ರಾಜ್ಯದ 197 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ: ಸಚಿವ ದೇಶಪಾಂಡೆ

Update: 2018-11-23 14:47 GMT

ಬೆಂಗಳೂರು, ನ.23: ರಾಜ್ಯದ 13 ಜಿಲ್ಲೆಗಳ 197 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ಚ್ಯುತಿ ಬರದಂತೆ ಕ್ರಮ ಕೈಗೊಳ್ಳಲು ಮತ್ತು ನೀರಿನ ಪ್ರಮಾಣದ ಜೊತೆಗೆ ನೀರಿನ ಗುಣಮಟ್ಟದ ಬಗ್ಗೆಯೂ ನಿರಂತರ ನಿಗಾ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಣ ಹವೆ ಈಗಲೂ ಮುಂದುವರೆದಿದ್ದು, ಹಿಂಗಾರು ಋತುವಿನಲ್ಲಿಯೂ ಶೇ.49ರಷ್ಟು ಮಳೆಯ ಕೊರತೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕುಡಿಯವ ನೀರಿನ ವ್ಯವಸ್ಥೆ, ಮೇವಿನ ಲಭ್ಯತೆ, ಉದ್ಯೋಗ ಸೃಷ್ಟಿ ಹಾಗೂ ಮುಖ್ಯವಾಗಿ ಗುಳೆ ಹೋಗುವುದನ್ನು ತಡೆಯುವ ಬಗ್ಗೆ ಆದ್ಯತೆಯ ಮೇಲೆ ಕ್ರಮ ವಹಿಸಲಾಗುತ್ತಿದೆ ಎಂದರು.

ಕೃಷಿ ಚಟುವಟಿಕೆಗಳು ಕುಂಠಿತವಾಗುವ ಲಕ್ಷಣಗಳಿರುವುದರಿಂದ, ಜನ ಜಾನುವಾರುಗಳು ಗುಳೆ ಹೋಗುವ ಸಾಧ್ಯತೆಯಿದೆ. ಇದನ್ನು ತಡೆಯುವ ದೃಷ್ಟಿಯಿಂದ ನರೇಗಾ ಯೋಜನೆಯಡಿಯಲ್ಲಿ ಕೆಲಸ ಕಾರ್ಯಗಳನ್ನು ರೂಪಿಸಿ, ಜನರಿಗೆ ಉದ್ಯೋಗ ಸೃಷ್ಟಿಸುವುದು, ಬರಪೀಡಿತ ತಾಲೂಕುಗಳ ಉದ್ಯೋಗ ದಿನಗಳ ಅಗತ್ಯವಿರುವೆಡೆ 100 ರಿಂದ 150 ದಿನಗಳಿಗೆ ಹೆಚ್ಚಿಸುವುದು, ಉದ್ಯೋಗ ಲಭ್ಯತೆ ಕುರಿತು ಜನಸಾಮಾನ್ಯರಲ್ಲಿ ತಿಳುವಳಿಕೆ ಮೂಡಿಸಿ ಸಾಕಷ್ಟು ಪ್ರಚಾರ ಮಾಡುವುದು ಹಾಗೂ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಬರ ಪರಿಹಾರ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಗಳಲ್ಲಿ 220 ಕೋಟಿ ರೂ.ಲಭ್ಯವಿದೆ. ಅದಲ್ಲದೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯಿಂದ ಕುಡಿಯುವ ನೀರಿಗೆ ಸಂಬಂಧಿಸಿದ ಕೆಲಸಗಳಿಗಾಗಿ ಬರಪೀಡಿತ ತಾಲೂಕುಗಳ ಟಾಸ್ಕ್ ಫೋರ್ಸ್‌ ಗೆ ತಲಾ 50 ಲಕ್ಷ ರೂ.ಗಳನ್ನು ಮಂಜೂರು ಮಾಡಿದ್ದು, ಕುಡಿಯುವ ನೀರಿನ ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ದೇಶಪಾಂಡೆ ತಿಳಿಸಿದರು. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓಗಳು ಸೇರಿದಂತೆ ಜಿಲ್ಲೆಯ ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳು ಜಿಲ್ಲೆಯಾದ್ಯಂತ ನಿರಂತರ ಪ್ರವಾಸ ಕೈಗೊಂಡು ಬರಪೀಡಿತ ತಾಲೂಕುಗಳ ರೈತರ, ಕೂಲಿ ಕಾರ್ಮಿಕರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಿ ಅವರ ನೆರವಿಗೆ ಸಾಧ್ಯವಾದ ಎಲ್ಲ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳಲೂ ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಅವರು ಹೇಳಿದರು.

ರಾಜ್ಯದ ಬರಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಲು ಸರಕಾರವು ಪ್ರತಿಯೊಂದು ಕಂದಾಯ ಭಾಗಕ್ಕೆ ಅನ್ವಯವಾಗುವಂತೆ ಹಿರಿಯ ಸಚಿವರನ್ನೊಳಗೊಂಡ ನಾಲ್ಕು ಸಂಪುಟ ಉಪ ಸಮಿತಿಗಳನ್ನು ಇಷ್ಟರಲ್ಲೇ ರಚಿಸಲಿದೆ ಎಂದು ದೇಶಪಾಂಡೆ ತಿಳಿಸಿದರು.

ಈ ಸಮಿತಿಗೆ ಸರಕಾರದ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮಟ್ಟದ ಹಿರಿಯ ಅಧಿಕಾಯೊಬ್ಬರನ್ನು ಸಮನ್ವಯ ಅಧಿಕಾರಿಯನ್ನಾಗಿ ನೇಮಿಸಲಾಗುವುದು. ಸದ್ಯದಲ್ಲೇ ಈ ಸಮಿತಿ ಬರಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಸಂಬಂಧಿಸಿದ ಎಲ್ಲರೊಂದಿಗೆ ಸಭೆ ನಡೆಸಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಡಳಿತಕ್ಕೆ ಸಲಹೆ ನೀಡಲಿದೆ ಎಂದು ಅವರು ಹೇಳಿದರು.

ಅಗತ್ಯಕ್ಕಿಂತ ಹೆಚ್ಚು ಮೇವು ಸಂಗ್ರಹಣೆಯಿರುವ ಜಿಲ್ಲೆ, ತಾಲೂಕುಗಳಿಂದ ಕೊರತೆಯಿರುವ ಪ್ರದೇಶಗಳಿಗೆ ಮೇವು ಪೂರೈಸಲು ಸಂಬಂಧಪಟ್ಟ ಜಿಲ್ಲೆಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಸಂಬಂಧಪಟ್ಟ ಇಲಾಖೆಗಳ ಸಹಕಾರದೊಂದಿಗೆ ಗೋಶಾಲೆ ಮತ್ತು ಮೇವು ಸಂಗ್ರಹಣಾ ಕೇಂದ್ರಗಳನ್ನು ಅಗತ್ಯತೆಗೆ ಅನುಗುಣವಾಗಿ ತೆರೆಯಲು ಜಿಲ್ಲಾಡಳಿತಕ್ಕೆ ಲಿಖಿತ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದ ಹಲವು ಜಿಲ್ಲೆಗಳಿಂದ ಮೇವನ್ನು ಹೊರ ರಾಜ್ಯಗಳಿಗೆ ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಮೇವು ಸಾಗಾಣಿಕೆಯನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಮೇ ಮಾಸಾಂತ್ಯದವರೆಗೆ ನಿರ್ಬಂಧಿಸಿ ಆದೇಶಿಸಲಾಗಿದೆ ಎಂದು ದೇಶಪಾಂಡೆ ಹೇಳಿದರು. ರಾಜ್ಯದ ಎಲ್ಲ ಚೆಕ್‌ಪೋಸ್ಟ್‌ಗಳಿಂದ ಮೇವು ಹೊರರಾಜ್ಯಕ್ಕೆ ಹೋಗದಂತೆ ಮತ್ತು ಒಣ ಮೇವನ್ನು ಯಾವುದೇ ರೂಪದಲ್ಲಿ ಸಂಸ್ಕರಿಸಿ ಸಾಗಾಣಿಕೆ ಮಾಡುವುದನ್ನು ನಿಷೇಧಿಸಿದೆ. ಈ ನಿಟ್ಟಿನಲ್ಲಿ, ಅವಶ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News