ಅಯೋಧ್ಯೆಯಲ್ಲಿ ಧರ್ಮ ಸಭಾ: ಸುಪ್ರೀಂ ಮಧ್ಯಪ್ರವೇಶಿಸಲಿ ಎಂದ ಅಮು ವಿದ್ಯಾರ್ಥಿ ಸಂಘ

Update: 2018-11-24 16:26 GMT

ಅಲಿಗಡ, ನ.24: ಅಯೋಧ್ಯೆ ವಿವಾದವು ವಿಚಾರಣಾಧೀನವಾಗಿದ್ದರೂ ವಿಹಿಂಪ ರವಿವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಧರ್ಮ ಸಭಾವನ್ನು ಆಯೋಜಿಸಿದ್ದು,ಸರ್ವೋಚ್ಚ ನ್ಯಾಯಾಲಯವು ಮಧ್ಯ ಪ್ರವೇಶಿಸಬೇಕೆಂದು ಅಲಿಗಡ ಮುಸ್ಲಿಂ ವಿವಿ ವಿದ್ಯಾರ್ಥಿ ಸಂಘವು ಕೋರಿದೆ.

 ಧರ್ಮ ಸಭಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯುಂಟಾಗಿರುವ ಬಗ್ಗೆ ತಾವು ಭಾರತದ ಮುಖ್ಯ ನ್ಯಾಯಾಧೀಶರು(ಸಿಜೆ ಐ),ಉತ್ತರ ಪ್ರದೇಶದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಬರೆಯುತ್ತಿರುವುದಾಗಿ ಪದಾಧಿಕಾರಿಗಳು ಶುಕ್ರವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

 ವಿಹಿಂಪ ತನ್ನ ರಾಮಮಂದಿರ ನಿರ್ಮಾಣ ಕಾರ್ಯಕ್ರಮವನ್ನು ಮುಂದುವರಿಸಿದರೆ ರಾಜ್ಯದಲ್ಲಿ ಖಂಡಿತವಾಗಿಯೂ ಶಾಂತಿ ಕದಡಲಿದೆ ಮತ್ತು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ಭೀತಿಯ ವಾತಾವರಣ ಉಂಟಾಗಿದೆ ಎಂದು ಹೇಳಿದ ಕಾರ್ಯದರ್ಶಿ ಹುಝೈಫಾ ಆಮಿರ್ ಅವರು,ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಪ್ರಶ್ನಿಸುವ ಮೂಲಕ,ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮುರಿದುಬಿದ್ದರೆ ಕೇಂದ್ರ ಮತ್ತು ರಾಜ್ಯಸರಕಾರಗಳೇ ನೈತಿಕವಾಗಿ ಹೊಣೆಯಾಗುತ್ತವೆ ಎಂದರು.

ಮಂದಿರ ವಿವಾದವು ನಂಬಿಕೆಯ ವಿಷಯವಾಗಿದೆ ಮತ್ತು ಅದು ದೇಶದ ಹಾಲಿ ಕಾನೂನು ವ್ಯವಸ್ಥೆಗೆ ಅತೀತವಾಗಿದೆ ಎಂಬ ನೆಪದಲ್ಲಿ ಭಾರತೀಯ ಸಂವಿಧಾನದೊಡನೆ ಆಟವಾಡಲು ವಿಚ್ಛಿದ್ರಕಾರಿ ಶಕ್ತಿಗಳಿಗೆ ಅವಕಾಶ ನೀಡದಂತೆ ಅಮುಸು ಸಿಜೆಐ ಅವರನ್ನು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News