ಸಹಕಾರಿ ಸಂಸ್ಥೆಗಳ ಮೇಲೆ ಕೇಂದ್ರ ಜಾರಿ ಮಾಡಿರುವ ಆದಾಯ ತೆರಿಗೆ ಕಾಯ್ದೆ ರದ್ದಾಗಲಿ: ಪರಿಷತ್ ಸದಸ್ಯ ಧರ್ಮೇಗೌಡ

Update: 2018-11-21 17:30 GMT

ಚಿಕ್ಕಮಗಳೂರು, ನ.21: ಸಹಕಾರಿ ಸಂಸ್ಥೆಗಳು ತನ್ನ ಲಾಭಾಂಶದ ಶೇ.33ರಷ್ಟು ಮೊತ್ತವನ್ನು ಕೇಂದ್ರ ಸರಕಾರಕ್ಕೆ ಪಾವತಿಸುವ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಪಿ ಅನ್ನು 2007-08ನೇ ಸಾಲಿನಿಂದ ಜಾರಿಗೆ ತಂದಿದೆ. ಇದು ಸಹಕಾರಿ ಸಂಸ್ಥೆಗಳಿಗೆ ಹೊರೆಯಾಗಿದೆ. ಸಹಕಾರಿ ಸಂಸ್ಥೆಗಳ ಮೇಲೆ ಕೇಂದ್ರ ಸರಕಾರ ಜಾರಿಗೊಳಿಸಿರುವ ಆದಾಯ ತೆರಿಗೆ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಎಸ್.ಎಲ್.ಧರ್ಮೇಗೌಡ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರಿ ಯೂನಿಯನ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ನಡೆದ 65ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಯ್ದೆಯನ್ವಯ ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಪ್ರತೀ ವರ್ಷ 2.5 ಕೋಟಿಗಳಷ್ಟು ತೆರಿಗೆಯನ್ನು ಕೇಂದ್ರ ಪಾವತಿಸಬೇಕಾಗಿದೆ. 2007-08ನೇ ಸಾಲಿನಿಂದ ಈವರೆಗೆ 17 ಕೋಟಿ ರೂ. ತೆರಿಗೆ ಪಾವತಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ಒಳಗೊಂಡಂತೆ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್‍ಗಳು, ಮಿಲ್ಕ್ ಯೂನಿಯನ್‍ಗಳು ಈವರೆಗೂ ಸುಮಾರು 850 ಕೋಟಿಗೂ ಹೆಚ್ಚು ತೆರಿಗೆ ಪಾವತಿಸಿದ್ದು, ಸಹಕಾರ ಸಂಸ್ಥೆಗಳ ಹಿತಾಸಕ್ತಿಯಿಂದ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ತೆರಿಗೆಯನ್ನು ರದ್ದುಪಡಿಸುವ ಆವಶ್ಯಕತೆ ಇದೆ ಎಂದು ಹೇಳಿದರು.

ಈವರೆಗೂ ಸಹಕಾರ ಸಂಸ್ಥೆಗಳು ಲೆಕ್ಕಪರಿಶೋಧಕರ ಸಂಭಾವನೆ ದರವನ್ನು ಸಂಧಾನದ ಮೂಲಕ ತೀರ್ಮಾನಿಸಿಕೊಳ್ಳಲು ಸ್ವತಂತ್ರರಾಗಿದ್ದರು. ಆದರೆ 2018-19ನೇ ಸಾಲಿನಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 69ರನ್ವಯ ಸಹಕಾರ ಸಂಸ್ಥೆಗಳು ಈ ರೀತಿ ಮಾಡುವಂತಿಲ್ಲ. ಈವರೆಗೂ ಲೆಕ್ಕಪರಿಶೋಧಕರಿಗೆ ನೀಡುತ್ತಿದ್ದ 4 ಲಕ್ಷ ರೂ. ಆಡಿಟ್ ಶುಲ್ಕದ ಬದಲಿಗೆ ಈಗ 10 ಲಕ್ಷ ರೂ. ಕೊಡುವಂತಾಗಿದೆ. ಕಾಯ್ದೆ ತಿದ್ದುಪಡಿಯನ್ನು ರದ್ದುಪಡಿಸುವುದು ಆವಶ್ಯಕವಾಗಿದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಡಿಸಿಸಿ ಬ್ಯಾಂಕಿಗೆ ಬಡ್ಡಿ ಸಹಾಯಧನದ ಮೊಬಲಗು ಪಾವತಿಸಲು ಬಾಕಿ ಇದೆ. ರಾಜ್ಯ ಸರ್ಕಾರದಿಂದ 2017-18ನೇ ಸಾಲಿಗೆ 26.82 ಕೋಟಿ ರೂ. ಬಡ್ಡಿ ಸಹಾಯಧನ ಈವರೆಗೂ ಪಾವತಿಯಾಗಿಲ್ಲ. ಅದೇ ರೀತಿ ಕೇಂದ್ರ ಸರ್ಕಾರದಿಂದ 2016-17ನೇ ಸಾಲಿಗೆ 17.39 ಕೋಟಿ ರೂ. ಹಾಗೂ 2017-18ನೇ ಸಾಲಿಗೆ 15.90 ಕೋಟಿ ರೂ. ಸೇರಿ 33.29 ಕೋಟಿ ರೂ. ಬಡ್ಡಿ ಸಹಾಯಧನ ಪಾವತಿಗೆ ಬಾಕಿ ಇದ್ದು ಕೂಡಲೆ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಜಿಲ್ಲೆಯ ಸಹಕಾರ ಸಂಸ್ಥೆಗಳು ಪ್ರಸ್ತುತ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ ಎಲ್ಲ ಸಹಕಾರ ಸಂಸ್ಥೆಗಳೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸತತವಾಗಿ ಎ ಶ್ರೇಣಿಯಲ್ಲಿ ಮುಂದುವರೆಯುತ್ತಿದೆ. ಇದರಿಂದಾಗಿ ಮುಂಬೈನ ಆವಿಸ್ ಪಬ್ಲಿಕೇಶನ್ಸ್ ಸಂಸ್ಥೆಯು 500 ರಿಂದ 1 ಸಾವಿರ ಕೋಟಿ ರೂ. ಠೇವಣಿ ಹೊಂದಿರುವ ಡಿಸಿಸಿ ಬ್ಯಾಂಕ್‍ಗಳ ವಿಭಾಗದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗೆ 2018ನೇ ಸಾಲಿನ ಉತ್ತಮ ಬ್ಯಾಂಕ್ ಎಂದು ಪ್ರಶಸ್ತಿಗೆ ಆಯ್ಕೆ ಮಾಡಿದೆ. 2019ರಲ್ಲಿ ಪ್ರಶಸ್ತಿಯನ್ನು ಪ್ರಧಾನ ಮಾಡಲಿದೆ ಎಂದು ತಿಳಿಸಿದರು.

ಸಹಕಾರ ಸಂಸ್ಥೆಗಳ ಮೂಲಕ ಕೌಶಲ್ಯ, ತಾಂತ್ರಿಕತೆ ವೃದ್ಧಿಪಡಿಸುವ ದಿನದ ಆಚರಣೆ ಕುರಿತು ಉಪನ್ಯಾಸ ನೀಡಿದ ಅಪೆಕ್ಸ್ ಬ್ಯಾಂಕ್ ತರಬೇತಿ ಕೇಂದ್ರದ ನಿವೃತ್ತ ಉಪನ್ಯಾಸಕ ಎಸ್.ಜಿ.ಕುಲಕರ್ಣಿ, ತಾಂತ್ರಿಕವಾಗಿ ದೇಶವು ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಸಹಕಾರ ಸಂಸ್ಥೆಗಳೂ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ರಾಜ್ಯವು ಇಡೀ ದೇಶದಲ್ಲಿಯೇ ತಂತ್ರಾಂಶದಲ್ಲಿ ಮುಂದಿರುವ ರಾಜ್ಯ ಎಂಬ ಹೆಸರು ಪಡೆದಿದೆ. ಗಣಕೀಕೃತಗೊಂಡ ಸಹಕಾರ ಸಂಸ್ಥೆಗಳ ಸಂಖ್ಯೆ ರಾಜ್ಯದಲ್ಲಿ ಕಡಿಮೆ ಇದೆಯಾದರೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಉತ್ತಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಸಹಕಾರ ಸಂಸ್ಥೆಗಳು, ಅಪೆಕ್ಸ್ ಬ್ಯಾಂಕ್ ಅಥವಾ ಡಿಸಿಸಿ ಬ್ಯಾಂಕ್‍ನ ಸಹಕಾರ ಪಡೆದು ಗಣಕೀಕರಣಗೊಳಿಸಿಕೊಳ್ಳುವ ಅವಶ್ಯಕತೆ ಇದೆ. ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಎಲ್ಲವೂ ಒಟ್ಟಾಗಿ ಗಣಕೀಕರಣಗೊಳಿಸಿಕೊಂಡು ಗ್ರಾಹಕರುಗಳಿಗೆ ಉತ್ತಮ ಸೇವೆ ಸಲ್ಲಿಸಲು ಮುಂದಾಗಬೇಕೆಂದು ಹೇಳಿದರು.

ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಮ್ಯಾಮ್ಕೋಸ್ ಉಪಾಧ್ಯಕ್ಷ ಯಡಗೆರೆ ಸುಬ್ರಹ್ಮಣ್ಯ, ಕರ್ನಾಟಕ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‍ನ ಜಿಲ್ಲಾ ನಿರ್ದೇಶಕಿ ರೇಣುಕಾ ವೆಂಕಟೇಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಚಿಕ್ಕಮಗಳೂರು ಪಿ.ಎಲ್.ಡಿ. ಬ್ಯಾಂಕ್, ಟಿ.ಎ.ಪಿ.ಸಿ.ಎಂ.ಎಸ್. ಸಂಗಮೇಶ್ವರ ಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ತರೀಕೆರೆ ರೇವಣ ಸಿದ್ದೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಳಸ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕಾವಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಿಕಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮುತ್ತಿನ ಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಯಡಗೆರೆ ಪಟ್ಟಣ ಸಹಕಾರ ಸಂಘ, ಕರ್ನಾಟಕ ಮಹಿಳಾ ಸಹಕಾರ ಬ್ಯಾಂಕ್, ಕೊಪ್ಪ ಸಹಕಾರ ಸಾರಿಗೆ, ಚಿಕ್ಕದೇವನೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ದೊಡ್ಡಪಟ್ಟಣಗೆರೆಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕೆ.ಎ.ವಿವೇಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ದಿನೇಶ್ ಹೆಗ್ಡೆ, ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಪಿ.ರವಿ, ನಿರ್ದೇಶಕಿ ಡಿ.ಎಸ್.ರೇಖಾ ಈರೇಗೌಡ, ಹೆಚ್.ಎನ್.ನಂಜೇಗೌಡ, ಟಿ.ಈ.ಮಂಜುನಾಥ್, ಸಿ.ಎಸ್.ರಂಗನಾಥ್ ಇತರರು ಉಪಸ್ಥಿತರಿದ್ದರು.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಮತ್ತು ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳಲ್ಲಿ ಸಾಕಷ್ಟು ನ್ಯೂನತೆಗಳು ಮತ್ತು ಗೊಂದಲಗಳಿವೆ, 2016-17ನೇ ಸಾಲಿನಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ 3788 ರೈತರು 104.80 ಲಕ್ಷ ರೂ. ವಿಮಾ ಕಂತು ಕಟ್ಟಿದ್ದರು. ಆದರೆ ಕೇವಲ 886 ರೈತರಿಗೆ ಮಾತ್ರ 511.59 ಲಕ್ಷ ರೂ. ಪರಿಹಾರ ದೊರೆತಿದೆ. ಫಸಲ್ ಬೀಮಾ ಯೋಜನೆಯಡಿ 1858 ರೈತರು ವಿಮಾ ಕಂತು ಪಾವತಿಸಿದ್ದು, ಕೇವಲ 27 ಜನ ರೈತರಿಗೆ 3.96 ಲಕ್ಷ ರೂ. ಪರಿಹಾರ ದೊರೆತು 1831 ರೈತರು ವಿಮೆ ಪರಿಹಾರದಿಂದ ವಂಚಿತರಾಗಿದ್ದಾರೆ. ಕಡೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈ ತಾಲೂಕಿನಲ್ಲಿ ಓರ್ವ ರೈತನಿಗೆ ವಿಮಾ ಸಂಸ್ಥೆಯು ವಿಮಾ ಪರಿಹಾರ ನೀಡಿದೆ. ಅದೇ ಜಮೀನಿನ ಪಕ್ಕದ ಜಮೀನಿಗೆ ವಿಮಾ ಪರಿಹಾರವನ್ನು ನಿರಾಕರಿಸಲಾಗಿದೆ. ಯೋಜನೆಯು ಸಂಪೂರ್ಣ ಗೊಂದಲದಿಂದ ಕೂಡಿದ್ದು, ಸಾಲಗಾರ ರೈತ ಸದಸ್ಯರು ವಿಮೆ ಪಾವತಿಸಲು ಮುಂದಾಗುತ್ತಿಲ್ಲ. ಸರಕಾರ ಗೊಂದಲಗಳನ್ನು ಪರಿಹರಿಸಲು ಮುಂದಾಗಬೇಕು.
- ಎಸ್.ಎಲ್.ಧಮೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News