ಶಬರಿಮಲೆ: 2 ದಿನ ಮಹಿಳೆಯರಿಗೆ ಮೀಸಲು

Update: 2018-11-23 17:32 GMT

ತಿರುವನಂತಪುರಂ, ನ.23: ಶಬರಿಮಲೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಮಹಿಳೆಯರಿಗೆಂದೇ ಎರಡು ದಿನ ಪ್ರತ್ಯೇಕವಾಗಿರಿಸಬಹುದು ಎಂದು ಹೈಕೋರ್ಟ್‌ಗೆ ಕೇರಳ ಸರಕಾರ ತಿಳಿಸಿದೆ.

ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರೂ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂಕೋರ್ಟ್‌ನ ತೀರ್ಪನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದು ಸೂಕ್ತವಾದ ಕ್ರಮವಾಗಿದೆ ಎಂದು ಶುಕ್ರವಾರ ಕೇರಳ ಸರಕಾರ ತಿಳಿಸಿದೆ. ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಭೇಟಿ ನೀಡಲು ಉದ್ದೇಶಿಸುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಕೇರಳ ಸರಕಾರ ಈ ಪ್ರಸ್ತಾವನೆ ಸಲ್ಲಿಸಿದೆ. ಕೆಲವು ರಾಜಕೀಯ ಸಂಘಟನೆಗಳು 50 ವರ್ಷದ ಕೆಳಗಿನ ಮಹಿಳೆಯರು ಶಬರಿಮಲೆ ದೇವಸ್ಥಾನ ಪ್ರವೇಶಿಸುವುದನ್ನು ತಡೆಯಲು ರೂಪಿಸಿರುವ ಯೋಜನೆಯನ್ನು ಸಾರ್ವಜನಿಕವಾಗಿ ಘೋಷಿಸಿರುವ ಕಾರಣ ತಾವು ಭದ್ರತೆ ನೀಡುವಂತೆ ಕೋರಿಕೆ ಸಲ್ಲಿಸುವ ಅನಿವಾರ್ಯತೆ ಎದುರಾಗಿದೆ ಎಂದು ನಾಲ್ವರು ಮಹಿಳೆಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಸುಪ್ರೀಂಕೋರ್ಟ್‌ನ ತೀರ್ಪಿನ ಬಳಿಕ ತಾವು ಸಂಪ್ರದಾಯದಂತೆ ಉಪವಾಸ ನಡೆಸಿ ಹರಕೆ ಹೊತ್ತಿದ್ದೇವೆ. ಆದರೆ ಶಬರಿಮಲೆ ಬೆಟ್ಟದಲ್ಲಿ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಅಯ್ಯಪ್ಪ ದೇವರ ದರ್ಶನ ಮಾಡುವ ತಮ್ಮ ಆಶಯವನ್ನು ಈಡೇರಿಸಲು ಆಗುತ್ತಿಲ್ಲ ಎಂದು ಅರ್ಜಿದಾರರು ತಿಳಿಸಿದ್ದರು. ಅರ್ಜಿಗೆ ಪ್ರತಿಕ್ರಿಯಿಸಿದ ಸರಕಾರ, ಮಹಿಳೆಯರಿಗೆ ದೇವಾಲಯಕ್ಕೆ ಭೇಟಿ ನೀಡಲೆಂದೇ ಪ್ರತ್ಯೇಕ ದಿನವನ್ನು ನಿಗದಿಗೊಳಿಸುವುದು ಸೂಕ್ತ ಎಂದು ಸಲಹೆ ನೀಡಿದ್ದು ಈ ಕುರಿತು ದೇವಸ್ಥಾನದ ಆಡಳಿತ ನಿರ್ವಹಿಸುತ್ತಿರುವ ಟ್ರಾವಂಕೋರ್ ದೇವಸ್ವಂ ಮಂಡಳಿ(ಟಿಡಿಬಿ) ಜೊತೆ ವಿಚಾರ ವಿನಿಮಯ ನಡೆಸುವುದಾಗಿ ತಿಳಿಸಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 28ರಂದು ನಡೆಸಲಿದೆ.

ಕಳೆದ ವಾರ ನಡೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಸಲಹೆಯನ್ನು ಮುಂದಿರಿಸಿದ್ದರು. ಆದರೆ ಈ ಸಲಹೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ತಿರಸ್ಕರಿಸಿದ್ದವು. ಇದಕ್ಕೂ ಮುನ್ನ, ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಲು ಮುಂದಾಗಿದ್ದ 18 ಮಹಿಳೆಯರನ್ನು ಪ್ರತಿಭಟನಾಕಾರರು ತಡೆದು ವಾಪಾಸು ಕಳಿಸಿದ್ದರು.

ವಿಶೇಷ ವ್ಯವಸ್ಥೆ ಮಾಡಲು ಮನವಿ

ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಮಹಿಳೆಯರು, ದೇವಸ್ಥಾನ ಪ್ರವೇಶಿಸಲು ತಮಗೆ ವಿಶೇಷ ವ್ಯವಸ್ಥೆ ಮಾಡಿಕೊಡುವಂತೆ ಸರಕಾರಕ್ಕೆ ಸೂಚಿಸಬೇಕೆಂದು ಕೋರಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಮಹಿಳೆಯರಿಗೆಂದೇ ವಾರದಲ್ಲಿ ಕನಿಷ್ಟ ಮೂರು ದಿನವನ್ನು ಮೀಸಲಿರಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಶಬರಿಮಲೆಗೆ ಭೇಟಿ ನೀಡುವ ಹರಕೆ ಹೊತ್ತಿದ್ದೇವೆ. ಆದರೆ ಅಲ್ಲಿ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಅರ್ಜಿದಾರರರು ಹೈಕೋರ್ಟ್‌ಗೆ ತಿಳಿಸಿದಾಗ, ನಿಮ್ಮನ್ನು ಯಾವುದೇ ಸಮಸ್ಯೆಯಲ್ಲಿ ಸಿಲುಕಿಸಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ, ಸುಪ್ರೀಂಕೋರ್ಟ್‌ನ ಆದೇಶವನ್ನು ಅನುಷ್ಠಾನಗೊಳಿಸಲು ಇರುವ ಆಯ್ಕೆಯ ಬಗ್ಗೆ ತಿಳಿಸುವಂತೆ ಸರಕಾರಕ್ಕೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News