ಉದ್ದೇಶಪೂರ್ವಕವೇ ಎಂದು ತನಿಖೆ ನಡೆಸಬೇಕೆಂದ ದಿಲ್ಲಿ ಪೊಲೀಸರು: ವ್ಯಾಪಕ ಆಕ್ರೋಶ

Update: 2018-11-21 09:52 GMT

ಹೊಸದಿಲ್ಲಿ, ನ.21: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ರಾಜ್ಯ ಸೆಕ್ರೇಟಿಯೇಟ್ ನಲ್ಲೇ ಮೆಣಸಿನ ಪುಡಿ ಎರಚಿರುವ ಘಟನೆ ಸಂಬಂಧ ವ್ಯಾಪಕ ಟೀಕೆಗೆ ಗುರಿಯಾಗಿರುವ ದಿಲ್ಲಿ ಪೊಲೀಸರು, "ಈ ಘಟನೆ ಉದ್ದೇಶಪೂರ್ವಕವೇ ಅಥವಾ ಅಲ್ಲವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಪ್ರಕಟಿಸಿದ್ದಾರೆ.

ಅನಿಲ್ ಕುಮಾರ್ ಎಂಬಾತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಳಿ ತಮ್ಮ ಅಹವಾಲು ಹೇಳಿಕೊಳ್ಳಲು ಸೆಕ್ರೇಟ್ರಿಯೇಟ್‍ ಗೆ ಆಗಮಿಸಿದ್ದ. ಮುಖ್ಯಮಂತ್ರಿಗೆ ಮನವಿಪತ್ರ ಸಲ್ಲಿಸಿ ಅವರ ಪಾದ ಸ್ಪರ್ಶಿಸುವ ವೇಳೆ ಆತನ ಕೈನಿಂದ ಮೆಣಸಿನಪುಡಿ ಬಿದ್ದಿತ್ತು. ಮೆಣಸಿನಪುಡಿ ಪೊಟ್ಟಣ ಬೀಳಿಸಿರುವುದು ಉದ್ದೇಶಪೂರ್ವಕವಲ್ಲವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಅನಿಲ್ ಕುಮಾರ್ ಶರ್ಮಾ ಎಂಬಾತ ಸಿಎಂ ಪಾದಕ್ಕೆ ನಮಸ್ಕರಿಸಲು ಮುಂದಾದಾಗ ಭದ್ರತಾ ಸಿಬ್ಬಂದಿ ಆತನನ್ನು ತೆರವುಗೊಳಿಸಲು ಎಳೆದಾಗ ಮೆಣಸಿನಪುಡಿ ಸಿಎಂ ಅವರತ್ತ ಹಾರಿತು ಎಂದು ಪೊಲೀಸ್ ಪ್ರಕಟಣೆ ಹೇಳಿದೆ. ತಕ್ಷಣ ಭದ್ರತಾ ಸಿಬ್ಬಂದಿ ಆತನನ್ನು ಪಕ್ಕಕ್ಕೆ ಎಳೆದಿದ್ದು, ಮೆಣಸಿನಪುಡಿ ಇದ್ದ ಪುಟ್ಟ ಚೀಲ ಹರಿಯಿತು ಎಂದಿದೆ. ಆದರೆ ಈ ಘಟನಾವಳಿಯನ್ನು ಭದ್ರತಾ ಕ್ಯಾಮೆರಾ ಸೆರೆಹಿಡಿದಿದ್ದು, ಇದು ಪೊಲೀಸ್ ಹೇಳಿಕೆಗೆ ಪೂರಕವಾಗಿಲ್ಲ.

ಈ ವಿಡಿಯೊ ತುಣುಕಿನಿಂದ ತಿಳಿದುಬರುವಂತೆ ಶರ್ಮಾ, ಕೇಜ್ರಿ ಪಾದಕ್ಕೆ ನಮಸ್ಕರಿಸಲು ಕೆಳಕ್ಕೆ ಬಾಗಿದ್ದಾರೆ. ತಕ್ಷಣ ಎದ್ದು ಸಿಎಂ ಮುಖದತ್ತ ಮೆಣಸಿನಪುಡಿ ಎರಚಿದ್ದಾನೆ. ಆದರೆ ಯಾವುದೇ ಗಂಭೀರ ಗಾಯಗಳಾಗದೇ ಕೇಜ್ರಿ ಪಾರಾಗಿದ್ದಾರೆ. ಸಿಎಂ ಕನ್ನಡಕ ಧರಿಸಿದ್ದರಿಂದ ಕಣ್ಣಿಗೂ ಯಾವುದೇ ತೊಂದರೆಯಾಗಿಲ್ಲ.

ಇಷ್ಟಾಗಿಯೂ ಪೊಲೀಸರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News