ಮಡಿಕೇರಿ: ಲಂಚ ಪಡೆಯುತ್ತಿದ್ದ ಚೆಸ್ಕಾಂ ಎಇಇ ಎಸಿಬಿ ಬಲೆಗೆ

Update: 2018-11-20 18:35 GMT

ಮಡಿಕೇರಿ, ನ.20 : ಕೃಷಿ ಪಂಪ್ ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದಕ್ಕಾಗಿ 7,500 ರೂ. ಲಂಚ ಪಡೆಯುತ್ತಿದ್ದ ಚೆಸ್ಕಾಂನ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆಜಾದ್ ಶೌಕತ್ ಆಲಿ ದೊಡ್ಡಮನಿ ಅವರನ್ನು ಭ್ರಷ್ಟಚಾರ ನಿಗ್ರಹ ದಳ ವಶಕ್ಕೆ ಪಡೆದಿದೆ.

ಚೇರಂಬಾಣೆ ಗ್ರಾಮದ ಕೃಷಿಕ ಕಾವೇರಪ್ಪ ಎಂಬವರು ಕೃಷಿ ಪಂಪ್ ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ವಿದ್ಯುತ್ ಸಂಪರ್ಕಕ್ಕಾಗಿ ಲಂಚದ ಬೇಡಿಕೆ ಇಟ್ಟ ಕಾರಣ ಶೌಕತ್ ಆಲಿ ದೊಡ್ಡಮನಿ ಅವರ ವಿರುದ್ಧ ಎಸಿಬಿಗೆ ದೂರು ನೀಡಿದ್ದರು ಎಂದು ಹೇಳಲಾಗಿದೆ. ಇಂದು ತಮ್ಮ ಕಚೇರಿಯಲ್ಲಿ ಕಾವೇರಪ್ಪ ಅವರಿಂದ ರೂ.7,500 ನ್ನು ಲಂಚದ ರೂಪದಲ್ಲಿ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಶೌಕತ್ ಆಲಿ ದೊಡ್ಡಮನಿ ಅವರನ್ನು ವಶಕ್ಕೆ ಪಡೆದಿದ್ದಾರೆ.

ಎಸಿಬಿ ಉಪ ಅಧೀಕ್ಷಕ ಪೂರ್ಣ ಚಂದ್ರ ತೇಜಸ್ವಿ ನೇತೃತ್ವದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು. ಮೂಲತ: ಚೇರಂಬಾಣೆಯ ಬಾಡಗ ರಸ್ತೆಯ ನಿವಾಸಿ ಮಂದಪಂಡ ಕಾವೇರಪ್ಪ ಎಂಬವರು ತಮ್ಮ ಜಮೀನಿನಲ್ಲಿ ಕೃಷಿ ಪಂಪ್ ಸೆಟ್ ಅಳವಡಿಸಿದ್ದರು. 5 ಹೆಚ್.ಪಿ.ಯ ಕೃಷಿ ಪಂಪ್ ಸೆಟ್‍ಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕಚೇರಿಗೆ ಹಲವು ಸಮಯದ ಹಿಂದೆ ಅರ್ಜಿ ಸಲ್ಲಿಸಿದ್ದರು. ಆದರೆ ಇಂದಿನವರೆಗೂ ವಿದ್ಯುತ್ ಸಂಕರ್ಪ ಕಲ್ಪಿಸದೇ ಕಾವೇರಪ್ಪ  ಅವರನ್ನು ಕಚೇರಿಗೆ ಅಲೆದಾಡಿಸಲಾಗಿತ್ತು ಎನ್ನಲಾಗಿದೆ. ಮಾತ್ರವಲ್ಲದೆ ವಿದ್ಯುತ್  ಸಂಪರ್ಕ ನೀಡಲು 7,500 ರೂ. ಹಣ ನೀಡುವಂತೆ ಚೆಸ್ಕಾಂ ಮಡಿಕೇರಿ ಉಪವಿಭಾಗದ ಅಭಿಯಂತರ ಆಜಾದ್ ಅಲಿ ಶೌಕತ್ ಅಲಿ ದೊಡ್ಡಮನಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಮಂದಪಂಡ ಕಾವೇರಪ್ಪ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News