ಜಗತ್ತಿನಲ್ಲಿ ಭಾರತ ತಂತ್ರಜ್ಞಾನದಲ್ಲಿ ಸರಿಸಮವಾಗಿ ನಿಲ್ಲಲು ಮೂಲಪ್ರೇರಣೆ ಟಿಪ್ಪು ಸುಲ್ತಾನ್

Update: 2018-11-24 05:44 GMT

ಧಾರವಾಡ, ನ. 24: ಭಾರತ ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರಗಳೊಂದಿಗೆ ಸರಿಸಮವಾಗಿ ನಿಲ್ಲಲು ಕಾರಣ ರಾಕೆಟ್ ತಂತ್ರಜ್ಞಾನ. ಟಿಪ್ಪು ಸುಲ್ತಾನ್‌ ಇದಕ್ಕೆ ಮೂಲ ಪ್ರೇರಣೆ ಎಂದು ಇಸ್ರೋ ಮಾಜಿ ಅಧ್ಯಕ್ಷ, ಪದ್ಮಶ್ರೀ ಡಾ. ಎ.ಎಸ್‌.ಕಿರಣ್ ಕುಮಾರ್ ಹೇಳಿದರು.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಸುವರ್ಣ ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಿರುವ ‘ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ’ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಅಂದು ಟಿಪ್ಪು ಯುದ್ಧಕ್ಕೆ ಬಳಸಿದ್ದ ರಾಕೆಟ್ ತಂತ್ರಜ್ಞಾನದ ಮೇಲೆ ಪಾಶ್ಚಾತ್ಯರು ಹೆಚ್ಚಿನ ಸಂಶೋಧನೆ ನಡೆಸಿ ಉಪಗ್ರಹ ಮತ್ತು ಮಾನವನನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದರು. 1963ರಲ್ಲಿ ಭಾರತವೂ ಸ್ವಾವಲಂಬಿಯಾಗಿ ರಾಕೆಟ್ ಅಭಿವೃದ್ಧಿಪಡಿಸಿತು. ಇದರ ಪರಿಣಾಮವಾಗಿ ಇಂದು ಕ್ರಯೊಜೆನಿಕ್ ಎಂಜಿನ್‌ ರಾಕೆಟ್ ಅಭಿವೃದ್ಧಿಯಾಗಿದೆ ಎಂದರು.

ಟಿಪ್ಪು ಅಭಿವೃದ್ಧಿಪಡಿಸಿದ ರಾಕೆಟ್‌ಗಳನ್ನು, ಈಸ್ಟ್ ಇಂಡಿಯಾ ಕಂಪನಿ ಅಧಿಕಾರಿಗಳು ರಾಕೆಟ್ ಮೂಲಕ ಅಂಚೆ ರವಾನೆಗೆ ಯತ್ನಿಸಿದ್ದರು. ಹೀಗೆ ಜಗತ್ತಿನಲ್ಲಿ ಮೊದಲ ಬಾರಿಗೆ ಭಾರತದಲ್ಲಿ ತಯಾರಾದ ರಾಕೆಟ್‌ ಇಂದು ಇಡೀ ಜಗತ್ತಿನ ವಿಜ್ಞಾನ ಮತ್ತು ತಂತ್ರಜ್ಞಾನದ ಅಭಿವೃದ್ಧಿಗೆ ಕಾರಣವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಪ ಸಭಾಪತಿ ಬಸವರಾಜ ಹೊರಟ್ಟಿ, ಕವಿವಿ ಕುಲಪತಿ ಪ್ರೊ. ಪ್ರಮೋದ ಗಾಯಿ, ಸಂಸದ ಪ್ರಲ್ಹಾದ ಜೋಶಿ, ಅಕಾಡಮಿ ಅಧ್ಯಕ್ಷ ಪದ್ಮಶ್ರೀ ಡಾ. ಎಸ್.ಕೆ. ಶಿವಕುಮಾರ, ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಪ್ರೊ. ಕೆ.ಬಿ. ಗುಡಸಿ,. ಡಾ. ಎಚ್.ಆರ್. ಕೃಷ್ಣಮೂರ್ತಿ, ಉನ್ನತ ಶಿಕ್ಷಣ ಅಕಾಡಮಿ ನಿರ್ದೇಶಕ ಪ್ರೊ. ಎಸ್.ಎಂ. ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News