ಮಂಡ್ಯ: ಸಿಎಂಗೆ ಡೆತ್‍ನೋಟ್ ಬರೆದು ರೈತ ಆತ್ಮಹತ್ಯೆ

Update: 2018-11-23 14:34 GMT

ಮಂಡ್ಯ, ನ.23: ಸಾಲಬಾಧೆ ಮತ್ತು ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ರೈತರೊಬ್ಬರು ಮುಖ್ಯಮಂತ್ರಿಗಳ ಹೆಸರಿಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದುದ್ದ ಬಳಿಯ ಕನ್ನಟ್ಟಿ ಗ್ರಾಮದಲ್ಲಿ ನಡೆದಿದೆ.

ಜಯಕುಮಾರ(44) ಆತ್ಮಹತ್ಯೆ ಮಾಡಿಕೊಂಡಿರುವ ರೈತ. ಇವರು ಗುರುವಾರ ತಡರಾತ್ರಿ ತನ್ನ ಜಮೀನಿನ ಬಳಿ ಬೆಳೆಗಳಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧಿ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಯಕುಮಾರ್ 30 ಗುಂಟೆ ಜಮೀನು ಹೊಂದಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದರು. ಬ್ಯಾಂಕ್ ಸೇರಿದಂತೆ ವಿವಿಧೆಡೆ ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದ್ದು, ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.

ಜಯಕುಮಾರ್ ಸಾಯುವ ಮುನ್ನ ಮುಖ್ಯಮಂತ್ರಿಗಳ ಅವರಿಗೆ ಡೆತ್‍ನೋಟ್ ಬರೆದಿದ್ದಾರೆ. '4 ವರ್ಷದಿಂದ ಬರಗಾಲದ ಕಾರಣ ವ್ಯವಸಾಯದಿಂದ ಯಾವುದೇ ಲಾಭ ಬಂದಿಲ್ಲ. ಈಗ 80,000 ರೂ. ಕೃಷಿಗೆ ಹಾಕಿದರೂ ಬೆಳೆ ಕೈ ಹಿಡಿದಿಲ್ಲ. ನನಗೆ ವೈದ್ಯರು ಗಂಟಲು ಕ್ಯಾನ್ಸರ್ ಇದೆ, ಅದಕ್ಕೆ 3 ಲಕ್ಷ ಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ನಾನು ಕುಗ್ಗಿ ಹೋಗಿದ್ದೇನೆ. ಆ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ' ಎಂದು ಜಯಕುಮಾರ್ ಮುಖ್ಯಮಂತ್ರಿ ಅವರಿಗೆ ಬರೆದಿರುವ ಡೆತ್‍ನೋಟ್ ನಲ್ಲಿ ತಿಳಿಸಿದ್ದಾರೆ.

ಸಚಿವ ಪುಟ್ಟರಾಜು ಭರವಸೆ: ಮುಖ್ಯಮಂತ್ರಿಗಳು ತಮ್ಮ ಗ್ರಾಮಕ್ಕೆ ಆಗಮಿಸಬೇಕೆಂದು ಕನ್ನಟ್ಟಿ ಗ್ರಾಮಸ್ಥರು ಪಟ್ಟುಹಿಡಿದಿದ್ದರು. ಅಲ್ಲಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸಮಾಧಾನಪಡಿಸಿ ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದು ಶವಸಂಸ್ಕಾರ ನಡೆಸಿದರು.
ಜಯಕುಮಾರ್ ಕುಟುಂಬಕ್ಕೆ ಸರಕಾರದಿಂದ ದೊರೆಯುವ ಸೌಲಭ್ಯ ದೊರಕಿಸಿಕೊಡಲಾಗುವುದು. ಅಲ್ಲದೆ, ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಜವಾಬ್ಧಾರಿಯನ್ನು ಸ್ಥಳೀಯ ಶಾಸಕನಾದ ನಾನು ವಹಿಸಿಕೊಳ್ಳುತ್ತೇನೆ ಎಂದು ಸಚಿವ ಪುಟ್ಟರಾಜು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News