ರೈತರ ಬಗ್ಗೆ ಮಾತನಾಡಲು ಬಿಜೆಪಿಗೆ ನೈತಿಕತೆ ಇಲ್ಲ: ಡಾ.ಜಿ.ಪರಮೇಶ್ವರ್

Update: 2018-11-21 08:55 GMT

ತುಮಕೂರು, ನ.21: ಕಬ್ಬು ಬೆಳೆಗಾರರ ಸಮಸ್ಯೆಗೆ ಕೇಂದ್ರ ಸರಕಾರವೂ ಸ್ಪಂದಿಸಬೇಕಿದೆ. ಆದರೆ ರೈತರ ಸಮಸ್ಯೆ ಹೊತ್ತು ಕೇಂದ್ರದ ಮುಂದಿಟ್ಟರೆ ಯಾವುದೇ ರೀತಿಯಲ್ಲೂ ಸಕರಾತ್ಮಕ ಸ್ಪಂದನ ಸಿಗುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಬ್ಬಿನ ದರ ಕೇಂದ್ರ ಸರಕಾರ ನಿಗದಿಪಡಿಸುವುದರಿಂದ ಅವರು ಸಹ ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಬೇಕಿದೆ. ಆದರೆ ತಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಕೇಂದ್ರ ವರ್ತಿಸುತ್ತಿದೆ. ಹೀಗಿರುವಾಗ ರಾಜ್ಯ ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿರುಗೇಟು ನೀಡಿದರು.

ರಾಜ್ಯ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ರೈತರ ಪರವಾಗಿ ಮಾತನಾಡುತ್ತಾರೆ. ವಾಸ್ತವ ಪರಿಸ್ಥಿತಿಯನ್ನು ಅವಲೋಕಿಸಿ ನೋಡಿದರೆ ಇವರ್ಯಾರಿಗೂ ರೈತರ ಪರವಾದ ಕಾಳಜಿ ಇಲ್ಲದಿರುವುದು ಕಂಡುಬರುತ್ತದೆ ಎಂದರು. ಕೇಂದ್ರ ಸರಕಾರ ನಿಗದಿಪಡಿಸುವ ಕಬ್ಬಿನ ಎಫ್.ಆರ್.ಪಿ. ಬೆಲೆ ಏರುಪೇರಾಗುತ್ತದೆ. ಅದರ ಮೇಲೆ ಸಕ್ಕರೆ ಕಾರ್ಖಾನೆ ಮಾಲಕರು ಕಬ್ಬಿನ ಬೆಲೆ ನಿಗದಿಪಡಿಸುತ್ತಾರೆ. ಕೆಲವು ಸಂದರ್ಭದಲ್ಲಿ ಎಫ್.ಆರ್.ಪಿ. ಬೆಲೆಗಿಂತ ಹೆಚ್ಚು ಬೆಲೆ ಸಿಗುತ್ತದೆ. ಇನ್ನು ಕೆಲವೊಮ್ಮೆ ಕಡಿಮೆಯೂ ಸಿಗುತ್ತದೆ. ಹಾಗಾಗಿ ಕಾರ್ಖಾನೆಗಳು ರೈತರೊಂದಿಗೆ ಮಾಡಿಕೊಂಡ ಒಪ್ಪಂದಗಳಂತೆ ನಡೆದುಕೊಳ್ಳುತ್ತಿಲ್ಲ. ಇದನ್ನು ಮನಗಂಡು ರೈತರಿಗೆ ಸಹಾಯ ಮಾಡುವುದಕ್ಕಾಗಿ ಸಕ್ಕರೆ ಕಾರ್ಖಾನೆಗಳಿಗೆ ಸರಕಾರ ಹಣ ನೀಡಿದೆ ಎಂದು ಹೇಳಿದರು.

ಕಳೆದ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ 450 ರೂ. ಬೆಂಬಲ ಬೆಲೆ ನೀಡಿದ್ದಾರೆ. 2017-18ರ ಒಪ್ಪಂದದ ಹಣ ಕೊಟ್ಟಿಲ್ಲ ಎಂದು ರೈತರ ಪ್ರತಿಭಟನೆಗಿಳಿದಿದ್ದಾರೆ. ಆದರೆ ಸರಕಾರ ಈಗಾಗಲೇ ರೈತರೊಂದಿಗೆ ಕಾರ್ಖಾನೆ ಮಾಲಕರೊಂದಿಗೆ ಸಭೆ ನಡೆಸಿದೆ. ಬೆಳಗಾವಿ ಅಧಿವೇನದ ಸಂದರ್ಭದಲ್ಲಿ ಅಂತಿಮವಾಗಿ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ವೇಳೆ ಸಂಸದ ಎಸ್.ಪಿ.ಮುದ್ದಹನುಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News