ಪ್ರವಾದಿಯ ಶಾಂತಿಯ ಸಂದೇಶ ಇಂದಿಗೂ ಅನ್ವಯ: ಡಾ.ಜಿ.ಪರಮೇಶ್ವರ್

Update: 2018-11-21 08:36 GMT

ತುಮಕೂರು, ನ.21: ಪ್ರವಾದಿ ಮಹಮದ್ ಪೈಗಂಬರ್ ಪ್ರಪಂಚದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾರಿದ ಶಾಂತಿಯ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ನಗರದ ಬಾರ್‌ಲೈನ್ ರಸ್ತೆಯ ಮೆಕ್ಕಾ ಮಸೀದಿಯಲ್ಲಿ ಆಯೋಜಿಸಿದ್ದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರವಾದಿಗಳು ಬೋಧಿಸಿದ ಪರಿಹಾರ ಸೂತ್ರಗಳು ಮುಸ್ಲಿಮ್ ಸಮುದಾಯಕ್ಕೆ ಸಿಮೀತವಲ್ಲ. ಇಡೀ ಮನುಕುಲಕ್ಕೆ ಸೇರಿದ್ದು. ಅಂದು ಅವರು ಬೋಧಿಸಿದ ಪರಿಹಾರ ಸೂತ್ರಗಳನ್ನು ಪಾಲಿಸುವ ಮೂಲಕ ನಾವೆಲ್ಲರೂ ಸಹೋದರರಂತೆ ಬಾಳಬೇಕಾಗಿದೆ ಎಂದರು.

ಸಂಸದ ಎಸ್.ಪಿ.ಮುದ್ದ ಹನುಮೇಗೌಡ ಮಾತನಾಡಿ ಶುಭ ಹಾರೈಸಿದರು.

ಮಾಜಿ ಶಾಸಕ ಹಾಗೂ ಮಕ್ಕಾ ಮಸೀದಿ ಮುಖಂಡ ಎಸ್.ಪಿ.ಅಹ್ಮದ್ ಮಾತನಾಡಿದರು.

ಇದೇ ವೇಳೆ ಮಸೀದಿ, ಚರ್ಚ್, ಮಂದಿರ, ದೇವಾಲಯಗಳಲ್ಲಿ ದ್ವನಿವರ್ಧಕ ಬಳಕೆಗೆ ವಿನಾಯಿತಿ ನೀಡಬೇಕೆಂಬ ಮನವಿಯನ್ನು ಮಸೀದಿ ಪರವಾಗಿ ಗೃಹ ಸಚಿವರಿಗೆ ನಿವೃತ್ತ ಡಿಡಿಪಿಐ ಖಲಂದರ್ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶಕುಮಾರ್, ಸಿಇಒ ಅನೀಶ್ ಜಾಯ್, ಎಸ್ಪಿ ಡಾ.ದಿವ್ಯಾ ಗೋಪಿನಾಥ್, ಮುಖಂಡರಾದ ಮುಸ್ತಾಕ್ ಅಹ್ಮದ್, ಟಿ.ಆರ್.ವೇಣುಗೋಪಾಲ್, ಮೆಹಬೂಬ್ ಪಾಷ, ಸೈಯದ್ ನಯಾಝ್, ಅಫ್ತಾಬ್ ಅಹ್ಮದ್, ವೈ.ಎನ್.ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ನಗರದ ಗೂಡ್‌ಶೆಡ್ ಕಾಲನಿಯಲ್ಲಿ ಮೀಲಾದ್ ಜಾಥಾಕ್ಕೆ ಡಾ.ಜಿ.ಪರಮೇಶ್ವರ್ ಚಾಲನೆ ನೀಡಿದರು.

ಗೂಡ್ ಶೆಡ್ ಕಾಲನಿಯಿಂದ ಹೊರಟ ಮೆರವಣಿಗೆ ಮಂಡಿಪೇಟೆ, ಸಂತೆಪೇಟೆ, ಪಿ.ಎಚ್.ಕಾಲನಿ, ಗುಂಚಿ ಚೌಕ ಮೂಲಕ ಬಾರ್‌ಲೈನ್ ರಸ್ತೆಯ ಮೆಕ್ಕಾ ಮಸೀದಿಗೆ ಆಗಮಿಸಿ, ಪ್ರಾರ್ಥನೆಯ ಬಳಿಕ ಅದೇ ಮಾರ್ಗವಾಗಿ ಕುಣಿಗಲ್ ರಸ್ತೆಯ ಈದ್ಗಾ ಮೈದಾನದಲ್ಲಿ ಸಮಾರೋಪಗೊಂಡಿತು.

ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News