ಹಾಸನದ ಮಾಜಿ ಶಾಸಕ ಎಚ್.ಎಸ್.ಪ್ರಕಾಶ್ ನಿಧನ

Update: 2018-11-27 13:07 GMT

ಬೆಂಗಳೂರು, ನ. 27: ಮಾಜಿ ಶಾಸಕ ಹಾಗೂ ಜೆಡಿಎಸ್‌ನ ಹಿರಿಯ ಮುಖಂಡ ಎಚ್.ಎಸ್.ಪ್ರಕಾಶ್ (67) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನೆಲೆಯಲ್ಲಿ ನ.20ರಂದು ಎಚ್.ಎಸ್.ಪ್ರಕಾಶ್ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಬೆಳಗ್ಗೆ 11:15ರ ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಮೃತರು ಪತ್ನಿ ಲಲಿತಾ ಪ್ರಕಾಶ್, ಕಂದಲಿ ಕ್ಷೇತ್ರದ ಜಿಪಂ ಸದಸ್ಯ ಎಚ್.ಪಿ. ಸ್ವರೂಪ್ ಸೇರಿ ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಣ್ಣಯ್ಯ-ರಂಗಮ್ಮ ದಂಪತಿ ಪುತ್ರರಾದ ಎಚ್.ಎಸ್.ಪ್ರಕಾಶ್(ಹಾಸನ ಸಣ್ಣಯ್ಯ ಪ್ರಕಾಶ್) 1951ರ ಸೆಪ್ಟೆಂಬರ್ 13ರಂದು ಹಾಸನದಲ್ಲಿ ಜನಿಸಿದರು.

ಹಲವು ವರ್ಷಗಳ ಹಿಂದೆ ಯಕೃತ್(ಲಿವರ್) ಮತ್ತು ಮೂತ್ರಪಿಂಡ(ಕಿಡ್ನಿ) ಸಮಸ್ಯೆ ಹಿನ್ನೆಲೆಯಲ್ಲಿ ಬಳಲುತ್ತಿದ್ದ ಪ್ರಕಾಶ್ ಅವರು, ಯಕೃತ್ ಮತ್ತು ಮೂತ್ರಪಿಂಡ ‘ಕಸಿ’ ಮಾಡಿಸಿಕೊಂಡಿದ್ದರು ಎಂದು ಖಾಸಗಿ ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ.

1983ರಲ್ಲಿ ಹಾಸನ ನಗರಸಭಾ ಸದಸ್ಯರಾಗಿ, 1985ರಿಂದ 87ರ ವರೆಗೆ ಹಾಸನ ನಗರಸಭೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಎಚ್.ಎಸ್.ಪ್ರಕಾಶ್, ಹಾಸನದ ಸಂಜೀವಿನಿ ಸಹಕಾರಿ ಆಸ್ಪತ್ರೆ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು ಎಂದು ಹೇಳಲಾಗಿದೆ.

1994ರಲ್ಲಿ ಹಾಸನ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಎಚ್.ಎಸ್.ಪ್ರಕಾಶ್, 1999ರಲ್ಲಿ ಸೋಲು ಕಂಡಿದ್ದರು. ಆ ಬಳಿಕ 2004, 2008 ಹಾಗೂ 2013ರಲ್ಲಿ ಸತತ ಮೂರು ಬಾರಿ ಹಾಸನ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶ್ರೀಯುತರು, 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೋಲು ಕಂಡಿದ್ದರು.

ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಎಚ್.ಎಸ್.ಪ್ರಕಾಶ್, ಕ್ಷೇತ್ರದಲ್ಲಿ ಅತ್ಯಂತ ಜನಪ್ರಿಯರಾಗಿದ್ದರು. ಶಾಸಕರಾಗಿದ್ದ ಅವಧಿಯಲ್ಲೆ ಒಮ್ಮೆ ಜಾಂಡೀಸ್‌ಗೆ ತುತ್ತಾಗಿದ್ದ ಪ್ರಕಾಶ್ ಅವರ ವಿದೇಶದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಆಪ್ತರಾಗಿದ್ದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಸಚಿವರು, ಶಾಸಕರು ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಜನಾನುರಾಗಿ ಹಾಗೂ ಪರೋಪಕಾರಿಯಾಗಿದ್ದ ಎಚ್.ಎಸ್.ಪ್ರಕಾಶ್ ಅವರ ನಿಧನದಿಂದ ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿಯೂ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ’

-ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News