಯ್ಸಳ, ವಿಜಯನಗರ ಅರಸರ ಆಡಳಿತಾವಧಿಯಲ್ಲಿ ಮಹಿಳೆಯರಿಗೂ ಪುರುಷರಷ್ಟೆ ಆದ್ಯತೆಯಿರುತ್ತಿದ್ದುದು ಕಂಡುಬರುತ್ತದೆ' ಎಂದು ಶಿವಪ್ಪನಾಯಕ ಅರಮನೆ ಪುರಾತತ್ವ ಸಂಗ್ರಹಾಲಯಗಳ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕರಾದ ಆರ್.ಶೇಜೇಶ್ವರ್ ರವರು ಅಭಿಪ್ರಾಯಪಡುತ್ತಾರೆ. 

ಏನಿದು ಮಾಸ್ತಿಗಲ್ಲು?
ಈ ಹಿಂದಿನ ರಾಜರ ಆಳ್ವಿಕೆಯ ಅವಧಿಯಲ್ಲಿ ಸತಿ ಸಹಗಮನ ಪದ್ದತಿಯಿತ್ತು. ಯುದ್ದಗಳಲ್ಲಿ ಪತಿ ಮೃತಪಟ್ಟಾಗ ಪತ್ನಿಯೂ ಕೂಡ ಪತಿಯ ಚಿತೆಗೆ ಹಾರಿ ಜೀವಂತವಾಗಿ ದಹಿಸಿ ಹೋಗುತ್ತಿದ್ದಳು. ಕೆಲವೊಮ್ಮೆ ಪತಿ ಮರಣವಪ್ಪಿದ ವಿಷಯ ತಿಳಿಯುತ್ತಿದ್ದಂತೆ ಬೆಂಕಿಯ ಚಿತೆಗೆ ಹಾರಿ ಪತ್ನಿಯರು ಸಾವನ್ನಪ್ಪುತ್ತಿದ್ದಳು. ಈ ರೀತಿ ಮೃತಪಟ್ಟ ಮಹಿಳೆಯರ ಸ್ಮರಣಾರ್ಥ ಮಾಸ್ತಿಕಲ್ಲುಗಳನ್ನು ಕೆತ್ತಿಸಲಾಗುತ್ತಿತ್ತು. ಈ ಅಮಾನವೀಯ ಪದ್ದತಿಯ ವಿರುದ್ದ ಸಮಾಜ ಸುಧಾರಕ ರಾಜರಾಮ್ ಮೋಹನ್‍ರಾಯ್‍ರವರು ಹೋರಾಟ ನಡೆಸಿದ್ದರು. ಇವರ ಹೋರಾಟದ ಫಲವಾಗಿ ಬ್ರಿಟಿಷ್ ಆಡಳಿತಾವದಿಯಲ್ಲಿ ಸತಿ ಸಹಮನ ಮಾಡುವುದು ಕಾನೂನುಬಾಹಿರವೆಂದು ಘೋಷಿಸಲಾಗಿತ್ತು. ಈ ಪದ್ದತಿ ನಿಷೇಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News