ಕೇರಳದ ಕಾಂಗ್ರೆಸ್ ಸಂಸದ ಎಂಐ ಶಾನವಾಸ್ ನಿಧನ

Update: 2018-11-21 04:50 GMT

ಹೊಸದಿಲ್ಲಿ, ನ.21: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಎಂಐ ಶಾನವಾಸ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗಿನ ಜಾವ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಇತ್ತೀಚೆಗೆ ಕೇರಳ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶಾನವಾಸ್ ನ.1 ರಂದು ಚೆನ್ನೈನ ಆರ್‌ಎಂಆರ್‌ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 1:30ರ ಸುಮಾರಿಗೆ ನಿಧನರಾಗಿದ್ದಾರೆ. ನ.2 ರಂದು ಲಿವರ್ ಕಸಿಗೆ ಒಳಗಾಗಿದ್ದ ಅವರಿಗೆ ಇನ್‌ಫೆಕ್ಷನ್ ಆಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶಾನವಾಸ್ ಕೇರಳ ಸ್ಟೂಡಂಟ್ಸ್ ಯೂನಿಯನ್(ಕೆಎಸ್‌ಯು)ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದರು. ಕೆಎಸ್‌ಯುನಲ್ಲಿದ್ದಾಗ ಕಲ್ಲಿಕೋಟೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕನಾಗಿದ್ದರು. ಯೂತ್ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಜಂಟಿ ಕಾರ್ಯದರ್ಶಿ, ಅದರ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಖ್ಯಾತ ವಕೀಲ ಎಂಕೆ ಇಬ್ರಾಹಿಂಕುಟ್ಟಿ ಪುತ್ರನಾಗಿರುವ ಶಾನವಾಸ್ ರಾಜಕೀಯ ಜೀವನದ ಆರಂಭದಲ್ಲಿ ಸೋಲಿನ ಕಹಿ ಉಂಡಿದ್ದರು. 1987,1991 ಹಾಗೂ 1996ರ ಚುನಾವಣೆಯಲ್ಲಿ ಸೋತಿದ್ದರು. 2009ರಲ್ಲಿ ವಯನಾಡ್ ಕ್ಷೇತ್ರದಿಂದ ಭಾರೀ ಅಂತರದಿಂದ ಜಯ ಸಾಧಿಸಿ ಮೊದಲ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 2014ರಲ್ಲಿ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಅವರನ್ನು ಮಣಿಸಿ ಎರಡನೇ ಬಾರಿ ವಯನಾಡ್ ಸಂಸದರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News