ತೆಲಂಗಾಣದ ಶ್ರೀಮಂತ ಸಂಸದ ವಿಶ್ವೇಶ್ವರ್ ರೆಡ್ಡಿ ಟಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ

Update: 2018-11-21 05:24 GMT

ಹೈದರಾಬಾದ್, ನ.21: ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ರಾಜ್ಯದಲ್ಲಿ ಅಸೆಂಬ್ಲಿ ಚುನಾವಣೆಗೆ ಕೆಲವೇ ಸಮಯವಿರುವಾಗ ಭಾರೀ ಹಿನ್ನಡೆ ಅನುಭವಿಸಿದ್ದು, ಪಕ್ಷದ ಶ್ರೀಮಂತ ಸಂಸದ ವಿಶ್ವೇಶ್ವರ್ ರೆಡ್ಡಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ರೆಡ್ಡಿ ಶೀಘ್ರವೇ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.

500 ಕೋ.ರೂ. ಆಸ್ತಿ ಘೋಷಿಸಿಕೊಂಡು ತೆಲಂಗಾಣದ ಶ್ರೀಮಂತ ಸಂಸದ ಎನಿಸಿಕೊಂಡಿರುವ ರೆಡ್ಡಿ ಪಕ್ಷ ತ್ಯಜಿಸಿರುವುದು ಎರಡನೇ ಅವಧಿಗೆ ಅಧಿಕಾರಕ್ಕೆ ಬರಬೇಕೆಂಬ ಕೆ.ಚಂದ್ರಶೇಖರ್ ರಾವ್(ಕೆಸಿಆರ್) ಆಸೆಗೆ ತಣ್ಣೀರೆರಚಿದೆ ಎನ್ನಲಾಗಿದೆ.

ತೆಲಂಗಾಣ ಚುನಾವಣೆ ಅವಧಿಗೆ ಮುನ್ನವೇ ಡಿ.7ಕ್ಕೆ ನಡೆಯಲಿದೆ.

ರಾಜಕೀಯವಾಗಿ ಪ್ರಭಾವವಿರುವ ರೆಡ್ಡಿ ಸಮುದಾಯಕ್ಕೆ ಸೇರಿರುವ ವಿಶ್ವೇಶ್ವರ್ ರೆಡ್ಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳ ಮೇಲೆ ಪ್ರಭಾವಬೀರಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಪೋಲೊ ಆಸ್ಪತ್ರೆಯ ಸ್ಥಾಪಕ ಪ್ರತಾಪ್ ಸಿ. ರೆಡ್ಡಿ ಅಳಿಯನಾಗಿರುವ ವಿಶ್ವೇಶ್ವರ್ ಅವರ ಪತ್ನಿ ಅಪೊಲೊ ಆಸ್ಪತ್ರೆಗಳ ಆಡಳಿತ ನಿರ್ದೇಶಕಿಯಾಗಿದ್ದಾರೆ.

 ರಾಜಕಾರಣಿಯಾಗಿ ಪರಿವರ್ತಿತರಾಗಿರುವ ಎಂಜಿನಿಯರ್ ಆಗಿರುವ ರೆಡ್ಡಿ 2013ರಲ್ಲಿ ಟಿಆರ್‌ಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು. ರೆಡ್ಡಿಯ ಅಜ್ಜ ಕೊಂಡ ರಂಗ ರೆಡ್ಡಿ ಸ್ವಾತಂತ್ರ ಹೋರಾಟಗಾರರಾಗಿದ್ದು, ಆಂಧ್ರದ ಉಪ ಮುಖ್ಯಮಂತ್ರಿಯಾಗಿದ್ದರು. ಅವರ ನೆನಪಿಗೆ ಜಿಲ್ಲೆಯೊಂದಕ್ಕೆ ರಂಗಾರೆಡ್ಡಿ ಎಂದ ಹೆಸರಿಡಲಾಗಿದೆ.

ಟಿಆರ್‌ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ಗೆ ಮೂರು ಪುಟಗಳ ಸುದೀರ್ಘ ಪತ್ರ ಬರೆದಿರುವ ರೆಡ್ಡಿ ಪಕ್ಷ ತ್ಯಜಿಸುವುದಾಗಿ ತಿಳಿಸಿದ್ದಾರೆ. ತಿಂಗಳಾಂತ್ಯಕ್ಕೆ ರಾಜ್ಯಕ್ಕೆ ಭೇಟಿ ನೀಡಲಿರುವ ಸೋನಿಯಾ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News