ಧರ್ಮಾಂಧತೆಯಿಂದ ಸಮಾಜಕ್ಕೆ ಹಾನಿ: ಶಾಂತಮಲ್ಲಿಕಾರ್ಜುನ ಸ್ವಾಮೀಜಿ

Update: 2018-11-25 18:37 GMT

ಮಡಿಕೇರಿ. ನ.25: ಧರ್ಮಗಳು ಮನಸ್ಸುಗಳನ್ನು ಕಟ್ಟುವ ಕೆಲಸ ನಿರ್ವಹಿಸುತ್ತವೆ. ಧರ್ಮಾಂಧತೆ ಸಮಾಜಕ್ಕೆ ಹಾನಿಯನ್ನು ಉಂಟು ಮಾಡುತ್ತದೆ ಎಂದು ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದ್ದಾರೆ.

ಮಡಿಕೇರಿಯ ಕಾವೇರಿ ಹಾಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಶಾಖೆಯ ವತಿಯಿಂದ ಏರ್ಪಡಿಸಲಾಗಿದ್ದ ಸೀರತ್ ಅಭಿಯಾನದ ಪ್ರಯುಕ್ತ ಸದ್ಭಾವನಾ ಸಮಾವೇಶದಲ್ಲಿ ಸಂದೇಶ ನೀಡಿದರು. ಧರ್ಮವನ್ನು ಅರ್ಥೈಸಿಕೊಳ್ಳುವಲ್ಲಿ ಜನರು ವಿಫಲವಾಗುತಿದ್ದಾರೆ. ಧರ್ಮಗಳ ಬೋಧನೆಗಳಾದ ಸಚ್ಚಾರಿತ್ರ್ಯ, ಕೋಮು ಸೌಹಾರ್ದ ಹಾಗೂ ಪರಿಶುದ್ಧ ಜೀವನವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಇಂದು ಸಮಾಜದಲ್ಲಿ ಕಠಿಣತೆ ಇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಸ್ಲಾಂ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಪ್ರವಾದಿ ಮುಹಮ್ಮದ್‌ರು ಪರಸ್ಪರ ಸ್ನೇಹ, ಸಹಬಾಳ್ವೆ, ಪರಸ್ಪರ ವಿಶ್ವಾಸ ಮತ್ತು ಹೃದಯ ವೈಶಾಲ್ಯತೆಯನ್ನು ಜಗತ್ತಿಗೆ ಸಾರಿದರು. ಪ್ರವಾದಿಗಳ ಉಪದೇಶದಿಂದ ದೂರ ಸರಿದಿರುವುದರಿಂದ ಇಂದು ಸಮಾಜ ತೀವ್ರತರದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಮಾತನಾಡಿ, ಮೂರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಸಂದರ್ಭ ಜನತೆ ಜಾತಿ-ಮತ-ಧರ್ಮವನ್ನು ಮರೆತು ಕೈಜೋಡಿಸಿರುವುದು ಮಾದರಿಯಾಗಿದೆ. ನಮ್ಮ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಉಳಿಸಿಕೊಂಡು ಬಂದಿರುವುದು ಆಶಾದಾಯಕವಾಗಿದೆ. ಸ್ವಯಂ ಸೇವಾ ಸಂಸ್ಥೆಗಳೂ ತಮ್ಮ ಕರ್ತವ್ಯವನ್ನು ಅರಿತು ಕೆಲಸ ನಿರ್ವಹಿಸಿದ್ದು ಆಡಳಿತ ವರ್ಗಕ್ಕೆ ನೆರವಾಯಿತು ಎಂದರು.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಪನ್ನೇಕರ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು. ಸೀರತ್ ಸಂದೇಶ ನೀಡಿದ ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಎಂ.ಎಚ್.ಮುಹಮ್ಮದ್ ಕುಂಞಿ, ಧರ್ಮದ ಜ್ಞಾನದ ಹೊರತಾಗಿ ಧರ್ಮ ರಕ್ಷಣೆಗೆ ಹೊರಟಿರುವವರಿಂದ ಇಂದು ಧರ್ಮವು ಅಪಾಯದ ಸ್ಥಿತಿಯನ್ನು ಎದುರಿಸುತ್ತಿದೆ. ಧರ್ಮದ ವಕ್ತಾರರೆಂದೇ ಹೇಳಿಕೊಳ್ಳುವವರು ದೇವನನ್ನು ಗುರುತಿಸದೆ ಧರ್ಮ ರಕ್ಷಣೆಗೆ ಹೊರಟಿರುವುದು ಆಂತಕಕಾರಿ ಬೆಳವಣಿಗೆಯಾಗಿದೆ. ಧರ್ಮಗಳು ಸಹನೆಯ ಸೌಮ್ಯತೆಯ ಪಾಠವನ್ನು ಕಲಿಸಿದ್ದರೂ ಧರ್ಮ ರಕ್ಷಣೆಗೆ ಹೊರಟಿರುವವರಲ್ಲಿ ಈ ಗುಣಗಳು ಕಂಡು ಬರುತ್ತಿಲ್ಲ. ಇಸ್ಲಾಂ ಮನುಷ್ಯನನ್ನು ಭೂಮಿಯಲ್ಲಿ ದೇವನ ಪ್ರತಿನಿಧಿಯೆಂದು ಪರಿಚಯಿಸಿತು. ಅದ್ದುದರಿಂದಲೇ ಇಸ್ಲಾಮಿನಲ್ಲಿ ಪ್ರತಿ ಮನುಷ್ಯನಿಗೂ ಗೌರವಾರ್ಹವಾದ ಸ್ಥಾನವಿದೆ. ಸಹಜೀವಿಗಳನ್ನು ಗೌರವಿಸುವುದು ಧರ್ಮ ವಿಶ್ವಾಸದ ಭಾಗವೆಂದು ಇಸ್ಲಾಂ ಕಲಿಸುತ್ತದೆ ಎಂದರು

ಮುಖ್ಯ ಅತಿಥಿಗಳಾಗಿದ್ದ ಸಂತ ಮೈಕಲ್ ದೇವಾಲಯದ ಫಾ.ನವೀನ್ ಕುಮಾರ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿ, ಪ್ರೀತಿಯೆಂಬುದೇ ಮನುಷ್ಯ ಬದುಕಿನ ಜೀವಾಳ. ಪರಸ್ಪರ ಪ್ರೀತಿಯ ಹೊರತಾದ ಸಂಬಂಧಕ್ಕೆ ಯಾವುದೇ ಬೆಲೆಯಿಲ್ಲ. ಸಹೋದರತೆಗೆ ಹಿಂದೆಂದಿಗಿಂತಲೂ ಇಂದು ಪ್ರಸ್ತುತತೆ ಹೆಚ್ಚಾಗಿದೆ ಎಂದರು. ಸಮಾವೇಶದಲ್ಲಿ ಪ್ರಕೃತಿ ವಿಕೋಪ ಸಂದರ್ಭ ರಕ್ಷಣಾ ಕಾರ್ಯ ನಿರ್ವಹಿಸಿದ ಮತ್ತು ಆರ್ಥಿಕ ನೆರವು ನೀಡಿ ಜನರ ಮೆಚ್ಚುಗೆಗೆ ಪಾತ್ರರಾದ 15 ಮಂದಿ ರಕ್ಷಣಾ ಕಾರ್ಯಕರ್ತರನ್ನು ಎಚ್.ಆರ್.ಎಸ್. ವತಿಯಿಂದ ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಸುಬೇದಾರ್ ಕುಟ್ಟಂಡ ಯು.ಬೋಪಣ್ಣ, ಮೋಕ್ಷಿತಾ ಗೌರವ್ ಪಟೇಲ್ ಹಾಗೂ ಸುಂಟಿಕೊಪ್ಪದ ಜ.ಸಿ.ಎಂ.ಅಬ್ದುಲ್ ಹಮೀದ್ ಮೌಲವಿ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕ ಯು.ಅಬ್ದುಸ್ಸಲಾಮ್ ಅಧ್ಯಕ್ಷೀಯ ಭಾಷಣ ಮಾಡಿದರು.
ಈಲ್ಲಾ ಅಧ್ಯಕ್ಷ ಸಿ.ಎಚ್.ಅಫ್ಸರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಸಂತೋಷ್ ಕುಡೆಕಲ್, ಶೇಖ್ ಕಲೀಮುಲ್ಲಾ, ಅಮಿನ್ ಹಸನ್, ಬದ್ರಿಯಾ ಮಸೀದಿ ಅಧ್ಯಕ್ಷ ಎಂ.ಜಿ.ಯೂಸುಫ್ ಹಾಜಿ, ಸೋಲಿಡಾರಿಟಿ ಯೂತ್‌ಮೂವ್‌ಮೆಂಟ್ ಅಧ್ಯಕ್ಷ ಟಿ.ಎ.ಬಶೀರ್ ಅಹ್ಮದ್, ರಾಖಿಮ್ ಮನ್ನಾ, ಜಿ.ಎಚ್.ಮುಹಮ್ಮದ್ ಹನೀಫ್ ವೇದಿಕೆಯಲ್ಲಿದ್ದರು. ಉಮರ್ ಮೌಲವಿ ಪ್ರಾರ್ಥಿಸಿದರು. ಎಂ.ಎಚ್.ಮುಹಮ್ಮದ್ ಮುಸ್ತಫಾ ವಂದಿಸಿದರು. ಜಲೀಲ್ ಮುಕ್ರಿ ಹಾಗೂ ಪಿ.ಕೆ.ಅಬ್ದುಲ್ ರೆಹೆಮಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News