ಪ್ರತೀದಿನ ಶಾಲಾ ಶೌಚಾಲಯ ಸ್ವಚ್ಛಗೊಳಿಸುವ ಮುಖ್ಯಶಿಕ್ಷಕ!

Update: 2018-11-21 04:51 GMT

ಮೈಸೂರು, ನ.21: ದೇಶದ ಬಹುತೇಕ ಸರ್ಕಾರಿ ಶಾಲೆಗಳ ಶೌಚಾಲಯಗಳಲ್ಲಿ ಸ್ವಚ್ಛತೆ ಕೊರತೆಯ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಆದರೆ ಶಾಲೆಯ ಮುಖ್ಯಶಿಕ್ಷಕರೊಬ್ಬರು ಶಾಲೆಯ ಶೌಚಾಲಯ ಶುಚಿಗೊಳಿಸುವ ಮೂಲಕ ದಿನದ ಕಾರ್ಯಚಟುವಟಿಕೆ ಆರಂಭಿಸುವ ಮೂಲಕ ಸುದ್ದಿಯಾಗಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹೊಂಗಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಮಹದೇಶ್ವರಸ್ವಾಮಿ ತಮ್ಮ ಸ್ವಂತ ಖರ್ಚಿನಲ್ಲಿ ಮಕ್ಕಳಿಗೆ ಗ್ರಂಥಾಲಯ ನಿರ್ಮಿಸಿದ್ದು ಮಾತ್ರವಲ್ಲದೇ, ಶಾಲಾವನವನ್ನೂ ಬೆಳೆಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ಹೇಗೆ ಮಾದರಿಯಾಗಿ ರೂಪಿಸಬಹುದು ಹಾಗೂ ಧನಾತ್ಮಕ ಬದಲಾವಣೆ ತರಬಹುದು ಎನ್ನುವುದಕ್ಕೆ ಸ್ವಾಮಿ ನಿದರ್ಶನ ಎಂದು ಸಾರ್ವಜನಿಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಶ್ಲಾಘಿಸುತ್ತಾರೆ.

ಮಹದೇಶ್ವರಸ್ವಾಮಿ ಶಾಲೆಯ ಶೌಚಾಲಯ ಸ್ವಚ್ಛಗೊಳಿಸುವ ಮೂಲಕ ತಮ್ಮ ದಿನಚರಿ ಆರಂಭಿಸುತ್ತಾರೆ. ಬಳಿಕ ಶಾಲಾ ಉದ್ಯಾನವನ ನಿರ್ವಹಣೆ ಮತ್ತು ತರಗತಿ ಶುಚಿಗೊಳಿಸುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಕೂಡಾ ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡುವಂತೆ ಮನವೊಲಿಸುತ್ತಾರೆ. ಶುಚಿತ್ವದ ಚಟುವಟಿಕೆಗಳು ಮತ್ತು ಆಟೋಟಗಳಲ್ಲಿ ಮಕ್ಕಳನ್ನು ಪ್ರೇರೇಪಿಸುತ್ತಾರೆ. ಇದರಿಂದ ಪೋಷಕರು ಖುಷಿಯಾಗಿ ಮಕ್ಕಳನ್ನು ಈ ಶಾಲೆಗೆ ಕಳುಹಿಸುತ್ತಾರೆ ಎಂದು ಗ್ರಾಮಸ್ಥರು ವಿವರಿಸುತ್ತಾರೆ.

ಡಾ.ಎಚ್.ಸುದರ್ಶನ್ ಅವರು ಬಿಆರ್ ಹಿಲ್ಸ್‌ನಲ್ಲಿ ಬುಡಕಟ್ಟು ಜನಾಂಗದ ಮಕ್ಕಳಿಗಾಗಿ ಆರಂಭಿಸಿದ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದ ಮೊದಲ ದಿನವಾದ 1998ರ ಫೆಬ್ರವರಿ 6ರಿಂದಲೂ ಮಹದೇಶ್ವರಸ್ವಾಮಿ ಪ್ರತಿದಿನ ಶೌಚಾಲಯ ಶುಚಿಗೊಳಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News