ಕುಮಾರಸ್ವಾಮಿಗೆ ನೈತಿಕತೆ ಇದ್ದರೆ ಮೊದಲು ರಾಜಿನಾಮೆ ನೀಡಲಿ: ಶಾಸಕ ಜ್ಯೋತಿಗಣೇಶ್‍

Update: 2018-11-21 18:53 GMT

ತುಮಕೂರು,ನ.21: ರೈತ ಮಹಿಳೆಯ ಚಾರಿತ್ರ್ಯವನ್ನು ಪ್ರಶ್ನಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಗೆ ನೈತಿಕತೆ ಇದ್ದರೆ ಮೊದಲು ರಾಜಿನಾಮೆ ನೀಡಲಿ ಎಂದು ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‍ರವರು ಒತ್ತಾಯಿಸಿದರು.

ತುಮಕೂರು ನಗರದ ಟೌನ್ ಹಾಲ್ ಸರ್ಕಲ್‍ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಬ್ಬು ಬೆಳೆಗಾರರ ಹಣವನ್ನು ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿಯ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದ ರೈತ ಮಹಿಳೆಯ ಮೇಲೆ ತಮ್ಮ ಪೌರುಷದ ಮಾತನಾಡಿರುವುದು ಖಂಡನೀಯ. ಇದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಎಂದರು. 

ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುವ ಡೋಂಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರನ್ನು ಗೂಂಡಾಗಳು ಎಂದು ಕರೆದಿರುವುದು ರಾಜ್ಯದ ರೈತ ಸಮೂಹಕ್ಕೆ ಮಾಡಿದ ಅವಮಾನ ಎಂದು ತಿಳಿಸಿದರು. 

ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಹುಲಿ ನಾಯ್ಕ್ ಮಾತನಾಡಿ ಉತ್ತರ ಕರ್ನಾಟಕದ ರೈತರ ಬವಣೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೆ ಹೇಗೆ ತಿಳಿಯುತ್ತದೆ. ಕೇವಲ 3 ಜಿಲ್ಲೆಗಳಿಗೆ ಸೀಮಿತವಾದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ರಾಜ್ಯ ರೈತ ಮೋಚಾ ಕಾರ್ಯದರ್ಶಿ ಬ್ಯಾಟರಂಗೇಗೌಡ ಮಾತನಾಡಿ, ದೇವೇಗೌಡ ಕುಟುಂಬದವರನ್ನು ಯಾರು ಅನುಕರಿಸುತ್ತಾರೆಯೋ ಅವರ ಕುಟುಂಬಕ್ಕೆ ಯಾರು ಜೈಕಾರ ಹಾಕುತ್ತಾರೋ, ಅಂತಹವರು ಮಾತ್ರ ರೈತರೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿದಿದ್ದಾರೆ ಎಂದು ವ್ಯಂಗವಾಡಿದರು. 

ಈ ಪ್ರತಿಭಟನೆಯಲ್ಲಿ ನಗರ ಮಂಡಲು ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರವೀಶ್, ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಟಿ.ಆರ್.ಸದಾಶಿವಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್‍ ನಂದೀಶ್, ಹಿರಿಯ ಮುಖಂಡರಾದ ಸತ್ಯಮಂಗಲ ಸದಣ್ಣ, ಗುರು ಸಿದ್ದೇಗೌಡ, ಕೊಪ್ಪಳ್ ನಾಗರಾಜ್, ಇಂದ್ರಕುಮಾರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News